ಮತ್ತೊಮ್ಮೆ ಶಿವರಾಜ್ ತಂಗಡಗಿಗೆ ಒಲಿದ ಸಚಿವ ಸ್ಥಾನ

Update: 2026-08-03 13:52 IST

ಕನಕಗಿರಿ : ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಿವರಾಜ್ ಸಂಗಪ್ಪ ತಂಗಡಗಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟದಲ್ಲಿ ಈಗಾಗಲೇ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈಗ ಮತ್ತೆ ಸಿಎಂ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಮತ್ತೊಮ್ಮೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

1971ರ ಜೂನ್ 10ರಂದು ಜನಿಸಿದ ಶಿವರಾಜ್ ತಂಗಡಗಿ ಅವರು ಇಲಕಲ್‌ನ ಎಸ್‌.ವಿ.ಎಂ ಕಾಲೇಜಿನಲ್ಲಿ ಬಿ.ಎಸ್‌ಸಿ. ವ್ಯಾಸಂಗ ಮಾಡಿದ್ದು, ಕೃಷಿ ಹಾಗೂ ಸ್ವಂತ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ.

2008ರಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕನಕಗಿರಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಸಚಿವರಾಗಿದ್ದರು. 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೊಮ್ಮೆ ಗೆದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ಸಚಿವ ಸಂಪುಟದಲ್ಲಿ ಅಲ್ಪಾವಧಿಗೆ ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ 1,06,164 ಮತಗಳನ್ನು ಪಡೆದು, ಬಿಜೆಪಿ ಅಭ್ಯರ್ಥಿ ಬಸವರಾಜ ಢಡೇಸುಗೂರ ಅವರನ್ನು 42,632 ಮತಗಳ ಅಂತರದಿಂದ ಸೋಲಿಸಿ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾದರು. ನಂತರ 2023ರ ಮೇ 27ರಂದು ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಕನಕಗಿರಿ ಕ್ಷೇತ್ರದ ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡಿರುವ ಅವರು ತಂಗಡಗಿ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅನುಭವ ಹಾಗೂ ಜಿಲ್ಲೆಯಲ್ಲಿನ ರಾಜಕೀಯ ಪ್ರಭಾವದ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿಯೂ ಪ್ರಮುಖ ಖಾತೆ ಪಡೆಯುವ ಸಾಧ್ಯತೆ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News