ಕುರಿ ಕಳ್ಳತನ ತಡೆಯುವಂತೆ ಆಗ್ರಹಿಸಿ ಯಲಬುರ್ಗಾದಲ್ಲಿ ಕುರಿಗಾರರಿಂದ ಪ್ರತಿಭಟನೆ
ಯಲಬುರ್ಗಾ: ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ಕುರಿ ಕಳ್ಳತನ ಪ್ರಕರಣಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ, ಕಳ್ಳತನ ಮಾಡುವ ಸಂಘಟಿತ ಜಾಲವನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕುರಿಗಾರರು ಯಲಬುರ್ಗಾ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಡಿ. 12ರಂದು ಮಧ್ಯರಾತ್ರಿ ಸುಮಾರು ಒಂದು ಗಂಟೆಯ ವೇಳೆಗೆ ಗ್ರಾಮ ಹೊರವಲಯದಲ್ಲಿ ಕುರಿ ಹಟ್ಟಿಗೆ ನುಗ್ಗಿದ ಕಳ್ಳರು, ಕುರಿಗಳ ಬಾಯಿಮುಚ್ಚಿ ಕೈ–ಕಾಲು ಕಟ್ಟಿ ಕಳ್ಳತನ ಮಾಡುವ ಪ್ರಯತ್ನ ನಡೆಸಿದ್ದಾರೆ. ಕಳ್ಳರನ್ನು ಬೆನ್ನುತ್ತಿದ ವೇಳೆ ಅವರು ಚಾಕು ಚೂರಿ ತೋರಿಸಿ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದಾರೆ.
ಘಟನಾ ಸ್ಥಳದಲ್ಲಿ ಬೋಲೊರೋ ಗಾಡಿ ಹಾಗೂ ಮೊಬೈಲ್ ಫೋನ್‌ಗಳನ್ನು ಬಿಟ್ಟು ಕಳ್ಳರು ಪರಾರಿಯಾಗಿದ್ದರೂ, ಇದುವರೆಗೂ ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಬೀರಲಿಂಗೇಶ್ವರ ಕುರಿ ಹಾಗೂ ಉಣ್ಣೆ ಉತ್ಪಾದಕರ ಸಹಕಾರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಶ್ರೀಭಕ್ತ ಕನಕದಾಸ ವೃತ್ತದಿಂದ ರಾಣಿ ಕಿತ್ತೂರ ಚೆನ್ನಮ್ಮ ವೃತ್ತದವರೆಗೆ ಶಾಂತಿಯುತ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಹಾಗೂ ಸಿಪಿಐ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬೀರಲಿಂಗೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ಭಜಂತ್ರಿ, ಉಪಾಧ್ಯಕ್ಷ ಶಿವಪ್ಪ ದಂಡಿನ, ಕಾರ್ಯದರ್ಶಿ ದ್ಯಾಮಣ್ಣ ಪರಂಗಿ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ರಾಜಶೇಖರ ಶ್ಯಾಗೋಟಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ಅಧ್ಯಕ್ಷ ಶರಣಬಸಪ್ಪ ದಾನಕೈ, ಶೇಖರ ಗುರಾಣಿ, ಬಸವರಾಜ ಗುಳಗುಳಿ, ದೊಡ್ಡಯ್ಯ ಗುರುವಿನ, ಶಿವು ರಾಜೂರ, ದೇವಪ್ಪ ಬನಪ್ಪನವರ, ದೇವಪ್ಪ ಪರಂಗಿ, ರೇವಣಪ್ಪ ಹಿರೇಕುರಬರ, ನೀಲನಗೌಡ ತಳವಗೇರಿ ಹಾಗೂ ಇತರರು ಉಪಸ್ಥಿತರಿದ್ದರು.