ಕೊಪ್ಪಳ | ಪರಿಶಿಷ್ಟ ಕಾಲೋನಿಯಲ್ಲಿ ದಲಿತರ ಕುಂದುಕೊರತೆ ಸಭೆ
ಕನಕಗಿರಿ: ಪಟ್ಟಣದ 8ನೇ ವಾರ್ಡ್‌ನ ಅಂಬೇಡ್ಕರ್ ವೃತ್ತದ ಬಳಿ ಪಿಐ ವಿ. ನಾರಾಯಣ ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆ ವತಿಯಿಂದ ದಲಿತರ ಕುಂದುಕೊರತೆ ಸಭೆ ರವಿವಾರ ಹಮ್ಮಿಕೊಳ್ಳಲಾಯಿತು.
ಕನಕಗಿರಿ ಪರಿಶಿಷ್ಟ ಮೀಸಲು ಕ್ಷೇತ್ರವಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಅನೇಕ ಕಾಲೋನಿಗಳಿವೆ. ಹೀಗಾಗಿ ದಲಿತರ ಸಭೆ ಏರ್ಪಡಿಸಿ ಅವರ ಸಮಸ್ಯೆಗಳನ್ನು ಆಲಿಸುವುದು ಬಹಳ ಮುಖ್ಯವಾಗಿದೆ ಎಂದರು.
ಯುವ ಮುಂದಾಳು ನೀಲಕಂಠ ಬಡಿಗೇರ್ ಮಾತನಾಡಿ, ನಮ್ಮ ವಾರ್ಡ್ ಅತ್ಯಂತ ಹಿಂದುಳಿದಿದ್ದು, ಅತಿ ಹೆಚ್ಚು ಪರಿಶಿಷ್ಟ ಜಾತಿ ಸಮುದಾಯಗಳಿವೆ. ಇಲ್ಲಿ ಅನೇಕ ಸಮಸ್ಯೆಗಳಿವೆ. ಹಳ್ಳಿಗಳಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಜೀವಂತವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲೆ ಜಾತಿ ದೌರ್ಜನ್ಯಗಳು ನಡೆಯುತ್ತಿವೆ. ಜೂಜು, ಮಟ್ಕಾ, ಇಸ್ಪೀಟ್, ಮದ್ಯಪಾನ, ಕಳ್ಳತನದಂತಹ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇವುಗಳನ್ನು ಕೂಡಲೇ ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ದಲಿತರ ಸಮಸ್ಯೆಗಳಿಗೆ ಪೊಲೀಸ್ ಇಲಾಖೆ ತಕ್ಷಣ ಸ್ಪಂದಿಸಬೇಕು. ವಿದ್ಯಾವಂತ ಯುವಕರು ಹೆಚ್ಚಾಗಿದ್ದು, ಹೈಟೆಕ್ ಗ್ರಂಥಾಲಯದ ಅವಶ್ಯಕತೆ ಇದೆ ಎಂದರು.
ಈ ವೇಳೆ ಪಿಎಸ್ಐ ಉಮೇಶ, ಪೊಲೀಸ್ ಪೇದೆ ಬೈಲಾಪ್ಪ, ಲೋಹಿತ್, ಪ್ರಮುಖರಾದ ಪರಸಪ್ಪ ಗುಂಡೂರು, ಪಾಂಡಪ್ಪ, ಕನಕಪ್ಪ ಮ್ಯಾಗಡೇ, ಹನುಮಂತಪ್ಪ, ಕಂಠಿರಂಗ ಚುಲುವಾದಿ, ಅಮರೇಶ, ಮಲ್ಲಯ್ಯ ಇತರರು ಉಪಸ್ಥಿತರಿದ್ದರು.