'ಸಣ್ಣ ಘಟನೆ' ಹೇಳಿಕೆ | ನನ್ನ ಹೇಳಿಕೆಯ ಉದ್ದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದ ಸಂಸದ ರಾಜಶೇಖರ ಹಿಟ್ನಾಳ್
ಕೊಪ್ಪಳ: ನಾನು ಸರಿಯಾಗಿಯೇ ಮಾತನಾಡಿದ್ದೇನೆ, ನಾನು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ನನ್ನ ಉದ್ದೇಶ ಮತ್ತು ಕಳಕಳಿ ಸಂಪೂರ್ಣವಾಗಿ ಸರಿಯೇ ಇದೆ. ಅಂಜನಾದ್ರಿಯನ್ನು ಜಗತ್ತಿಗೆ ಪರಿಚಯಿಸುವ ವೇಳೆ ಒಂದು ಘಟನೆಯನ್ನು ಅತಿಯಾಗಿ ವೈಭವೀಕರಿಸುವುದರಿಂದ ಆಂಜನೇಯನ ಭಕ್ತರಿಗೆ ನೋವಾಗಬಹುದು ಎಂಬ ಭಾವನೆಯಿಂದಲೇ ನಾನು ಆ ಮಾತುಗಳನ್ನು ಹೇಳಿದ್ದೇನೆ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ನೆಲದ ವೈಭವ, ಪರಂಪರೆ ಹಾಗೂ ಸಂಸ್ಕೃತಿಯನ್ನು ಒಳಗೊಂಡಿರುವ ಐತಿಹಾಸಿಕ ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿಯನ್ನು ದೇಶ–ವಿದೇಶಗಳಿಗೆ ಪರಿಚಯಿಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅಲ್ಲಿನ ಮೂಲಭೂತ ಸೌಲಭ್ಯಗಳು, ಪ್ರವಾಸಿ ವ್ಯವಸ್ಥೆಗಳ ಕುರಿತು ಸಮಗ್ರ ಪ್ರಚಾರ ನಡೆಸಬೇಕೆಂಬುದೇ ನನ್ನ ಮಾತಿನ ಅರ್ಥವಾಗಿತ್ತು. ಯಾವುದೇ ಅಹಿತಕರ ಘಟನೆಗಳನ್ನು ಕಡೆಗಣಿಸುವ ಉದ್ದೇಶ ನನ್ನದಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಮುಖಂಡರು ನನ್ನ ಹೇಳಿಕೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ‘ಸಣ್ಣ ಘಟನೆ’ ಎಂದು ಹೇಳಿದ ತಕ್ಷಣವೇ ಅದು ನೋವುಂಟುಮಾಡುವ ಘಟನೆ ಎಂಬುದನ್ನೂ ಉಲ್ಲೇಖಿಸಿದ್ದೇನೆ ಎಂದು ಅವರು ತಿಳಿಸಿದರು.
ಈ ಹಿಂದೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಕೇಂದ್ರ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿದ್ದ “ಕೊಪ್ಪಳವನ್ನು ಅನ್ವೇಷಿಸಿ” ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, ಕಳೆದ ವರ್ಷ ಸಣಾಪುರ ಕಾಲುವೆ ದಂಡೆಯ ಬಳಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲಿನ ಅತ್ಯಾಚಾರ ಹಾಗೂ ಪ್ರವಾಸಿಗನ ಕೊಲೆ ಪ್ರಕರಣವನ್ನು ಉಲ್ಲೇಖಿಸಿ, ಆ ಘಟನೆಯನ್ನು ಮಾಧ್ಯಮಗಳು ಅತಿಯಾಗಿ ಬಿಂಬಿಸಿದ್ದರಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹಾನಿಯಾಗಿದೆ ಎಂದು ಹೇಳಿದ್ದುದು ವಿವಾದಕ್ಕೆ ಕಾರಣವಾಗಿತ್ತು.