ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಿಯಲ್ ಎಸ್ಟೇಟ್ ದೊರೆ : ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ
ಮಂಡ್ಯ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಿಯಲ್ ಎಸ್ಟೇಟ್ ದೊರೆ. 1999ರಲ್ಲಿ ಕೇವಲ ಮೂರು ಎಕರೆ ಹೊಂದಿದ್ದ ರಾಜ್ಯದ ಮುಖ್ಯಮಂತ್ರಿ ಆಸ್ತಿ 2018ರ ವೇಳೆಗೆ 1,400 ಕೋಟಿ ಹೇಗಾಯಿತು? ಇಷ್ಟು ವೇಗವಾಗಿ ಶ್ರೀಮಂತರಾಗುವುದು ಹೇಗೆದಂದು ರೈತರಿಗೂ ಹೇಳಲಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬಿಡದಿ ಟೌನ್‍ಶಿಪ್ ವಿಚಾರವಾಗಿ ರವಿವಾರ ನಗರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಕಾಂಗ್ರೆಸ್ ಸರಕಾರವೇ ರೈತರ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದೆ. ನೇರವಾಗಿ ಮುಖ್ಯಮಂತ್ರಿಗಳೇ ರಿಯಲ್ ಎಸ್ಟೇಟ್ ಮಾಫಿಯಾ ದೊರೆಗಳ ಜೊತೆ ಕೈ ಜೋಡಿಸಿ ಈ ದಂಧೆ ನಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮೋದಿ ಅವರ ಆಡಳಿತದ ಗುಜರಾತ್‍ನಲ್ಲಿ ಟೌನ್‍ಶಿಪ್‍ಗಳು ಬಂದಿದೆ ಎಂಬುದು ನಿಜ. ಆದರೆ, ಅಲ್ಲಿ ರೈತರ ಕೃಷಿ ಭೂಮಿಯನ್ನು ಕಿತ್ತುಕೊಂಡು ಇಂತಹ ಯೋಜನೆಗಳನ್ನು ಮಾಡಿಲ್ಲ. ಒಣಭೂಮಿ ಮತ್ತು ನೀರಾವರಿಗೆ ಯೋಗ್ಯವಲ್ಲದ ಪ್ರದೇಶಗಳಲ್ಲಿ ಇಂತಹ ಬೃಹತ್ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಬೇಕಿದ್ದರೆ ಹೋಗಿ ನೋಡಿಕೊಂಡು ಬರಲಿ ಎಂದು ಅವರು ಹೇಳಿದರು.
ಬಿಡದಿ ಟೌನ್‍ಶಿಪ್ (ಐದು ಉಪ ನಗರ) ಮಾಡಬೇಕೆಂದು ತೀರ್ಮಾನ ಮಾಡಿದವನೇ ನಾನು. ಕುಮಾರಸ್ವಾಮಿ ರೈತರನ್ನು ಒಕ್ಕಲೆಬ್ಬಿಸಲು ಹೊರಟಿದ್ದಾರೆಂದು ಅವತ್ತು ಕಾಂಗ್ರೆಸ್‍ನವರು ವಿರೋಧ ಮಾಡಿದರು. ರೈತರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದೆ. ರೈತರಿಗೆ ತೊಂದರೆ ಆಗುತ್ತದೆ ಎಂದು ಆ ಯೋಜನೆ ಕೈಬಿಟ್ಟಿದ್ದೆ. ಇವರ ರೀತಿ ತರಾತುರಿಯಲ್ಲಿ ಜಾರಿ ಮಾಡಲು ಹೋಗಿರಲಿಲ್ಲ ಎಂದು ಅವರು ಹೇಳಿಕೊಂಡರು.