×
Ad

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಿಗೆ ಕಿರುಕುಳ : ಕೇಂದ್ರದ ವಿರುದ್ಧ ಉಗ್ರಪ್ಪ ಆಕ್ರೋಶ

Update: 2025-12-21 19:56 IST

ಕೊಪ್ಪಳ. ಡಿ.21: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ರಾಜಕೀಯ ಒತ್ತಡಕ್ಕೆ ಮಣಿದು, ಈಡಿ ಮೂಲಕ ಪ್ರಧಾನಿ ನರೇಂದ್ರ ಮೋದಿ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ದಾಳಿ ಮಾಡಿಸಿದ್ದಾರೆ. ಇದು ಸ್ವಾತಂತ್ರ್ಯ ಚಳವಳಿಗೆ ಮಾಡುತ್ತಿರುವ ಅಪಚಾರ ಎಂದು ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.

ನಗರದ ಕಾಂಗ್ರೆಸ್ ಜಿಲ್ಲಾ ಕಾರ್ಯಾಲಯದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಲ್ಲ. ಕಾನೂನೂ ಪಾಲಿಸದೆ ರಾಜಕೀಯ ಒತ್ತಡಕ್ಕೆ ಮಣಿದು ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮೇಲೆ ಹತಾಶರಾದ ಬಿಜೆಪಿಗರು ಇಡಿ ಮೂಲಕ ದಾಳಿ ಮಾಡಿಸುತ್ತಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಗಾಂಧೀಜಿ, ಜವಾಹರಲಾಲ್ ನೆಹರು 5 ಸಾವಿರ ಹೋರಾಟಗಾರರು ಸೇರಿ ಪ್ರಾರಂಭಿಸಿದ ಪತ್ರಿಕೆಯ ವಿರುದ್ಧ ದಾಳಿ ಮಾಡಿಸಿದ್ದಾರೆ. ಪ್ರಕರಣ ದಾಖಲಿಸದೆ ದಾಳಿ ಮಾಡಿದ್ದಕ್ಕೆ ದಿಲ್ಲಿಯ ವಿಶೇಷ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ರಾಜಕೀಯ ಸೇಡಿನಿಂದ ಈಡಿ ಪ್ರಕರಣ ದಾಖಲಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ ಎಂದರು.

ಆರೆಸ್ಸೆಸ್‌ ಸಂಘಟನೆಯನ್ನೇಕೆ ನೋಂದಾಯಿಸಿಲ್ಲ?. ಅಲ್ಲಿ ಲಕ್ಷಾಂತರ ಕೋಟಿ ಗುರುದಕ್ಷಿಣಿ ರೂಪದಲ್ಲಿ ಪಡೆಯುತ್ತಿದ್ದು, 3 ಸಾವಿರಕ್ಕೂ ಹೆಚ್ಚು ಪೂರ್ಣಾವಧಿ ಕಾರ್ಯಕರ್ತರಿದ್ದಾರೆ. ಇವರಿಗೆ ಹೇಗೆ ವೇತನ ಪಾವತಿಸುತ್ತೀರಿ. ಇದರ ಸಂಪೂರ್ಣ ಲೆಕ್ಕ ಎಲ್ಲಿದೆ? ಇದನ್ನೇ ದೇಶದ್ರೋಹ ಎನ್ನುತ್ತಾರೆ ಎಂದು ಅವರು ಹೇಳಿದರು.

ಮನರೇಗಾ ಹೆಸರು ಬದಲಾಯಿಸಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವರು ರಾಜೀನಾಮೆ ಕೊಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಫೆವಿಕೋಲ್ ಹಾಕಿಕೊಂಡು, ಅಧಿಕಾರಕ್ಕಾಗಿ ಕುರ್ಚಿಗೆ ಅಂಟಿಕೊಂಡಿದ್ದಾರೆ. ಮಹಾತ್ಮ ಗಾಂಧೀಜಿ, ಸಂವಿಧಾನದ ಬಗ್ಗೆ ಬದ್ಧತೆ ಇದ್ದರೆ ರಾಜೀನಾಮೆ ಕೊಟ್ಟು ದೇಶದ ಜನರ ಕ್ಷಮೆ ಕೇಳಬೇಕು. ಇಲ್ಲವಾದರೆ ದೇಶದ ಜನ ಪ್ರಬುದ್ಧರಿದ್ದು, ಮುಂಬರುವ ಚುನಾವಣೆಯಲ್ಲಿ ಕಿತ್ತೊಗೆಯುತ್ತಾರೆ ಎಂದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ಇಟ್ಟಂಗಿ, ಅಕ್ಬರ್ ಪಾಶಾ ಪಲ್ಟನ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಗೊಂಡಬಾಳ, ಕೆಪಿಸಿಸಿ ವಕ್ತಾರೆ ಶೈಲಜಾ ಹಿರೇಮಠ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಜಿ.ಪಂ.ಮಾಜಿ ಸದಸ್ಯ ಪ್ರಸನ್ನ ಗಡಾದ, ಕಿಶೋರಿ ಬೂದನೂರ ಇದ್ದರು.

ರಾಮ ಉತ್ತಮ ಸಮಾಜಕ್ಕಾಗಿ ಕೆಲಸ ಮಾಡಿದ್ದಾನೆ. ರಾಮನ ಆಶಯದಂತೆ ಬಿಜೆಪಿಯವರು ನಡೆದುಕೊಳ್ಳುವುದಿಲ್ಲ. ತನ್ನ ಶ್ರೀಮತಿಯನ್ನೇ ರಕ್ಷಣೆ ಮಾಡದ ಪ್ರಧಾನಿ ನರೇಂದ್ರ ಮೋದಿಗೆ ರಾಮನ ಹೆಸರೇಳಲು ಅರ್ಹತೆ ಇದೆಯಾ?. ರಾಮನು ಜಾತಿರಹಿತ, ವರ್ಗರಹಿತ, ಸಮಪಾಲು, ಸಮ ಬಾಳು, ಸಮಾನ ಅವಕಾಶದ ಸಮಾಜ ಕಟ್ಟಿದ್ದರು ಎಂದು ವಾಲ್ಮೀಕಿ ರಾಮಾಯಣದ ಮೂಲಕ ತಿಳಿಸಿದ್ದಾರೆ. ಮೋದಿ ತಂಡವು ರಾಮನ ವಿಚಾರಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ರಾಮನ ಆಶಯಕ್ಕೆ ಬದ್ಧವಾಗಿರುವ ಪಕ್ಷ ಕಾಂಗ್ರೆಸ್. ಬಿಜೆಪಿಯು ಓಟಿಗಾಗಿ ರಾಮನ ಹೆಸರೇಳುತ್ತಾರೆ. ರಾಮನ ಹೆಸರಲ್ಲಿ ಹೊಸ ಕಾರ್ಯಕ್ರಮ ರೂಪಿಸಬಹುದಿತ್ತು. ಗಾಂಧೀಜಿ ಹೆಸರನ್ನು ಬದಲಿಸಲು ವಿಕಸಿತ ಭಾರತ ವಿ ರಾಮ್ ಜಿ ಬಿಲ್ ತಂದಿದ್ದಾರೆ. ಇದು ಜನರಿಗೆ ಅರ್ಥವೇ ಆಗುವುದಿಲ್ಲ.

-ವಿ.ಎಸ್.ಉಗ್ರಪ್ಪ, ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News