ಸಾಂದರ್ಭಿಕ ಚಿತ್ರ | PC : AI

ಮಂಡ್ಯ : ಬೆಂಗಳೂರು-ಮೈಸೂರು ಹೆದ್ದಾರಿಯ ಇಂಡುವಾಳು ಗ್ರಾಮದ ಬಳಿ ಟಿಪ್ಪರ್ ಲಾರಿಗೆ ಥಾರ್ ಜೀಪ್ ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಈ ಘಟನೆಯಲ್ಲಿ ಕೇರಳಂ ರಾಜ್ಯ ಮೂಲದವರು ಎನ್ನಲಾದ ಮುಹಮ್ಮದ್ ಅಲಿ, ಲಿಫೈಲ್ ಹಾಗೂ ಸ್ವಪ್ನ ಎಂಬ ಮೂವರು ಸಾವಿಗೀಡಾಗಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬ ಬಾಸಿಲ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಮಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಆರ್.ಟಿ.ಓ. ಅಧಿಕಾರಿಗಳು ಹೆದ್ದಾರಿಯಲ್ಲಿ ಜಲ್ಲಿ ತುಂಬಿದ್ದ ಟಿಪ್ಪರ್ ವಾಹನವನ್ನು ತಪಾಸಣೆಗಾಗಿ ಬೆನ್ನಟ್ಟಿ ಅಡ್ಡಗಟ್ಟಿದಾಗ ಟಿಪ್ಪರ್ ಚಾಲಕ ತಕ್ಷಣ ವಾಹನವನ್ನು ನಿಲುಗಡೆ ಮಾಡಿದ ಹಿನ್ನೆಲೆಯಲ್ಲಿ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಥಾರ್ ಜೀಪ್ ಟಿಪ್ಪರ್ ಗೆ ರಭಸವಾಗಿ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಎಕ್ಸ್‌ಪ್ರೆಸ್‌ವೇನಲ್ಲಿ ಟಿಪ್ಪರ್ ವಾಹನವನ್ನು ಬೆನ್ನಟ್ಟಿ ರಸ್ತೆ ಮಧ್ಯೆ ಹಠಾತ್ತಾಗಿ ನಿಲ್ಲಿಸಿ ಮೂವರು ಅಮಾಯಕರ ಸಾವಿಗೆ ಕಾರಣವಾಗಿದ್ದಾರೆ ಎಂದು ಆರೂಪಿಸಿ ಸ್ಥಳೀಯ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಭೇಟಿ ನೀಡಿ ಪರಿಶೀಲಿದರು. ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿಗೆ ಬೆಂಕಿ :

ಮತ್ತೊಂದು ಘಟನೆಯಲ್ಲಿ ಶನಿವಾರ ಮುಂಜಾನೆ ಸಮಯದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯ ಚಿಕ್ಕಮಂಡ್ಯ ಗ್ರಾಮದ ಬಳಿ ಬೆಂಕಿ ಹೊತ್ತಿಕೊಂಡು ಸ್ವಿಫ್ಟ್ ಕಾರು ಸಂಪೂರ್ಣ ಭಸ್ಮವಾಗಿದ್ದು, ಕಾರಿನದಲ್ಲಿದ್ದ ದಂಪತಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

ವಿಷಯ ತಿಳಿದ ಮಂಡ್ಯ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕುಂಟನಹಳ್ಳಿ ಮಲ್ಲೇಶ

contributor

ಕುಂಟನಹಳ್ಳಿ ಮಲ್ಲೇಶ (ಕೆ.ಬಿ.ಮಲ್ಲೇಶ) ಅವರು ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದು, 2006 ರಿಂದ ವಾರ್ತಾಭಾರತಿ ದೈನಿಕದ ಮಂಡ್ಯ ಜಿಲ್ಲಾ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮುಖ್ಯವಾಗಿ ಸಾಹಿತ್ಯಿಕ, ವೈಚಾರಿಕ ಪುಸ್ತಕಗಳನ್ನು ಓದುವುದು, ಸಂಗೀತ ಕೇಳುವುದು, ಕೃಷಿ ಇವರ ಹವ್ಯಾಸವಾಗಿದೆ.