ಕುಕನೂರು: ಪಟ್ಟಣದ ಗದಗ ರಸ್ತೆಯ 7ನೇ ವಾರ್ಡ್‌ನ ಕೋಳಿಪೇಟೆ- ಕಿಲ್ಲೆದ ಓಣಿ ಬಡಾವಣೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯ ಘಟಕವನ್ನು ಮಂಗಳವಾರ ಉದ್ಘಾಟಿಸಲಾಯಿತು.

ಖನಿಜ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಯೋಜನೆಯಡಿ 2019–20 ಹಾಗೂ 2020–21ನೇ ಸಾಲಿನಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದ್ದು, ಅಂದಾಜು 99.95 ಲಕ್ಷ ರೂ. ವೆಚ್ಚದಲ್ಲಿ ಕೊಪ್ಪಳದ ನಿರ್ಮಿತಿ ಕೇಂದ್ರದ ಮೂಲಕ ಅನುಷ್ಠಾನಗೊಳಿಸಲಾಗಿದೆ.

ಈ ವೇಳೆ ಕಾಂಗ್ರೆಸ್ ಮುಖಂಡ ಸಿದ್ದಯ್ಯ ಕಳ್ಳಿಮಠ ಮಾತನಾಡಿ, ಬಡಾವಣೆಯ ಬಹುದಿನಗಳ ಬೇಡಿಕೆ ಈಡೇರಿರುವುದು ಸಂತಸದ ಸಂಗತಿ. ಸಾರ್ವಜನಿಕರು ಬಯಲು ಶೌಚ ತ್ಯಜಿಸಿ, ನೂತನ ಶೌಚಾಲಯದ ಸದುಪಯೋಗ ಪಡೆದುಕೊಳ್ಳಬೇಕು. ಅದರ ಸ್ವಚ್ಛತೆ ಕಾಪಾಡುವ ಜವಾಬ್ದಾರಿಯನ್ನೂ ವಹಿಸಬೇಕು ಎಂದರು.

ಮತ್ತೋರ್ವ ಕಾಂಗ್ರೆಸ್ ನ ಹಿರಿಯ ಮುಖಂಡ ಸತ್ಯನಾರಾಯಣಪ್ಪ ಹರಪ್ಪನಹಳ್ಳಿ ಮಾತನಾಡಿ, ಬಡಾವಣೆಯಲ್ಲಿ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯದ ಅಗತ್ಯವಿತ್ತು. ಇದೀಗ ಬೇಡಿಕೆ ಈಡೇರಿದ್ದು, ಸಾರ್ವಜನಿಕರು ಶೌಚಾಲಯವನ್ನು ಸಮರ್ಪಕವಾಗಿ ಬಳಸುವುದರ ಜತೆಗೆ ಸ್ವಚ್ಛತೆಯನ್ನೂ ಕಾಪಾಡಬೇಕು ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಗಗನ ನೋಟಗಾರ್ ಮಾತನಾಡಿ, ವಾರ್ಡ್‌ನಲ್ಲಿ ಸಾರ್ವಜನಿಕ ಶೌಚಾಲಯದ ಅಗತ್ಯವನ್ನು ಮನಗಂಡು ಕ್ಷೇತ್ರದ ಶಾಸಕ ಹಾಗೂ ಸಚಿವ ಬಸವರಾಜ ರಾಯರಡ್ಡಿ ಅವರು ಮುತುವರ್ಜಿ ವಹಿಸಿ ಸೌಲಭ್ಯ ಕಲ್ಪಿಸಿದ್ದಾರೆ. ವಿಶೇಷವಾಗಿ ಮಹಿಳೆಯರು ಮತ್ತು ವೃದ್ಧರ ಆರೋಗ್ಯದ ದೃಷ್ಟಿಯಿಂದ ಇದು ಅಗತ್ಯವಾಗಿತ್ತು. ಈ ಶೌಚಾಲಯವು ವಾರ್ಡ್‌ಗೆ ಮಾತ್ರ ಸೀಮಿತವಾಗದೆ ಪಟ್ಟಣದ ಎಲ್ಲ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವುದರ ಜತೆಗೆ ಸ್ವಚ್ಛತೆ ಮತ್ತು ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಸಂಗಮೇಶ ಗುತ್ತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ್, ಪ ಪಂ. ಅಧ್ಯಕ್ಷೆ ಲೀಲಾವತಿ ಮುಧೋಳ್, ಸ್ಥಾಯಿ ಸಮಿತಿ ಅಧ್ಯಕ್ಷ ಸಿರಾಜ್ ಕರಮುಡಿ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಪ್ರಶಾಂತ ಆರ್. ಬೆರಳಿನ, ಮುತ್ತು ವಾಲ್ಮೀಕಿ, ರಸೀದ್ ಮುಬಾರಕ್, ರುದ್ರಪ್ಪ ಕರಿಗಾರ್, ರಹೀಮ್ಸಾಬ್ ಮುಕ್ಕಪ್ಪನವರ, ನಿರ್ಮಿತಿ ಕೇಂದ್ರದ ಅಧಿಕಾರಿ ಮಹದೇವಪ್ಪ ಸೇರಿದಂತೆ ಬಡಾವಣೆಯ ಮಹಿಳೆಯರು, ಮಕ್ಕಳು, ಹಿರಿಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor