×
Ad

ಜವನಗಹಳ್ಳಿಗುಡ್ಡದಲ್ಲಿ ಮೃತದೇಹ ಸುಟ್ಟ ಪ್ರಕರಣ; ಮದುವೆಗೆ ಒತ್ತಾಯಿಸಿದ ಪ್ರೇಯಸಿಯ ಕೊಂದು ತಾಯಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಆರೋಪಿ

Update: 2026-07-06 23:50 IST

ಮಳವಳ್ಳಿ : ಜವನಗಹಳ್ಳಿಗುಡ್ಡದ ಸುಟ್ಟ ಮೃತದೇಹ ಪ್ರಕರಣವನ್ನು ಬೆಳಕವಾಡಿ ಪೊಲೀಸರು ಭೇದಿಸಿದ್ದಾರೆ. ಮದುವೆಗೆ ಒತ್ತಾಯಿಸುತ್ತಿದ್ದಳು ಎಂಬ ಕಾರಣಕ್ಕೆ ನಳಿನಿ ಎಂಬ ಯುವತಿಯನ್ನು ಕೊಲೆ ಮಾಡಿ ಮೃತದೇಹ ಸುಟ್ಟುಹಾಕಿದ್ದ ಆರೋಪಿ ರಾಜಶೇಖರ್, ಕೊನೆಗೆ ತಾಯಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.

ವಾಚ್‌ನಿಂದ ಶುರುವಾದ ತನಿಖೆ: ಜೂ.24ರಂದು ಬೆಳಕವಾಡಿ ಠಾಣೆ ವ್ಯಾಪ್ತಿಯ ಜವನಗಹಳ್ಳಿಗುಡ್ಡದ ಬಳಿ ಸಂಪೂರ್ಣ ಸುಟ್ಟು ಕರಕಲಾಗಿದ್ದ ಮಹಿಳೆಯ ಶವ ಪತ್ತೆಯಾಗಿತ್ತು. ಸ್ಥಳದಲ್ಲಿ ಸಿಕ್ಕಿದ್ದ ಮಹಿಳೆಯ ಕೈಗಡಿಯಾರ, ಉಂಗುರ, ಹೇರ್‌ಕ್ಲಿಪ್ ಮತ್ತು ಮನೆಯ ಕೀಯೇ ಪೊಲೀಸರಿಗೆ ಮೊದಲ ಸುಳಿವಾಗಿತ್ತು.

ಸಿಕ್ಕ ವಸ್ತುಗಳನ್ನು ಆಧರಿಸಿ ರಾಜ್ಯದ ಎಲ್ಲಾ ಠಾಣೆಗಳ ನಾಪತ್ತೆ ದೂರುಗಳ ಜೊತೆ ತಾಳೆ ನೋಡಲಾಯಿತು. ಆದರೆ ಎಲ್ಲೂ ತಾಳೆಯಾಗದ ಹಿನ್ನೆಲೆಯಲ್ಲಿ ಪ್ರಕರಣ ಮಂಡ್ಯ ಪೊಲೀಸರಿಗೆ ಸವಾಲಾಗಿತ್ತು.

ಸಿಸಿಟಿವಿಯಲ್ಲಿ ಸುಳಿವು ನೀಡಿದ ಕಾರು: ಎಸ್‌ಪಿ ಡಾ. ಶೋಭಾರಾಣಿ ಅವರ ಸೂಚನೆ ಮೇರೆಗೆ ಶವ ಸಿಕ್ಕ ರಸ್ತೆಯ ಸಿಸಿಟಿವಿ ಪರಿಶೀಲನೆ ನಡೆಸಲಾಯಿತು. ಆಗ ಬೆಳಕವಾಡಿ ಟೋಲ್ ಮೂಲಕ ಹಾದುಹೋಗಿದ್ದ ಇಟಿಯೋಸ್ ಕಾರಿನ ಮೇಲೆ ಅನುಮಾನ ಮೂಡಿತು. ಕಾರಿನ ಫ್ರಂಟ್ ಸೀಟಿನಲ್ಲಿ ಮಲಗಿದ್ದ ಸ್ಥಿತಿಯಲ್ಲಿದ್ದ ಮಹಿಳೆಯೇ ಮೃತ ಮಹಿಳೆಯೇ ಎಂಬ ಅನುಮಾನ ಶುರುವಾಯಿತು. ತನಿಖೆ ವೇಳೆ ಕಾರಿನ ಮಾಲಕ ತಮಿಳುನಾಡಿನ ಉಪ್ಪಾರಹಳ್ಳಿಯ ರಾಜಶೇಖರ್ ಎಂದು ಪತ್ತೆಯಾಯಿತು. ವಿಚಾರಣೆಗೆ ಕರೆದ ಪೊಲೀಸರ ಬಳಿ ಕಾರನ್ನು ಮಾರಾಟ ಮಾಡಿದ್ದೇನೆ ಎಂದು ರಾಜಶೇಖರ್ ಸುಳ್ಳು ಹೇಳಿದ್ದ.

ಪ್ರೀತಿ, ಮದುವೆ ಒತ್ತಡ, ಕೊಲೆ: ಬೆಂಗಳೂರಿನ ಜೆ.ಪಿ ನಗರದ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ನಳಿನಿ ಮತ್ತು ರಾಜಶೇಖರ್ ನಡುವೆ ಸ್ನೇಹವಿತ್ತು. ಜೂ.22ರಂದು ಅತ್ತಿಬೆಲೆ ಬಳಿ ನಳಿನಿಯನ್ನು ಪಿಕ್ ಮಾಡಿದ್ದ ರಾಜಶೇಖರ್, ಆಕೆಯನ್ನು ಉಪ್ಪಾರಹಳ್ಳಿಗೆ ಕರೆದೊಯ್ದು ಕೊಲೆ ಮಾಡಿರುವ ಶಂಕೆಯಿದೆ. ಅದೇ ದಿನ ಶವವನ್ನು ಮಳವಳ್ಳಿಯ ಬೆಳಕವಾಡಿ ಸಮೀಪದ ಜವನಗಹಳ್ಳಿಗುಡ್ಡದ ಬಳಿ ತಂದು ಸುಟ್ಟು ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದ.

ಈ ವೇಳೆ ನಳಿನಿ ಸ್ನೇಹಿತೆ ಶ್ರೇಯಾಗೆ ಕರೆ ಮಾಡಿ ನಾನು ರಾಜಶೇಖರ್ ಜೊತೆ ಹೋಗ್ತಿದ್ದೀನಿ, ಬೆಕ್ಕಿಗೆ ಊಟ ಹಾಕಿಬಿಡು ಎಂದು ಹೇಳಿದ್ದಳು. ಕೊಲೆಯ ಬಳಿಕ ರಾಜಶೇಖರ್ ತನ್ನ ಸ್ನೇಹಿತ ವೆಂಕಿಯ ಬಳಿ ನಳಿನಿಯನ್ನು ದುಷ್ಕರ್ಮಿಗಳು ಸಾಯಿಸಿದ್ದಾರೆ ಎಂದೂ, ಶ್ರೇಯಾ ಬಳಿ ನಳಿನಿ ನನ್ನ ಜೊತೆ ಬರಲೇ ಇಲ್ಲ ಎಂದೂ ಭಿನ್ನ ಹೇಳಿಕೆ ನೀಡಿದ್ದ. ಜೂ.24ರಂದು ಮತ್ತೆ ಸುಟ್ಟ ಸ್ಥಳಕ್ಕೆ ಬಂದು ಹೋಗಿದ್ದ ರಾಜಶೇಖರ್, ಬೆಳಕವಾಡಿ ಪೊಲೀಸರು ವಿಚಾರಣೆಗೆ ಕರೆದ ಬಳಿಕ ಭಯಭೀತನಾಗಿದ್ದ.

ಎಸ್‌ಪಿ ಭೇಟಿ, 4 ತಂಡ ರಚನೆ: ಪ್ರಕರಣ ನಡೆದ ಸ್ಥಳಕ್ಕೆ ಎಸ್‌ಪಿ ಡಾ. ಶೋಭರಾಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಡಿವೈಎಸ್‌ಪಿ ಯಶವಂತ್ ಕುಮಾರ್ ಹಾಗೂ ಸಿಪಿಐ ಶ್ರೀಧರ್ ನೇತೃತ್ವದಲ್ಲಿ 4 ತಂಡಗಳನ್ನು ರಚಿಸಲಾಯಿತು. ಪ್ರತಿ ತಂಡಕ್ಕೆ ತಲಾ ಒಬ್ಬರಂತೆ ಪಿಎಸ್‌ಐಗಳಾದ ಬೆಳಕವಾಡಿ ಠಾಣೆಯ ಪ್ರಕಾಶ್, ಲೋಕೇಶ್,ರವಿಕುಮಾರ್ ಮತ್ತು ಶೇಷಾದ್ರಿ ಸಿಬ್ಬಂದಿಗಳಾದ ಪ್ರಭುಸ್ವಾಮಿ,ರಿಯಾಜ್ ಪಾಷಾ,ಸಿದ್ದರಾಜು, ಮಹೇಶ್, ಅಂಬರೀಷ್, ಸುಜನ್, ರಘು,ಮೋಹನ್ ಅವರನ್ನು ನೇಮಿಸಿ ತನಿಖೆಗೆ ಚುರುಕು ನೀಡಲಾಗಿತ್ತು.

ತಾಯಿ ಸಮೇತ ಆತ್ಮಹತ್ಯೆ: ಪೊಲೀಸರ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಜೂ.28ರ ಸಂಜೆ ರಾಜಶೇಖರ್ ತನ್ನ ತಾಯಿಯೊಂದಿಗೆ ಉಪ್ಪಾರಹಳ್ಳಿಯ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೇರೊಂದು ಮದುವೆಯಾಗಿ ಗಂಡನಿಂದ ದೂರವಿದ್ದ ನಳಿನಿ, ರಾಜಶೇಖರ್‌ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಈ ಬಗ್ಗೆ ಆತ ತನ್ನ ಸ್ನೇಹಿತನ ಬಳಿ ಹೇಳಿಕೊಂಡಿದ್ದ. ಮದುವೆಯಾಗಲು ಒಪ್ಪದೇ ನಳಿನಿಯನ್ನು ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಬೆಳಕವಾಡಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News