153.76 ಕೋಟಿ ರೂ. ವೆಚ್ಚದ 28 ಕೆರೆ ತುಂಬಿಸುವ ಯೋಜನೆಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಚಾಲನೆ
ಕೊಪ್ಪಳ : ಗಂಗಾವತಿ ವಿಧಾನಸಭಾ ಕ್ಷೇತ್ರದ ರೈತರ ಬಹುಕಾಲದ ಬೇಡಿಕೆಯಾಗಿದ್ದ 28 ಕೆರೆಗಳನ್ನು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಗುರುವಾರ ಅಧಿಕೃತ ಚಾಲನೆ ದೊರೆಯಿತು. ಸುಮಾರು 153.76 ಕೋಟಿ ರೂ. ವೆಚ್ಚದ ಈ ಯೋಜನೆಯ ಪೈಪ್‌ಲೈನ್ ಕಾಮಗಾರಿಗೆ ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಇಂದರಿಗಿ ಗ್ರಾಮದ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಯೋಜನೆಯಡಿ ಗಂಗಾವತಿ ಹಾಗೂ ಕೊಪ್ಪಳ ತಾಲ್ಲೂಕಿನ ಒಟ್ಟು 28 ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಹರಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಉಡಮಕಲ್, ಹೊಸೂರು, ದನಕನದೊಡ್ಡಿ ಹಾಗೂ ಇಂದರಗಿ ಕೆರೆ ವ್ಯಾಪ್ತಿಯ ಹಲವು ಗ್ರಾಮಗಳ ಕೆರೆಗಳು ಈ ಯೋಜನೆಯ ಲಾಭ ಪಡೆಯಲಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಗಾಲಿ ಜನಾರ್ಧನ ರೆಡ್ಡಿ, ಯೋಜನೆಯಿಂದ ಗಂಗಾವತಿ ಕ್ಷೇತ್ರದ ನೀರಾವರಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಆಗಲಿದ್ದು, ಮಳೆ ಕೊರತೆಯ ಸಂದರ್ಭದಲ್ಲೂ ಕೆರೆಗಳಿಗೆ ನೀರು ಪೂರೈಕೆಯಾಗುವುದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ ಎಂದು ಹೇಳಿದರು.
ಕೃಷಿಗೆ ನಿರಂತರ ನೀರಿನ ಲಭ್ಯತೆ ದೊರೆತು ರೈತರ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದ್ದು, ಕೆರೆಗಳು ತುಂಬುವುದರಿಂದ ಸುತ್ತಮುತ್ತಲಿನ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುವ ಜೊತೆಗೆ ಜಾನುವಾರುಗಳಿಗೆ ನೀರಿನ ಲಭ್ಯತೆ ಹೆಚ್ಚಲಿದೆ. ಅಂತರ್ಜಲ ಮರುಪೂರಣದಿಂದ ಬೋರ್‌ವೆಲ್‌ಗಳ ನೀರಿನ ಮಟ್ಟವೂ ಏರಿಕೆಯಾಗುವ ನಿರೀಕ್ಷೆಯಿದ್ದು, ಪರಿಸರ ಸಮತೋಲನಕ್ಕೂ ಯೋಜನೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಇಂದರಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗರಾಜ, ತುಂಗಭದ್ರಾ ಪ್ರಾಧಿಕಾರದ ಅಧಿಕಾರಿ ಪುನೀತ್, ಮುಖಂಡರಾದ ವಿರುಪಾಕ್ಷಪ್ಪ ಸಿಂಗನಾಳ್, ಡಿ.ಕೆ.ಆಗೋಲಿ, ಮನೋಹರಗೌಡ ಹೇರೂರು, ಯಮನೂರು ಚೌಡ್ಕಿ, ಪ್ರಮುಖರಾದ ದೇವಪ್ಪ ಈಶಪ್ಪ ಭೋವಿ, ಇಂದ್ರೇಶ್ ಹನುಮಂತಪ್ಪ ಭೋವಿ, ಗಾಳೆಪ್ಪ ಮಾದಿಗ, ಹನುಮಂತಪ್ಪ ಹ್ಯಾಟಿ, ಕನಕಪ್ಪ ಪೂಜಾರ್, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.