×
Ad

ಜಿಲ್ಲಾ ಯೋಜನಾ ಸಮಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಹಿನ್ನಡೆಗೆ ಪಕ್ಷದ ಕಾರ್ಯತಂತ್ರದ ವೈಫಲ್ಯ ಕಾರಣ: ಚಂದ್ರಶೇಖರ ನಾಲತ್ವಾಡ್

Update: 2026-01-14 19:34 IST

ಕುಷ್ಟಗಿ: ಮಂಗಳವಾರ ನಡೆದ ಜಿಲ್ಲಾ ಯೋಜನಾ ಸಮಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಎಲ್ಲಾ ಆರು ಸ್ಥಾನಗಳನ್ನು ಗೆಲ್ಲುವಷ್ಟು ಬಹುಮತ ಹೊಂದಿದ್ದರೂ ಕೇವಲ ಎರಡು ಸ್ಥಾನಗಳಿಗೆ ಮಾತ್ರ ಸೀಮಿತವಾಗಿರುವುದು ಪಕ್ಷದ ಕಾರ್ಯತಂತ್ರದ ವೈಫಲ್ಯವನ್ನು ಸ್ಪಷ್ಟಪಡಿಸುತ್ತದೆ ಎಂದು ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್‌ ನಾಲತ್ವಾಡ್ ಹೇಳಿದರು.

ಒಟ್ಟು 96 ಮತದಾರರಲ್ಲಿ 94 ಮತಗಳು ಚಲಾವಣೆಯಾಗಿದ್ದು, ಒಂದು ಮತ ಅಮಾನ್ಯಗೊಂಡಿದೆ. ಮಾನ್ಯವಾದ 93 ಮತಗಳಲ್ಲಿ ಸಿದ್ದೇಶಕುಮಾರ್‌ ಕಲ್ಲಬಾಗಿಲಮಠ ಹಾಗೂ ಈಶಪ್ಪ ಅಮರಪ್ಪ ಮಾತ್ರ ಆಯ್ಕೆಯಾಗಿದ್ದಾರೆ. ಬಹುಮತ ಇದ್ದರೂ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಪಕ್ಷ ವಿಫಲವಾಗಿರುವುದು ಆತ್ಮಪರಿಶೀಲನೆಗೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಚುನಾವಣೆಯ ಘೋಷಣೆಯಾದ ದಿನದಿಂದಲೇ ಸಮಗ್ರ ಹಾಗೂ ಸ್ಪಷ್ಟ ಕಾರ್ಯತಂತ್ರ ರೂಪಿಸುವಲ್ಲಿ ಪಕ್ಷ ವಿಫಲವಾಗಿದೆ. ಶಾಸಕರು, ಸಂಸದರು ಮತ್ತು ಜಿಲ್ಲಾ ಘಟಕದ ನಡುವೆ ಸಮನ್ವಯದ ಕೊರತೆ ಕಾಣಿಸಿಕೊಂಡಿದೆ. ಮತದಾನಕ್ಕೂ ಮುನ್ನ ಸಭೆಗಳನ್ನು ನಡೆಸಿ ಸೂಕ್ತ ಯೋಜನೆ ರೂಪಿಸಬಹುದಾಗಿದ್ದರೂ, ನಾಯಕತ್ವದಿಂದ ಅಗತ್ಯ ಉತ್ಸಾಹ ಮತ್ತು ಬದ್ಧತೆ ಕಾಣಿಸಲಿಲ್ಲ ಎಂದು ಟೀಕಿಸಿದರು.

ಬಹುಮತ ಇದ್ದರೂ ಗೆಲುವು ಕೈ ತಪ್ಪಿದ ಪರಿಣಾಮ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರು ಮುಜುಗರ ಅನುಭವಿಸುವಂತಾಗಿದೆ. ಸೋಲಿಗೆ ಕಾರಣರಾದವರನ್ನು ಗುರುತಿಸಿ, ಹೈಕಮಾಂಡ್‌ಗೆ ವರದಿ ಸಲ್ಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಚುನಾವಣಾ ಫಲಿತಾಂಶದ ಕುರಿತು ಎಲ್ಲ ಆಸಕ್ತರಿಗೆ ಅವಕಾಶ ನೀಡುವಂತೆ ಸಮಗ್ರ ಪರಾಮರ್ಶೆ ನಡೆಯಬೇಕು. ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಉತ್ತಮ, ವಿದ್ಯಾವಂತ ಹಾಗೂ ಜನಪರ ಕಾಳಜಿ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಗತ್ಯವಿದೆ ಎಂದು ಚಂದ್ರಶೇಖರ್‌ ನಾಲತ್ವಾಡ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News