Koppal | ಲಂಚಕ್ಕೆ ಬೇಡಿಕೆ ಆರೋಪ : ಕನಕಗಿರಿ ಪ.ಪಂ ಮುಖ್ಯಾಧಿಕಾರಿಯ ಅಮಾನತ್ತಿಗೆ ಡಿಸಿ ಶಿಪಾರಸು
ಕನಕಗಿರಿ:ಲೇಔಟ್ ಒಂದರ ಅನುಮೋದನೆಗಾಗಿ 3 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿರುವ 44.09 ಸೆಕೆಂಡ್ ಆಡಿಯೋ ವೈರಲ್ ಪ್ರಕರಣ ಸಂಬಂಧಿಸಿದ ವರದಿಯನ್ನು ʼವಾರ್ತಾ ಭಾರತಿʼ ವರದಿಯನ್ನು ಪ್ರಕಟಿಸಿತ್ತು. ಇದನ್ನು ಆಧರಿಸಿ ಕೊಪ್ಪಳ ಜಿಲ್ಲಾಧಿಕಾರಿ ಕನಕಗಿರಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲಕ್ಷ್ಮಣ್ ಕಟ್ಟಿಮನಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಾಧಿಕಾರಿ ಹುದ್ದೆಯಿಂದ ಬಿಡುಗಡೆಗೊಳಿಸಿ ಅಮಾನತು ಮಾಡುವಂತೆ ಶಿಪಾರಸ್ಸು ಮಾಡಿದ್ದಾರೆ.
ಏನಿದು ಪ್ರಕರಣ?:
ಕನಕಗಿರಿ ಪ.ಪಂ. ನ ಮುಖ್ಯಾಧಿಕಾರಿಯಾಗಿದ್ದ ಲಕ್ಷ್ಮಣ್ ಕಟ್ಟಿಮನಿ ಅವರು ಲೇಔಟ್ ಅನುಮೋದನೆಗಾಗಿ ಮಾಲಕರೊಬ್ಬರಿಗೆ 3 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆನ್ನಲಾದ ದೂರವಾಣಿಯ ಕರೆಯ ಆಡಿಯೋ ಒಂದು ವೈರಲ್ ಆಗಿತ್ತು. ಮುಖ್ಯಾಧಿಕಾರಿಗಳು ಸರ್ಕಾರಿ ನೌಕರನಿಗೆ ತಕ್ಕ ರೀತಿಯಲ್ಲಿ ವರ್ತಿಸದೇ, ಭ್ರಷ್ಟಾಚಾರದ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಸಲ್ಲಿಸಿದ ಪ್ರಾಥಮಿಕ ತನಿಖಾ ವರದಿಯ ಮತ್ತು ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗಳ ಆಧಾರದ ಮೇಲೆ ತನಿಖೆ ಪೂರ್ಣಗೊಳ್ಳುವವರೆಗೆ ಮತ್ತು ಮುಂದಿನ ಆದೇಶದವರೆಗೆ ಕರ್ತವ್ಯ ದಿಂದ ಬಿಡುಗಡೆ ಗೊಳಿಸುವಂತೆ ಆದೇಶಿಸಿದ್ದಾರೆ.
ಮುಖ್ಯಾಧಿಕಾರಿ ಹುದ್ದೆಗೆ ಹೆಚ್ಚುವರಿ ಉಸ್ತುವಾರಿಯನ್ನಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರ್ ವರಿಗೆ ವಹಿಸಲಾಗಿದೆ.
ಆಡಿಯೋದಲ್ಲಿ ಏನಿತ್ತು?:
ಮುಖ್ಯಾಧಿಕಾರಿಗಳದ್ದು ಎನ್ನಲಾದ ವೈರಲ್ ಆಡಿಯೋದಲ್ಲಿ, "ನನ್ನ-ನಿನ್ನ ಅಂಡರ್ ಸ್ಟಾಂಡಿಂಗ್. 3 ಲಕ್ಷ ಬೇಕು. ಇದು ಯಾರಿಗೂ ಗೊತ್ತಾಗಬಾರದು. ತುಂಬಾ ಅರ್ಜೆಂಟ್ ಇದೆ" ಎಂದು ಹಣ ಕೇಳಿರುವುದು ಕೇಳಿ ಬಂದಿತ್ತು. ಈ ಆಡಿಯೋ ತಾಲೂಕಿನಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು.
ಲಕ್ಷ್ಮಣ್ ಕಟ್ಟಿಮನಿ ಅವರು ಲೇಔಟ್ ಅನುಮೋದನೆಗಾಗಿ ಮಾಲೀಕನೊಬ್ಬನಿಗೆ 3 ಲಕ್ಷಗಳ ಹಣದ ಬೇಡಿಕೆ ಇಟ್ಟಿರುವ ಕುರಿತು ದಿನಪತ್ರಿಕೆಗಳಲ್ಲಿ ಹಾಗು ಸುದ್ದಿ ವಾಹಿನಿಗಳಲ್ಲಿ ವರದಿಯಾಗಿತ್ತು. ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಕಾರಣ ಕೇಳಿ ನೋಟೀಸ್ ನೀಡಲಾಗಿತ್ತು. ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ವೃತಿ ನೈತಿಕತೆಯನ್ನು ಮರೆತು ಕರ್ತವ್ಯ ಶ್ರದ್ಧೆಯನ್ನು ಹೊಂದದೇ ಹಣದ ಬೇಡಿಕೆ ಇಟ್ಟು ಸರ್ಕಾರಿ ನೌಕರನಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿದ್ದು, ಭ್ರಷ್ಟತನದ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ಆಧರಿಸಿ, ಸದರಿ ನೌಕರರನ್ನು ವಿಚಾರಣೆಯನ್ನು ಕಾಯ್ದಿರಿಸಿ ಕರ್ನಾಟಕ ಸಿವಿಲ್ ಸೇವಾ ನಿಯಮಗಳನ್ವಯ ಸೇವೆಯಿಂದ ಅಮಾನುತುಗೊಳಿಸಬೇಕು ಎಂದು ಕೋರಿ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರಿಗೆ ಜಿಲ್ಲಾಧಿಕಾರಿಗಳು ಶಿಫಾರಸ್ಸು ಮಾಡಲಾಗಿದೆ.
ಸುರೇಶ್ ಇಟ್ನಾಳ್, ಕೊಪ್ಪಳ ಜಿಲ್ಲಾಧಿಕಾರಿ
ಭ್ರಷ್ಟ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಂಡ ಜಿಲ್ಲಾಡಳಿತದ ಕ್ರಮ ಸ್ವಾಗತಾರ್ಹ. ಇನ್ನೂ ಆಳವಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು.
ಶೇಷಪ್ಪ ಪೂಜಾರ, ಪ.ಪಂ ಸದಸ್ಯರು ಕನಕಗಿರಿ