ಮಂಡ್ಯ: ಮಂಡ್ಯದಲ್ಲಿ ಆಟೊಮೋಟಿವ್ ರಿಸರ್ಚ್ ಅಸೋಸಿಯೇಷನ್‌ ಆಫ್ ಇಂಡಿಯಾ (ಎಆರ್‌ಎಐ) ಘಟಕ ಸ್ಥಾಪನೆಗೆ ಅಗತ್ಯವಿರುವ ಜಾಗ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗಾಗಿ ಶನಿವಾರ ಮಂಡ್ಯಕ್ಕೆ ಆಗಮಿಸಿದ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಘಟಕ ಸ್ಥಾಪನೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರತಿಕ್ರಿಯೆ ನೀಡಿದರು.

“ಮೊದಲು 100 ಎಕರೆ ಜಾಗ ಕೇಳಿದ್ದರು. ಅಷ್ಟು ಜಾಗವನ್ನು ಗುರುತಿಸಲಾಗಿದೆ. ಆದರೆ, ಈಗ 500 ಎಕರೆ ಕೇಳುತ್ತಿದ್ದಾರೆ. ಅದನ್ನು ಸ್ಪಷ್ಟವಾಗಿ ತಿಳಿಸಿದರೆ ನೀಡಲು ಸಿದ್ಧರಿದ್ದೇವೆ. ಜಾಗ ಕೊಡಲಿಲ್ಲ ಎಂದು ಎರಡು-ಮೂರು ವರ್ಷಗಳಿಂದ ಆರೋಪ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ” ಎಂದು ಸ್ಪಷ್ಟಪಡಿಸಿದರು.

ನಾವು ತೋರಿಸಿದ ಜಾಗ ಇಷ್ಟವಿಲ್ಲದಿದ್ದರೆ ಅವರೇ ಸೂಕ್ತ ಜಾಗವನ್ನು ತೋರಿಸಲಿ. ಭೂಸ್ವಾಧೀನ ಮಾಡಿಕೊಡುತ್ತೇವೆ. ಆದರೆ, ಭೂಸ್ವಾಧೀನಕ್ಕೆ ಮುಂದಾದಾಗ ರೈತರನ್ನು ಎತ್ತಿಕಟ್ಟಿ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಕುಮಾರಸ್ವಾಮಿಯವರು ಒಳ್ಳೆಯ ಕೆಲಸ ಮಾಡಿದರೆ ಸಹಕಾರ ನೀಡುತ್ತೇವೆ ಎಂದು ಹೇಳಿದರು.

ಕಾವೇರಿ ನೀರಿನ ವಿವಾದಕ್ಕೆ ಮೇಕೆದಾಟು ಯೋಜನೆ ಪರಿಹಾರವಾಗಲಿದೆ. ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಕಷ್ಟದ ಸಂದರ್ಭದಲ್ಲಿ ಕಾವೇರಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಮೇಕೆದಾಟು ಯೋಜನೆ ಸಹಕಾರಿಯಾಗಲಿದೆ. ರಾಜ್ಯ ಸರ್ಕಾರ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ ಎಂದು ತಿಳಿಸಿದರು.

ಯೋಜನೆಯಿಂದ ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯವಾಗಿ ಜಾಗ ನೀಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈಗಾಗಲೇ 2,500 ಎಕರೆ ಜಾಗವನ್ನು ಅರಣ್ಯ ಇಲಾಖೆಗೆ ಒದಗಿಸಲಾಗಿದ್ದು, ಉಳಿದ ಜಾಗವನ್ನೂ ನೀಡಲಾಗುವುದು ಎಂದರು.

ಕಾವೇರಿ ನ್ಯಾಯಮಂಡಳಿಯ ತೀರ್ಪಿನ ಪ್ರಕಾರ ತಮಿಳುನಾಡಿಗೆ 177 ಟಿಎಂಸಿ ಅಡಿ ನೀರು ಬಿಡಬೇಕೆಂಬ ಆದೇಶವಿದೆ. ಮೇಕೆದಾಟು ಯೋಜನೆ ಜಾರಿಯಾದರೆ ಈ ಆದೇಶ ಪಾಲಿಸಲು ಅನುಕೂಲವಾಗಲಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೇರಿದಂತೆ ಸಂಬಂಧಪಟ್ಟ ಪ್ರಾಧಿಕಾರಗಳ ಆದೇಶಗಳನ್ನು ಪಾಲಿಸುವುದಕ್ಕೂ ನೆರವಾಗಲಿದೆ ಎಂದು ಹೇಳಿದರು.

ಮಂಡ್ಯದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಘಟಕ ಸ್ಥಾಪನೆಗೆ ಸೂಚನೆ :

ಮಂಡ್ಯ ನಗರದಲ್ಲಿ 100 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ಆಸ್ಪತ್ರೆಯ ಉಪಕೇಂದ್ರ ಸ್ಥಾಪಿಸುವಂತೆ ಮಂಡ್ಯ ಶಾಸಕ ಪಿ.ರವಿಕುಮಾರ್ ಗಣಿಗ ಅವರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಈ ಸಂಬಂಧ ಅಗತ್ಯ ಕ್ರಮ ಕೈಗೊಂಡು ಯೋಜನೆ ರೂಪಿಸುವಂತೆ ಸೂಚನೆ ನೀಡಿದರು.

ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ತುರ್ತು ಚಿಕಿತ್ಸೆಗಾಗಿ ಮಂಡ್ಯದಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ತೆರಳಬೇಕಾದ ಅನಿವಾರ್ಯತೆಯಿದೆ. ತುರ್ತು ಸಂದರ್ಭಗಳಲ್ಲಿ ದೂರದ ಆಸ್ಪತ್ರೆಗೆ ಪ್ರಯಾಣಿಸುವ ಸಮಯದಲ್ಲೇ ಅಮೂಲ್ಯ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮಂಡ್ಯದಲ್ಲಿಯೇ ಸುಸಜ್ಜಿತ ಹೃದ್ರೋಗ ಚಿಕಿತ್ಸಾ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂದು ಶಾಸಕರು ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor