Mandya | ಬಿಕ್ಷುಕಿ ನಿಧನ; ಮನೆಯಲ್ಲಿ ಲಕ್ಷಾಂತರ ರೂ. ಹಣ ಪತ್ತೆ!
ಮಂಡ್ಯ : ನಗರದ ಗುತ್ತಲು ಸಾದತ್ ಬಡಾವಣೆಯಲ್ಲಿ ವಾಸವಿದ್ದ ಭಿಕ್ಷುಕಿ ಮೃತಪಟ್ಟ ನಂತರ, ಆಕೆಯ ಮನೆಯಲ್ಲಿ ಸುಮಾರು 8 ಲಕ್ಷ ಹಣ ಇರುವುದು ಬೆಳಕಿಗೆ ಬಂದಿರುವುದು ವರದಿಯಾಗಿದೆ.
ಮನೆಯವರು ನೋಡಿಕೊಳ್ಳುತ್ತಿಲ್ಲ ಎಂದು ವೃದ್ದೆ ನೂರ್ ಹಲವು ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿದ್ದು, ಆಕೆಯ ಸಾವಿನ ನಂತರ ಆಕೆ ವಾಸವಿದ್ದ ಮನೆಗೆ ಹೋಗಿ ನೋಡಿದಾಗ ಚೀಲಗಟ್ಟಲೆ ನಾಣ್ಯಗಳು ಮತ್ತು ಕಂತೆ ಕಂತೆ ನೋಟುಗಳು ಸಿಕ್ಕಿವೆ ಎನ್ನಲಾಗಿದೆ.
ʼಬದುಕಿದ್ದಾಗ ಯಾರೂ ನೋಡಿಕೊಳ್ಳಲಿಲ್ಲ. ಸತ್ತಾಗ ಹಣ ಹಂಚಿಕೊಳ್ಳಲು ಸಂಬಂಧಿಕರು ಮುಗಿಬಿದ್ದಿದ್ದಾರೆʼ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಸುಮಾರು 75 ವರ್ಷದ ಈ ವೃದ್ಧೆ ಒಬ್ಬಂಟಿಯಾಗಿ ಮನೆಯಲ್ಲಿದ್ದು, ಇವರು ಎರಡು ದಿನದಿಂದ ಮನೆಯಿಂದ ಹೊರಬಂದಿರಲಿಲ್ಲ. ಇದರಿಂದ ಅನುಮಾನಗೊಂಡು ಅಕ್ಕಪಕ್ಕದವರು ಬಾಗಿಲು ತೆರೆದು ನೋಡಲಾಗಿ ಆ ವೃದ್ಧ ಮಹಿಳೆ ನೂರ್ ಮೃತಪಟ್ಟಿದ್ದು ಕಂಡುಬಂದಿದೆ. ಜೊತೆಗೇ ಮನೆಯೊಳಗೆ ಕಾಲಿರಿಸಿದವರಿಗೆ ಅಲ್ಲೆಲ್ಲ ರಾಶಿ ರಾಶಿ ಇದ್ದ ಒಂದು ಎರಡು, ಐದು, ಹತ್ತು ರೂ.ಗಳ ಕಾಯಿನ್‌ಗಳು, ಹತ್ತು, ಇಪ್ಪತ್ತು ಐವತ್ತು ರೂ.ಗಳ ನೋಟುಗಳು ಎರಚಾಡಿದ್ದನ್ನು ನೋಡಿದ್ದಾರೆ.
ಮತ್ತಷ್ಟು ಹುಡುಕಾಡಿದಾಗ ಅಲ್ಲಲ್ಲಿ ಚೀಲಗಳಲ್ಲೂ ನೋಟುಗಳನ್ನು ತುಂಬಿಟ್ಟಿರುವುದು ಕಂಡುಬಂದಿತು. ಕೂಡಲೇ ಸ್ಥಳೀಯರು ಮುಖಂಡರಿಗೆ ತಿಳಿಸಲಾಗಿ, ಸ್ಥಳಕ್ಕಾಗಮಿಸಿದ ಮುಖಂಡರು ಮೃತದೇಹದ ದಫನ್ ಕಾರ್ಯ ನೆರವೇರಿಸಿದ್ದಾರೆ.