Koppal | ಲಂಚಕ್ಕೆ ಬೇಡಿಕೆ ಆರೋಪ: ಪ.ಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅಮಾನತು
ಕನಕಗಿರಿ: ಲೇಔಟ್ ಅನುಮೋದನೆಗೆ 3 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಪಟ್ಟಣ ಪಂಚಾಯಿತಿಯ ಮಾಜಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅವರನ್ನು ರಾಜ್ಯ ಪೌರಾಡಳಿತ ನಿರ್ದೇಶನಾಲಯ ಸೋಮವಾರ ಅಮಾನತುಗೊಳಿಸಿದೆ.
ಜುಲೈ 20ರಂದು ವಾರ್ತಾಭಾರತಿ ಪತ್ರಿಕೆಯಲ್ಲಿ "ಲೇಔಟ್ ಅನುಮೋದನೆಗೆ 3 ಲಕ್ಷ ರೂ. ಬೇಡಿಕೆ: ಕನಕಗಿರಿ ಪಪಂ ಮುಖ್ಯಾಧಿಕಾರಿಯ ಆಡಿಯೋ ವೈರಲ್" ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು.
ಈ ವರದಿಯ ಬೆನ್ನಲ್ಲೇ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಜುಲೈ 31ರಂದು ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಕ್ರಮಕ್ಕೆ ಶಿಫಾರಸು ಮಾಡಿದ್ದರು.
ಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ನಡೆಸಿದ ಪೌರಾಡಳಿತ ನಿರ್ದೇಶನಾಲಯ, ಕರ್ನಾಟಕ ಸಿವಿಲ್ ಸೇವಾ ನಿಯಮಗಳನ್ವಯ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಸೋಮವಾರ ರಂದು ಆದೇಶ ಹೊರಡಿಸಿದೆ.
ಅಮಾನತು ಅವಧಿಯಲ್ಲಿ ಅವರನ್ನು ಹೊಸಪೇಟೆ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರ ಹುದ್ದೆಗೆ ವರ್ಗಾಯಿಸಲಾಗಿದೆ. ಅವರ ವಿರುದ್ಧ ಇಲಾಖಾ ವಿಚಾರಣೆಯೂ ಜಾರಿಯಲ್ಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.