Malavalli | ಮೈಕ್ರೋ ಫೈನಾನ್ಸ್ ಕಿರುಕುಳದಿಂದ ರೈತ ಆತ್ಮಹತ್ಯೆ ಆರೋಪ; ಮೃತದೇಹವಿಟ್ಟು ದಲಿತ ಸಂಘಟನೆಗಳಿಂದ ಪ್ರತಿಭಟನೆ
ಮಳವಳ್ಳಿ : ಮೈಕ್ರೊ ಫೈನಾನ್ಸ್ ಕಂಪೆನಿಯ ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತು ಮಳವಳ್ಳಿ ತಾಲೂಕಿನ ತಗಡಯ್ಯನದೊಡ್ಡಿ ಗ್ರಾಮದ ನಾಗರಾಜು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸಾವಿಗೆ ನ್ಯಾಯ ಕೋರಿ ದಲಿತ ಸಂಘಟನೆಗಳ ಮುಖಂಡರು ಶುಕ್ರವಾರ ಸಂಜೆ ಪಟ್ಟಣದ ಸೂರ್ಯೋದಯ ಫೈನಾನ್ಸ್ ಕಚೇರಿ ಮುಂದೆ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.
ಘಟನೆಯ ಹಿನ್ನೆಲೆ: ಮೃತ ನಾಗರಾಜು ಸೂರ್ಯೋದಯ ಫೈನಾನ್ಸ್ ಕಂಪೆನಿಯಿಂದ ವ್ಯವಸಾಯಕ್ಕೆ ಹಾಗೂ ಮನೆ ಕಟ್ಟಲು ಸಾಲ ಪಡೆದಿದ್ದರು. ವರ್ಷಗಳಿಂದ ನಿಯಮಿತವಾಗಿ ಕಂತು ಪಾವತಿಸುತ್ತಿದ್ದ ಅವರು, ನಾಲ್ಕು ತಿಂಗಳಿಂದ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ಕಂಪೆನಿಯ ಸಿಬ್ಬಂದಿ ಮನೆಗೆ ತೆರಳಿ ಬಾಯಿಗೆ ಬಂದಂತೆ ನಿಂದಿಸಿ, ಅವಮಾನ ಮಾಡಿ, ಸಂಪೂರ್ಣ ಬಾಕಿ ಹಣವನ್ನು ಒಮ್ಮೆಲೇ ಕಟ್ಟುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ನಾಗರಾಜು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಹಶೀಲ್ದಾರ್ ವಿರುದ್ಧ ಆಕ್ರೋಶ: ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರು ಮೃತ ನಾಗರಾಜು ಅವರ ಶವವನ್ನು ಸೂರ್ಯೋದಯ ಫೈನಾನ್ಸ್ ಕಚೇರಿ ಮುಂದೆ ಇಟ್ಟು ಧರಣಿ ಆರಂಭಿಸಿದರು. ಈ ವೇಳೆ ಮಂಡ್ಯದಿಂದ ಉಪ ವಿಭಾಗಾಧಿಕಾರಿ ಸ್ಥಳಕ್ಕೆ ಆಗಮಿಸಿದರೂ, ಪಟ್ಟಣದಲ್ಲಿಯೇ ಇದ್ದ ತಹಶೀಲ್ದಾರ್ ಲೋಕೇಶ್ ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯತೋರುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ಆಕ್ರೋಶಭರಿತ ಘೋಷಣೆಗಳನ್ನು ಕೂಗಿದರು.
ದಲಿತರ ಕುಂದುಕೊರತೆ ಸಭೆ ನಡೆಸಲು ಒತ್ತಾಯ: ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ‘‘ಸಾಕಷ್ಟು ತಿಂಗಳಿಂದ ಪೊಲೀಸ್ ಇಲಾಖೆ ದಲಿತರ ಕುಂದುಕೊರತೆ ಸಭೆಯನ್ನು ನಡೆಸಿಲ್ಲ. ಇಲಾಖೆಯ ನಿರ್ಲಕ್ಷ್ಯವೇ ಪರೋಕ್ಷವಾಗಿ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ. ಈಗಲಾದರೂ ಎಚ್ಚೆತ್ತುಕೊಂಡು ತುರ್ತಾಗಿ ದಲಿತರ ಕುಂದುಕೊರತೆ ಸಭೆ ನಡೆಸಬೇಕು’’ ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಅದರಲ್ಲೂ ಮಳವಳ್ಳಿ ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳ ಹಾವಳಿ ಮಿತಿ ಮೀರಿದೆ. ಇವರ ಕಿರುಕುಳಕ್ಕೆ ಬಡವರು, ದಲಿತರು ಬಲಿಯಾಗುತ್ತಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಕಾರ್ಯದರ್ಶಿ ಶಾಗ್ಯ ಕೆಂಪಯ್ಯ ಹಾಗೂ ತಾಲೂಕು ಮುಖಂಡ ಹಾಡ್ಲಿ ಸುರೇಶ್ ಕಿಡಿಕಾರಿದರು.
ಸ್ಥಳಕ್ಕೆ ಧಾವಿಸಿದ ಮಳವಳ್ಳಿ ಡಿವೈಎಸ್‌ಪಿ ಯಶವಂತ್ ಕುಮಾರ್, ವೃತ್ತ ನಿರೀಕ್ಷಕರಾದ ಬಿ.ಎಸ್. ಶ್ರೀಧರ್ ಹಾಗೂ ಬಸವರಾಜು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.
ಉಪ ವಿಭಾಗಾಧಿಕಾರಿ ಭರವಸೆ ಬಳಿಕ ಶಾಂತ: ವಿಷಯ ತಿಳಿದು ರಾತ್ರಿ 8:30ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಅವರು ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿದರು. ‘‘ಸಂಬಂಧಿಸಿದ ಕಂಪೆನಿಯ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮೃತ ನಾಗರಾಜು ಕುಟುಂಬಕ್ಕೆ ಸರಕಾರದ ವತಿಯಿಂದ ನಿಯಮಾನುಸಾರ ಪರಿಹಾರ ಒದಗಿಸಲಾಗುವುದು. ಜೊತೆಗೆ ಕಂಪೆನಿಯ ಹಿರಿಯ ಅಧಿಕಾರಿಗಳನ್ನು ಕರೆಸಿ ಅವರ ಮೂಲಕವೂ ಕುಟುಂಬಕ್ಕೆ ನ್ಯಾಯ ದೊರಕಿಸುವ ವ್ಯವಸ್ಥೆ ಮಾಡಲಾಗುವುದು’’ ಎಂದು ಭರವಸೆ ನೀಡಿದರು. ಎಸಿ ಅವರ ಭರವಸೆ ಬಳಿಕ ಮುಖಂಡರು ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಶಾಗ್ಯ ಕೆಂಪಯ್ಯ, ಹಾಡ್ಲಿ ಸುರೇಶ್,ನಂಜುಂಡಸ್ವಾಮಿ, ಮಾರ್ಕಾಲು ನಟರಾಜು, ಬಂಡೂರು ಸಿದ್ದರಾಜು, ಮಾಜಿ ಪುರಸಭಾ ಸದಸ್ಯ ಸಿದ್ದರಾಜು, ನಂಜುಂಡಸ್ವಾಮಿ, ದುಗ್ಗನಹಳ್ಳಿ ನಾಗರಾಜು, ಮಲ್ಲೇಶ್,ದಲಿತ ಪರ ಹೋರಾಟಗಾರರು ಭಾಗವಹಿಸಿದ್ದರು.