ಕುಕನೂರು | ಬೆಣ್ಣಿಗೇರಿ ಕೆರೆಯ 9 ಎಕರೆ ಪ್ರದೇಶದಲ್ಲಿ ಅಕ್ರಮ ಮರಂ ಸಾಗಣೆ ಆರೋಪಿಸಿ ಲೋಕಾಯುಕ್ತರಿಗೆ ದೂರು
ಕುಕನೂರು : ತಾಲೂಕಿನ ತಳಕಲ್ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಬೆಣ್ಣಿಗೇರಿ ಕೆರೆಯ ಸುಮಾರು 9 ಎಕರೆ ಜಮೀನಿನಲ್ಲಿ ಅಕ್ರಮ ಮರಂ ಸಾಗಣೆ ತಡೆಯುವಂತೆ ಒತ್ತಾಯಿಸಿ ನಿವೃತ್ತ ಪ್ರಧ್ಯಾಪಕ ಮತ್ತು ಸಾಮಾಜಿಕ ಹೋರಾಟಗಾರ ಎಸ್.ವಿ.ಸೋಮರಡ್ಡಿ ಅವರು ರಾಜ್ಯ ಲೋಕಾಯುಕ್ತರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಕುಕನೂರು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸ್ಥಳೀಯ ಶಾಸಕ ಬಸವರಾಜ್ ರಾಯರಡ್ಡಿ ಸಹೋದರರ ಪ್ರಭಾವದಿಂದ ಬೆಣ್ಣೆಗೇರಿ ಕೆರೆ ಮತ್ತು ಸುತ್ತಮುತ್ತಲಿನ ಪ್ರದೇಶದ ಮರಂ ಅನ್ನು ಲೂಟಿ ಮಾಡಲಾಗುತ್ತಿದ್ದು, ಇದನ್ನು ತಡೆಯಬೇಕಾದ ಅಧಿಕಾರಿಗಳಿಗೆ ಒತ್ತಡ ತಂತ್ರ ಹಾಕಿಸಿ ಸುಮ್ಮನಾಗಿಸಿದ್ದಾರೆ ಎಂದು ಆರೋಪಿಸಿದರು.
ಇತ್ತೀಚಿಗೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಎಂದು ಪತ್ರ ಬರೆದ ಶಾಸಕ ರಾಯರಡ್ಡಿ ಅವರದ್ದು, ಬೆದರಿಕೆ ಮತ್ತು ಅನುಕೂಲ ಸಿಂದು ನಡೆಯಾಗಿದೆ. ಇದರಲ್ಲಿ ಅಧಿಕಾರಿಗಳನ್ನು ಬೆದರಿಸುವ ತಂತ್ರವಾಗಿದೆಯೇ ಹೊರತು ಗಣಿ ಸಂಪತ್ತಿನ ಲೂಟಿ ತಡೆಯುವ ಉದ್ದೇಶವಿಲ್ಲ ಎಂದು ಎಸ್ ವಿ ಸೋಮರಡ್ಡಿ ಆರೋಪಿಸಿದ್ದಾರೆ.
ಬೆಣ್ಣೆಗೇರಿ ಕೆರೆಯ ಮರಂ ಅನ್ನು ಅಕ್ರಮವಾಗಿ ಸಾಗಿಸಿ ಖಾಸಗಿ ವ್ಯಕ್ತಿಗಳಿಗೆ ಸೇರಿದ ಜಾಗದಲ್ಲಿ ಸಂಗ್ರಹಣೆ ಮಾಡಲಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ನಷ್ಟವಾಗುತ್ತಿದ್ದು, ಇದನ್ನು ತಡೆಯಲು ರಾಜ್ಯ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದೇನೆ ಎಂದು ಎಸ್ ವಿ ಸೋಮರಡ್ಡಿ ಹೇಳಿದರು.