ಕುಕನೂರು | ಬಾಲ್ಯವಿವಾಹ : ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ಕುಕನೂರು : ಪಟ್ಟಣದ ಬಾಲಕಿಯನ್ನು ವಿಜಯನಗರ ಜಿಲ್ಲೆಯಲ್ಲಿರುವ ಗ್ರಾಮವೊಂದರ ದೇವಸ್ಥಾನದಲ್ಲಿ ಕುಟುಂಬದವರು ಬಾಲ್ಯವಿವಾಹ ಮಾಡಿಸಿದ್ದಾರೆ ಎಂಬ ದೂರವಾಣಿ ಕರೆಯ ಮೂಲಕ ಸುದ್ದಿ ತಿಳಿದು ಯಲಬುರ್ಗಾ ಶಿಶು ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕುಕನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಳೆದ ವಾರ ಕುಕನೂರು ಪಟ್ಟಣದ ಬಾಲಕಿಯನ್ನು ವಿಜಯನಗರ ಜಿಲ್ಲೆಯಲ್ಲಿರುವ ತಮ್ಮ ಸಂಬಂಧಿಕನ ಜೊತೆ ಮದುವೆ ಮಾಡಿಕೊಡಲಾಗಿತ್ತು.
ಫೋನ್ ಕರೆಯ ಮೂಲಕ ನೀಡಲಾಗಿದ್ದ ಮಾಹಿತಿಯನ್ನು ಆಧರಿಸಿ ಬಾಲಕಿಯ ಮನೆಗೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಆದರೆ ಆ ಬಾಲಕಿ ಊರಲ್ಲಿ ಇರದೇ ಇರುವುದು ಕಂಡು ಬಂದಿದೆ. ಈ ಕುರಿತು ಕುಟುಂಬದವರನ್ನು ವಿಚಾರಿಸಿದಾಗ ಬಾಲ್ಯ ವಿವಾಹ ನಡೆಸಿರುವ ಬಗ್ಗೆ ದೃಢಪಟ್ಟಿದೆ.
ಈ ಹಿನ್ನೆಲೆ ತಪ್ಪಿತಸ್ಥರ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಂದ ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸದ್ಯ ಬಾಲಕಿಯನ್ನು ಕೊಪ್ಪಳ ಜಿಲ್ಲಾ ಬಾಲ ಮಂದಿರದಲ್ಲಿ ಇರಿಸಲಾಗಿದೆ.