×
Ad

ಕುಷ್ಟಗಿ | ಹಿರಿಯ ನಾಗರಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ

Update: 2026-01-15 20:39 IST

ಕುಷ್ಟಗಿ : ಗ್ರಾಮದ ಹಿರಿಯ ನಾಗರಿಕರ ಆರೋಗ್ಯ ಕಾಪಾಡುವ ಉದ್ದೇಶದಿಂದ ಹನುಮಸಾಗರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಯಿತು.

ಗ್ರಾಮ ಪಂಚಾಯತ್‌, ಆರೋಗ್ಯ ಇಲಾಖೆ, ಆಯುಷ್ ಇಲಾಖೆ ಹಾಗೂ ಕಲಿಕೆ–ಟಾಟಾ ಟ್ರಸ್ಟ್ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಈ ಶಿಬಿರಕ್ಕೆ ಹಿರಿಯ ನಾಗರಿಕರಿಂದ ಉತ್ತಮ ಸ್ಪಂದನೆ ದೊರೆಯಿತು.

ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಮೂಲಿಮನಿ ಉದ್ಘಾಟಿಸಿದರು. ಆಯುಷ್ ಇಲಾಖೆ ಆರೋಗ್ಯಾಧಿಕಾರಿ (ಕುಷ್ಟಗಿ) ಡಾ. ವಿಜಯಲಕ್ಷ್ಮಿ, ಹನುಮಸಾಗರದ ವೈದ್ಯಾಧಿಕಾರಿ ಡಾ.ದೀಪಿಕಾ, ಆಯುಷ್ ಫಾರ್ಮಸಿ ಅಧಿಕಾರಿ ಸುಧಾಕರ್ (ಕುಷ್ಟಗಿ), ಐಸಿಟಿಸಿ ಕೌನ್ಸಿಲರ್ ಚನ್ನಬಸಪ್ಪ ಹನುಮನಾಳ, ಐಸಿಟಿಸಿ ಲ್ಯಾಬ್ ಟೆಕ್ನಿಷಿಯನ್ ಎ.ಎಸ್. ಅಂತರಗಂಗಿ, ಸಿಎಚ್ಒ ಬೀರಪ್ಪ, ಗ್ರಾಮ ಪಂಚಾಯಿತಿ ಗ್ರಂಥಾಲಯದ ಗ್ರಂಥಪಾಲಕಿ ದುರ್ಗಮ್ಮ ಹಿರೇಮನಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ವಿಜಯಲಕ್ಷ್ಮಿ ಅವರು, ಹಿರಿಯ ನಾಗರಿಕರು ಪ್ರತಿಮಾಸ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯ. ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು ಸಮಯಕ್ಕೆ ಸರಿಯಾಗಿ ಊಟ, ಔಷಧ ಸೇವನೆ ಮಾಡಬೇಕು. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಮೊಣಕಾಲು–ಕುತ್ತಿಗೆ ನೋವು, ಅಸಿಡಿಟಿ, ನಿದ್ರಾಭಂಗ ಹಾಗೂ ಏಕಾಂಗಿತನದಂತಹ ಸಮಸ್ಯೆಗಳಿಂದ ದೂರವಿರಲು ಕಲಿಕೆ–ಟಾಟಾ ಟ್ರಸ್ಟ್ ನೀಡಿರುವ ಉಪಕರಣಗಳನ್ನು ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉದ್ಘಾಟನಾ ಭಾಷಣದಲ್ಲಿ ನಿಂಗಪ್ಪ ಮೂಲಿಮನಿ ಅವರು, ಹಿರಿಯರು ನವಣೆ, ಸಾವಕ್ಕಿ ಮೊದಲಾದ ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಚಹಾ ಸೇವನೆ ಕಡಿಮೆ ಮಾಡಿ, ಕೆಟ್ಟ ಅಭ್ಯಾಸಗಳನ್ನು ತ್ಯಜಿಸಬೇಕು. ಹಿರಿಯ ನಾಗರಿಕರ ಕೇಂದ್ರಕ್ಕೆ ಬಂದು ಹೆಚ್ಚು ಸಮಯವನ್ನು ಉಪಯುಕ್ತವಾಗಿ ಕಳೆಯಬೇಕು. ಕಲಿಕೆ–ಟಾಟಾ ಟ್ರಸ್ಟ್ ಈಗಾಗಲೇ ನೀಡಿರುವ ಆರೋಗ್ಯ ಉಪಕರಣಗಳು ಗ್ರಾಮ ಪಂಚಾಯತ್‌ ಗ್ರಂಥಾಲಯದಲ್ಲಿ ಲಭ್ಯವಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ವೈದ್ಯಾಧಿಕಾರಿ ಡಾ. ದೀಪಿಕಾ ಅವರು ಮಾತನಾಡಿ, ಆರೋಗ್ಯ ಇಲಾಖೆ ಪ್ರತಿ ತಿಂಗಳು ಹಿರಿಯರಿಗಾಗಿ ಬಿಪಿ ಹಾಗೂ ಶುಗರ್ ತಪಾಸಣೆ ನಡೆಸುತ್ತಿದೆ. ಅಗತ್ಯ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಹಿರಿಯರು ಸಮಯಕ್ಕೆ ಸರಿಯಾಗಿ ತಪಾಸಣೆ ಹಾಗೂ ಔಷಧ ಸೇವನೆ ಮಾಡಬೇಕು ಎಂದು ಮನವಿ ಮಾಡಿದರು.

ಐಸಿಟಿಸಿ ಕೌನ್ಸಿಲರ್ ಚನ್ನಬಸಪ್ಪ ಹನುಮನಾಳ ಅವರು ಅಸ್ತಮಾ, ಶ್ವಾಸಕೋಶ ಸಂಬಂಧಿ ರೋಗಗಳು, ಟಿಬಿ ಹಾಗೂ ಎಚ್‌ಐವಿ ಕುರಿತು ಮುಂಜಾಗ್ರತೆ ವಹಿಸುವಂತೆ ತಿಳಿಸಿದರು. 

ಕಲಿಕೆ–ಟಾಟಾ ಟ್ರಸ್ಟ್ ಸಂಯೋಜಕ ಸಿದ್ದಲಿಂಗ ರೆಡ್ಡಿ ಮಾತನಾಡಿದರು.

ಕಾರ್ಯಕ್ರಮದ ನಿರೂಪಣೆಯನ್ನು ಸಿದ್ದಲಿಂಗ ರೆಡ್ಡಿ ವಹಿಸಿದ್ದರು. ಈ ಶಿಬಿರದಲ್ಲಿ ಸುಮಾರು 150ಕ್ಕೂ ಹೆಚ್ಚು ಹಿರಿಯ ನಾಗರಿಕರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News