ತಮಿಳುನಾಡಿಗೆ ನೀರು ಹರಿಸಲು ಸೂಚನೆ ಖಂಡಿಸಿ ಮಂಡ್ಯದಲ್ಲಿ ಮುಂದುವರಿದ ಪ್ರತಿಭಟನೆ
ಕರವೇ, ರೈತಸಂಘ, ವಿವಿಧ ಸಂಘಟನೆಗಳ ಆಕ್ರೋಶ
ಮಂಡ್ಯ : 15 ದಿನಗಳವರೆಗೆ ತಮಿಳುನಾಡಿಗೆ ನಿತ್ಯ 3,500 ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ರಾಜ್ಯ ಸರಕಾರಕ್ಕೆ ಸೂಚನೆ ನೀಡಿರುವುದನ್ನು ಖಂಡಿಸಿ ಜಿಲ್ಲೆಯಲ್ಲಿ ಬುಧವಾರವೂ ತೀವ್ರ ಪ್ರತಿಭಟನೆ ನಡೆಯಿತು.
ಬೆಂಗಳೂರು ಮೈಸೂರು ಹಳೆ ಹೆದ್ದಾರಿಯ ಸಂಜಯ ವೃತ್ತದಲ್ಲಿ ರೈತ ಸಂಘದ ವಿವಿಧ ಬಣಗಳ ಕಾರ್ಯಕರ್ತರು, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಇತರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶವನ್ನು ತೀವ್ರವಾಗಿ ಖಂಡಿಸಿದರು. ಖಾಲಿ ಕೊಡಗಳನ್ನು ಪ್ರದರ್ಶಿಸಿ ರಸ್ತೆಯಲ್ಲಿ ಧರಣಿ ಕುಳಿತರು.
ಮಳೆ ಇಲ್ಲದೆ ಕಾವೇರಿಕೊಳ್ಳದ ನಾಲ್ಕು ಜಲಾಶಯಗಳಲ್ಲಿ ಕುಡಿಯಲೂ ಸಾಕಾಗುವಷ್ಟು ನೀರು ಸಂಗ್ರಹವಿಲ್ಲ. ಸಮಿತಿಯ ತಜ್ಞರು ಜಲಾಶಯ ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸದೆ ತಮಿಳುನಾಡಿಗೆ ನೀರು ಹರಿಸುವಂತೆ ಸೂಚನೆ ನೀಡಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಸಮಿತಿಯ ಈ ಆದೇಶವನ್ನು ಯಾವುದೇ ಕಾರಣಕ್ಕೂ ಒಪ್ಪುವುದು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರವು ಸಮಿತಿಯ ಶಿಫಾರಸನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸಬಾರದು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನದಟ್ಟು ಮಾಡಬೇಕು. ಒಂದು ವೇಳೆ ತಮಿಳುನಾಡಿಗೆ ನೀರು ಹರಿಸಿದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು, ರಾಜ್ಯ ಉಪಾಧ್ಯಕ್ಷ ಮ.ಸೂ.ಚಿದಂಬರ್, ಶಂಕರೇಗೌಡ, ಮಹಿಳಾ ಜಿಲ್ಲಾಧ್ಯಕ್ಷೆ ಭಾರತಿ ಕುಮಾರ್, ಗೌರವಧ್ಯಕ್ಷೆ ಸುಜಾತ ಕೃಷ್ಣ, ಮದ್ದೂರು ತಾಲೂಕು ಅಧ್ಯಕ್ಷ ಮಣಿಗೆರೆ ರಾಮಚಂದ್ರೇಗೌಡ, ಪುಟ್ಟರಾಜು, ಪ್ರಭಾವತಿ ಬೋರೇಗೌಡ, ಶಿವಪ್ರಸಾದ್, ದೇವೆಗೌಡ, ಹರೀಶ್, ಉಮೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ಮೊದಲಾದರಿದ್ದರು. ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.