ಮಲೆನಾಡು ಗಿಡ್ಡ: ಬದುಕಿನ ಹೊಸ ದಾರಿಗಳು
ಒಂದು ದೇಸಿ ಹಸುವಿನ ತಳಿಯನ್ನು ಉಳಿಸುವ ಚಿಂತನೆಯಿಂದ ಆರಂಭವಾದ ನಾಗೇಂದ್ರ ಸಾಗರ್ ಮತ್ತು ಅವರ ಬಳಗದ ಪ್ರಯತ್ನ ಇಂದು ರೈತ ಉತ್ಪಾದನೆ, ಮೌಲ್ಯವರ್ಧನೆ, ಮಹಿಳೆಯರ ಉದ್ಯಮಶೀಲತೆ, ಮಣ್ಣು ಪರೀಕ್ಷೆ, ಸಾವಯವ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಪುನಶ್ಚೇತನದವರೆಗೆ ವಿಸ್ತರಿಸಿದೆ. ಇಲ್ಲಿ ಮಲೆನಾಡು ಗಿಡ್ಡ ಕೇವಲ ಒಂದು ಹಸುವಿನ ತಳಿಯಲ್ಲ; ರೈತನನ್ನು ಮತ್ತೆ ಕೃಷಿಯೊಂದಿಗೆ ಬೆಸೆಯುವ ಒಂದು ನೆಪ.
‘ಮಲೆನಾಡು ಗಿಡ್ಡ’ ಎನ್ನುವುದು ಕೃಷಿಕ ಮಲೆನಾಡಿಗರಿಗೆ ಕೇವಲ ಒಂದು ದೇಸಿ ಹಸುವಿನ ತಳಿಯಲ್ಲ. ಅಲ್ಲಿನ ಭೌಗೋಳಿಕ ಪರಿಸರ, ಕೃಷಿ ಪದ್ಧತಿ, ಆಹಾರ ಕ್ರಮ ಮತ್ತು ಜನಜೀವನದ ಜೊತೆಗೆ ಬೆಸೆದುಕೊಂಡಿರುವ ಒಂದು ಜೀವಸಂಪತ್ತು. ಅರಣ್ಯದ ಅಂಚಿನಲ್ಲೋ, ಗುಡ್ಡದ ಇಳಿಜಾರಿನಲ್ಲೋ, ಗದ್ದೆಯ ಬದುವಿನಲ್ಲೋ, ಅಡಿಕೆ ತೋಟದ ನಡುವೆಯೋ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ಈ ಪುಟ್ಟ ಹಸು ಮಲೆನಾಡಿನ ಕೃಷಿಕರ ಬದುಕಿನ ಅವಿಭಾಜ್ಯ ಭಾಗವಾಗಿತ್ತು. ಆದರೆ ಕೃಷಿ ಪದ್ಧತಿಯ ಬದಲಾವಣೆ, ಗೋಮಾಳಗಳ ಅತಿಕ್ರಮಣ, ಮೇಯಲು ಜಾಗದ ಕೊರತೆ ಮತ್ತು ರಾಸಾಯನಿಕ ಕೃಷಿಯ ವಿಸ್ತರಣೆಯೊಂದಿಗೆ ಈ ತಳಿಯ ಸಾಕಣೆಯೂ ಕಡಿಮೆಯಾಗತೊಡಗಿತು. ‘ಹಸು ಕೃಷಿಗೆ ಅನಿವಾರ್ಯವಲ್ಲ’ ಎಂಬ ಮನಸ್ಥಿತಿ ಬೆಳೆದಾಗ ಅದರ ಮಹತ್ವವೂ ಮರೆಯಾಗತೊಡಗಿತು. ಇಂಥ ಸಂದರ್ಭದಲ್ಲಿ ಮಲೆನಾಡು ಗಿಡ್ಡದ ಉಳಿವಿಗಾಗಿ ಒಂದಷ್ಟು ಸಮಾನಮನಸ್ಕ ರೈತರು ಸಂಘಟಿತರಾಗಿ ಪ್ರಯತ್ನ ಆರಂಭಿಸಿದ್ದು ಗಮನಿಸಬೇಕಾದ ಸಂಗತಿ.
ಸಾಗರದಲ್ಲಿ ಎರಡು ವರ್ಷದ ಹಿಂದೆ ಹುಟ್ಟಿದ ‘ಮಲೆನಾಡು ಗಿಡ್ಡ ಅಭಿವೃದ್ಧಿ ಸಂಸ್ಥೆ’ ಈ ಪ್ರಯತ್ನದ ಫಲ. ಜಾನುವಾರು ಸಾಕಣೆ, ಕೃಷಿ ಮತ್ತು ದೇಸಿ ತಳಿಗಳ ಸಂವರ್ಧನೆಯಲ್ಲಿ ಆಸಕ್ತಿ ಹೊಂದಿದ್ದ ರೈತರು ಆಗಾಗ ಸೇರಿ ಅಲ್ಲಿ ಚರ್ಚಿಸುತ್ತಿದ್ದಾಗ ಮಲೆನಾಡು ಗಿಡ್ಡದ ಸಂಖ್ಯೆ ಕುಸಿಯುತ್ತಿರುವ ವಿಚಾರ ಗಂಭೀರವಾಗಿ ಪ್ರಸ್ತಾಪವಾಗುತ್ತಿತ್ತು. ವೈಯಕ್ತಿಕ ಆಸಕ್ತಿಯಿಂದ ಮಾತ್ರ ಒಂದು ಅಪರೂಪದ ತಳಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ, ಅದಕ್ಕೊಂದು ಸಂಘಟಿತ ವ್ಯವಸ್ಥೆ ಬೇಕು ಎಂಬ ಅಭಿಪ್ರಾಯ ಮೂಡಿತು. ಪಶುವೈದ್ಯರೊಬ್ಬರು ಸ್ಥಳೀಯ ಪ್ರಯೋಗಶೀಲ ಕೃಷಿಕ ನಾಗೇಂದ್ರ ಸಾಗರ್ ಅವರಿಗೆ ಈ ಕೆಲಸಕ್ಕೆ ಸಾಂಸ್ಥಿಕ ರೂಪ ನೀಡುವಂತೆ ಸಲಹೆ ನೀಡಿದಾಗ ಪ್ರತ್ಯೇಕ ಸಂಸ್ಥೆಯೊಂದನ್ನು ಆರಂಭಿಸುವ ಆಲೋಚನೆ ಬಲವಾಯಿತು. ಮುಂದೆ ೨೦೨೩ರಲ್ಲಿ ಕಂಪೆನಿಗಳ ಕಾಯ್ದೆಯ ಅಡಿಯಲ್ಲಿ ಮಲೆನಾಡು ಗಿಡ್ಡ ರೈತ ಉತ್ಪಾದಕ ಕಂಪೆನಿ ರೂಪುಗೊಂಡಿತು. ಆರಂಭದಲ್ಲಿ ಕೆಲವು ನಿರೀಕ್ಷಿತ ಸರಕಾರಿ ನೆರವುಗಳು ದೊರೆಯದಿದ್ದರೂ, ರಾಜ್ಯ ಸರಕಾರದ ದೇಸಿ ಗೋತಳಿ ಸಂರಕ್ಷಣಾ ಯೋಜನೆಯ ಮೂಲಕ ಪಶುವೈದ್ಯಕೀಯ ಇಲಾಖೆಯ ಸಹಕಾರ ಮತ್ತು ಮಾರ್ಗದರ್ಶನ ದೊರೆಯಿತು.
ಸಂಸ್ಥೆಯ ಆರಂಭಿಕ ಬೆಳವಣಿಗೆಗೆ ಸರಕಾರದ ಹ್ಯಾಂಡ್ ಹೋಲ್ಡಿಂಗ್ ನೆರವು ಪೂರಕವಾಯಿತು. ಷೇರುದಾರ ರೈತರಿಂದ ಬಂಡವಾಳ ಸಂಗ್ರಹಿಸುವುದರ ಜೊತೆಗೆ ಅದಕ್ಕೆ ಸಮಾನ ಮೊತ್ತದ ಸರಕಾರಿ ಅನುದಾನ ಪಡೆಯುವ ವ್ಯವಸ್ಥೆಯೂ ಇತ್ತು. ಈ ಉದ್ದೇಶದಿಂದ ನಾಗೇಂದ್ರ, ರಾಧಾಕೃಷ್ಣ ಬಂದಗದ್ದೆ ಮತ್ತು ಅವರ ತಂಡ ಹಳ್ಳಿಹಳ್ಳಿಗೆ ತೆರಳಿ ರೈತರನ್ನು ಸಂಪರ್ಕಿಸಿತು. ಸುಮಾರು ಆರು ನೂರು ಮಂದಿ ಷೇರುದಾರರಾಗಿರುವುದು ಈ ಪ್ರಯತ್ನಕ್ಕೆ ರೈತರಿಂದ ದೊರೆತ ಪ್ರತಿಕ್ರಿಯೆಯನ್ನು ಸೂಚಿಸುತ್ತದೆ. ಇಲ್ಲಿ ರೈತರು ಕೇವಲ ಸಂಸ್ಥೆಯ ಫಲಾನುಭವಿಗಳಾಗದೆ ಅದರ ಪಾಲುದಾರರಾಗಬೇಕು ಎಂಬುದು ಆರಂಭದಿಂದಲೂ ಅವರ ನಿಲುವು.
ರೈತರಾಗಿ ನೀವು ನಮ್ಮ ಪ್ರದೇಶದ ದೇಸಿ ಹಸುವಿನ ತಳಿಯನ್ನು ಉಳಿಸಬೇಕು ಎಂದು ರೈತರಿಗೆ ಹೇಳುವುದರಿಂದ ಮಾತ್ರ ಅದು ಸಾಧ್ಯವಾಗುವುದಿಲ್ಲ. ಅದನ್ನು ಸಾಕುವ ರೈತನ ಬದುಕಿಗೆ ಅದರಿಂದ ಏನು ಪ್ರಯೋಜನ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕು. ಮಲೆನಾಡು ಗಿಡ್ಡ ಸಮೃದ್ಧ ಹಾಲು ನೀಡುವ ತಳಿಯಲ್ಲ. ಹಾಲಿನ ಪ್ರಮಾಣವನ್ನೇ ಅದರ ಆರ್ಥಿಕ ಮೌಲ್ಯದ ಮಾನದಂಡವನ್ನಾಗಿ ಮಾಡಿದರೆ ಆ ತಳಿಯನ್ನು ಸಾಕುವುದು ರೈತನಿಗೆ ಆಕರ್ಷಕವಾಗಿ ಕಾಣುವುದಿಲ್ಲ. ಹೀಗಾಗಿ ಸಂಸ್ಥೆ ಹಾಲು, ಬೆಣ್ಣೆ, ತುಪ್ಪ ಮತ್ತು ಇತರ ಉತ್ಪನ್ನಗಳಿಗೆ ಮಾರುಕಟ್ಟೆ ರೂಪಿಸುವ ಪ್ರಯತ್ನ ಮಾಡಿತು. ಷೇರುದಾರ ರೈತರು ತಯಾರಿಸುವ ಉತ್ಪನ್ನಗಳನ್ನು ಸಂಸ್ಥೆಯೇ ಖರೀದಿಸಿ ಮಾರುಕಟ್ಟೆಗೆ ಒದಗಿಸುವ ವ್ಯವಸ್ಥೆ ಆರಂಭವಾಯಿತು. ಮಲೆನಾಡು ಗಿಡ್ಡದ ಹಾಲಿನಿಂದ ತಯಾರಿಸುವ ನೈಸರ್ಗಿಕ ಐಸ್ಕ್ರೀಂಗೂ ಬೇಡಿಕೆ ಬಂತು. ಹಸುವಿನ ಸೆಗಣಿ ಮತ್ತು ಗಂಜಲಕ್ಕೂ ಹಲವು ರೀತಿಯ ಬಳಕೆ ಮತ್ತು ಮೌಲ್ಯವರ್ಧನೆಯ ಸಾಧ್ಯತೆಗಳಿವೆ ಎಂಬುದನ್ನು ಈಗಾಗಲೇ ಸಂಸ್ಥೆ ಕಂಡುಕೊಂಡಿದೆ.
ಸೆಗಣಿಯಿಂದ ಊದುಬತ್ತಿ, ಧೂಪದ ಕಡ್ಡಿ, ಸಾಬೂನು, ಗೋಅರ್ಕ, ವಿಭೂತಿ, ಕರಿಭಸ್ಮ, ಹಣತೆ, ಗಣಪತಿ ಮತ್ತು ಗೌರಿ ವಿಗ್ರಹಗಳನ್ನು ತಯಾರಿಸುವ ವಿಧಾನಗಳನ್ನು ರೈತರಿಗಲ್ಲಿ ಪರಿಚಯಿಸಲಾಗುತ್ತಿದೆ. ಇವುಗಳನ್ನು ತಯಾರಿಸುವ ತರಬೇತಿ, ಕೌಶಲ ಮತ್ತು ಮಾರುಕಟ್ಟೆಯ ಸಂಪರ್ಕ ಕಲ್ಪಿಸುವ ಕೆಲಸವೂ ಸಂಸ್ಥೆಯ ವ್ಯಾಪ್ತಿಯಲ್ಲಿದೆ. ಸೆಗಣಿಯನ್ನು ಹಟ್ಟಿಯೊಳಗೆ ಸೊಪ್ಪಿನೊಂದಿಗೆ ಬೆರೆಸಿ ಕೃಷಿಗೆ ಬಳಸುವ ಸಾಂಪ್ರದಾಯಿಕ ಪದ್ಧತಿಯ ಜೊತೆಗೆ ಉತ್ತಮ ಸಾವಯವ ಗೊಬ್ಬರ, ಜೀವಾಮೃತ ಮತ್ತು ಇತರ ಕೃಷಿ ಉಪಯೋಗಗಳಿಗೆ ಅದನ್ನು ಬಳಸಿಕೊಳ್ಳುವ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಹೀಗೆ ಹಸುವಿನ ಹಾಲಿನಿಂದ ಮಾತ್ರವಲ್ಲ, ಅದರ ಇತರ ಉತ್ಪನ್ನಗಳಿಂದಲೂ ರೈತನಿಗೆ ಆರ್ಥಿಕ ಪ್ರಯೋಜನ ದೊರೆಯಬೇಕು ಎನ್ನುವುದು ನಾಗೇಂದ್ರ ಬಳಗದ ಚಿಂತನೆ. ಈ ದಾರಿಯಲ್ಲಿ ಹಸು ಸಾಕುವುದು ಒಂದು ಹೊರೆಯಾಗದೆ ಕೃಷಿಕನ ಬದುಕಿಗೆ ಪೂರಕವಾಗಬೇಕು.
ರೈತರು ಒಂದೊಮ್ಮೆ ತಮ್ಮಲ್ಲಿರುವ ಹಸುಗಳನ್ನು ಸಾಕಲಾಗದೆ ಮಾರಾಟ ಮಾಡಲು ನಿರ್ಧರಿಸಿದಾಗಲೂ ಸಂಸ್ಥೆ ನೆರವಿಗೆ ಬರುತ್ತದೆ. ಅಂಥ ಹಸುಗಳನ್ನು ಖರೀದಿಸಿ ಸಾಕಲು ಆಸಕ್ತಿ ಇರುವವರಿಗೆ ಒದಗಿಸುವ ವ್ಯವಸ್ಥೆ ಇದೆ. ಮಲೆನಾಡಿನಿಂದ ದೂರದ ಬೆಂಗಳೂರು, ಮೈಸೂರು ಮುಂತಾದ ನಗರಗಳಲ್ಲಿ ನೆಲೆಸಿರುವ ಕೆಲವರು ತಮ್ಮ ಊರಿನ ನೆನಪಿಗಾಗಿ ಮಲೆನಾಡು ಗಿಡ್ಡವನ್ನು ಸಾಕಲು ಆಸಕ್ತಿ ತೋರಿಸುತ್ತಿದ್ದಾರೆ. ಬಾಲ್ಯದ ಮನೆಯಂಗಳ, ಹಳ್ಳಿಯ ಪರಿಸರ ಮತ್ತು ಕೃಷಿ ಬದುಕಿನ ನೆನಪುಗಳನ್ನು ಈ ಹಸುವಿನ ಮೂಲಕ ಉಳಿಸಿಕೊಳ್ಳಲು ಬಯಸುವವರೂ ಇದ್ದಾರೆ. ಹೀಗೆ ತಳಿಯ ಸಂವರ್ಧನೆಯನ್ನು ಹಳ್ಳಿಯ ರೈತರಿಗೆ ಮಾತ್ರ ಸೀಮಿತಗೊಳಿಸದೆ ದೂರದ ಹಳ್ಳಿ ಮೂಲದ ನಗರವಾಸಿಗಳನ್ನೂ ಅದರೊಂದಿಗೆ ಬೆಸೆಯುವ ಪ್ರಯತ್ನ ನಡೆಯುತ್ತಿದೆ.
ಸಂಸ್ಥೆಯ ಚಟುವಟಿಕೆಗಳು ಮಲೆನಾಡು ಗಿಡ್ಡದ ಸಾಕಣೆಗೆ ಮಾತ್ರ ಸೀಮಿತವಾಗಿಲ್ಲ. ಸಾವಯವ ಕೃಷಿಕರಿಗೆ ತರಬೇತಿ, ತರಕಾರಿ ಮತ್ತು ಹಣ್ಣುಹಂಪಲು ಬೆಳೆಸುವವರಿಗೆ ಮಾರ್ಗದರ್ಶನ, ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕೆಲಸಗಳೂ ನಡೆಯುತ್ತಿವೆ. ರೈತರ ತೋಟಗಳಲ್ಲಿ ಬಾಳೆಹಣ್ಣು, ಅಂಜೂರ, ಹಲಸು, ಮಾವು ಮತ್ತು ತರಕಾರಿಗಳು ಕೆಲವೊಮ್ಮೆ ಮಾರಾಟವಾಗದೆ ಹಾಳಾಗುತ್ತವೆ. ಅವುಗಳನ್ನು ಸಂಸ್ಕರಿಸಿ ಚಿಪ್ಸ್, ಉಪ್ಪಿನಕಾಯಿ ಮತ್ತು ಇತರ ಮೌಲ್ಯವರ್ಧಿತ ಉತ್ಪನ್ನಗಳನ್ನಾಗಿ ಪರಿವರ್ತಿಸುವ ಸಾಧ್ಯತೆಗಳಿವೆ. ರೈತರು ತಮ್ಮ ತೋಟದಲ್ಲಿ ಬೆಳೆಯುವ ಮುಖ್ಯ ಬೆಳೆಯನ್ನಷ್ಟೇ ಆದಾಯದ ಮೂಲವೆಂದು ನೋಡದೆ, ಅಲ್ಲಿ ದೊರೆಯುವ ಪ್ರತಿಯೊಂದು ಉತ್ಪನ್ನದ ಸಾಧ್ಯತೆಯನ್ನೂ ಗುರುತಿಸಬೇಕು ಎಂಬುದು ಸಂಸ್ಥೆಯ ಆಶಯ.
ಈ ಕೆಲಸದಲ್ಲಿ ರೈತ ಮಹಿಳೆಯರ ಪಾಲ್ಗೊಳ್ಳುವಿಕೆಗೂ ಮಹತ್ವ ನೀಡಲಾಗಿದೆ. ಹಳ್ಳಿಗಳ ಮಹಿಳೆಯರಿಗೆ ಹಪ್ಪಳ, ಸಂಡಿಗೆ, ಚಿಪ್ಸ್, ಉಪ್ಪಿನಕಾಯಿ, ಸೋಪು ಮತ್ತು ಊದುಬತ್ತಿ ತಯಾರಿಸುವ ಅನುಭವವಿದೆ. ಆದರೆ ಅವುಗಳನ್ನು ಉದ್ಯಮವಾಗಿ ಬೆಳೆಸಲು ಬೇಕಾದ ತರಬೇತಿ, ಬಂಡವಾಳ, ಗುಣಮಟ್ಟದ ಅರಿವು ಮತ್ತು ಮಾರುಕಟ್ಟೆಯ ಸಂಪರ್ಕ ಇರುವುದಿಲ್ಲ. ನಾಗೇಂದ್ರ ಅವರ ಪತ್ನಿ ವಾಣಿಶ್ರೀ ಅವರು ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಘಟಕ ಯೋಜನೆಯಡಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಸಕ್ತ ರೈತ ಮಹಿಳೆಯರಿಗೆ ಯೋಜನೆಯ ಮಾಹಿತಿ ನೀಡುವುದು, ಸರಕಾರಿ ಸಾಲ ಮತ್ತು ಸಬ್ಸಿಡಿ ಸೌಲಭ್ಯಗಳನ್ನು ಪರಿಚಯಿಸುವುದು, ಅರ್ಜಿ ಸಲ್ಲಿಕೆಯಿಂದ ಉದ್ಯಮ ಆರಂಭಿಸುವವರೆಗಿನ ಪ್ರಕ್ರಿಯೆಯಲ್ಲಿ ಮಾರ್ಗದರ್ಶನ ನೀಡುವುದು ಅವರ ಕೆಲಸ. ಸುಮಾರು ಐವತ್ತು ಸಾವಿರದಿಂದ ಅರವತ್ತು ಸಾವಿರ ರೂಪಾಯಿಗಳವರೆಗಿನ ಅನುದಾನದ ಅವಕಾಶಗಳನ್ನು ಬಳಸಿಕೊಂಡು ಮಹಿಳೆಯರನ್ನು ಸಣ್ಣ ಉದ್ಯಮಿಗಳನ್ನಾಗಿ ರೂಪಿಸುವ ಪ್ರಯತ್ನವೂ ಇದರಲ್ಲಿದೆ.
ಎಲ್ಲ ಮಹಿಳೆಯರೂ ಒಂದೇ ಉತ್ಪನ್ನ ತಯಾರಿಸಬೇಕೆಂಬ ಒತ್ತಾಯವಿಲ್ಲ. ಯಾರಿಗೆ ಯಾವ ವಸ್ತುವನ್ನು ಉತ್ತಮವಾಗಿ ತಯಾರಿಸಲು ಸಾಧ್ಯವಿದೆಯೋ ಅವರಿಂದ ಅದನ್ನೇ ಉತ್ಪಾದಿಸುವಂತೆ ಪ್ರೋತ್ಸಾಹಿಸಲಾಗುತ್ತದೆ. ‘ಉತ್ಪನ್ನಗಳಿಗೆ ಗ್ರಾಹಕರು ಸಿಗುತ್ತಾರೆ, ಅವುಗಳನ್ನು ಖರೀದಿಸುವ ವ್ಯವಸ್ಥೆ ಇದೆ’ ಎಂಬ ವಿಶ್ವಾಸ ಮೂಡಿದಾಗ ಮಹಿಳೆಯರು ಉದ್ಯಮದತ್ತ ಹೆಜ್ಜೆ ಇಡುತ್ತಾರೆ. ಈ ಮೂಲಕ ಕೃಷಿ ಉತ್ಪಾದನೆಯಿಂದ ಸಂಸ್ಕರಣೆ, ಪ್ಯಾಕಿಂಗ್ ಮತ್ತು ಮಾರುಕಟ್ಟೆಯವರೆಗೆ ಒಂದು ಸರಪಳಿಯನ್ನು ರೂಪಿಸುವ ಪ್ರಯತ್ನ ನಡೆಯುತ್ತಿದೆ. ಹಳ್ಳಿಯ ಮಹಿಳೆಯರ ಕೈಚಳಕಕ್ಕೆ ಆರ್ಥಿಕ ಮೌಲ್ಯ ದೊರೆಯಬೇಕು ಎನ್ನುವುದೂ ಇದರ ಹಿಂದಿನ ಉದ್ದೇಶ.
ನಾಗೇಂದ್ರ ಅವರ ಪ್ರಕಾರ, ರೈತರಿಗೆ ಹಣಕಾಸಿನ ನೆರವು ನೀಡುವುದಷ್ಟೇ ಸಾಕಾಗುವುದಿಲ್ಲ. ಸೂಕ್ತ ಮಾಹಿತಿ, ತರಬೇತಿ, ಉತ್ಪನ್ನದ ಗುಣಮಟ್ಟದ ಅರಿವು ಮತ್ತು ಮಾರುಕಟ್ಟೆಯ ಭರವಸೆಯೂ ಬೇಕು. ಬಹುರಾಷ್ಟ್ರೀಯ ಕಂಪೆನಿಗಳಿಂದ ತಯಾರಾದ ವಸ್ತುಗಳನ್ನು ರೈತರಿಗೆ ಒದಗಿಸುವುದಕ್ಕಿಂತ ರೈತರೇ ತಯಾರಿಸಿದ ವಸ್ತುಗಳನ್ನು ರಾಷ್ಟ್ರಮಟ್ಟದ ಮಾರುಕಟ್ಟೆಗೆ ಪರಿಚಯಿಸುವುದು ಮುಖ್ಯ. ರೈತರು ಕೇವಲ ಕಚ್ಚಾ ವಸ್ತುಗಳನ್ನು ಉತ್ಪಾದಿಸಿ ಮಧ್ಯವರ್ತಿಗಳಿಗೆ ಒಪ್ಪಿಸುವವರಾಗದೆ, ಅವುಗಳನ್ನು ಮೌಲ್ಯವರ್ಧಿತ ಉತ್ಪನ್ನಗಳನ್ನಾಗಿ ಪರಿವರ್ತಿಸಿ ನೇರವಾಗಿ ಮಾರುಕಟ್ಟೆಗೆ ಒದಗಿಸುವವರಾಗಬೇಕು. ಆಗ ಉತ್ಪನ್ನದ ಮೌಲ್ಯದ ಹೆಚ್ಚಿನ ಪಾಲು ರೈತರ ಬಳಿಯೇ ಉಳಿಯಲು ಸಾಧ್ಯ. ಕೃಷಿಯಿಂದಲೇ ಬದುಕು ಕಟ್ಟಿಕೊಳ್ಳುವ ಅವಕಾಶಗಳು ಹೆಚ್ಚಬೇಕು, ಯುವಕರು ಹಳ್ಳಿಗಳನ್ನು ತೊರೆದು ನಗರಗಳಿಗೆ ವಲಸೆ ಹೋಗುವ ಅನಿವಾರ್ಯತೆ ಕಡಿಮೆಯಾಗಬೇಕು ಎಂಬುದು ಅವರ ಆಶಯ.
ಈ ಎಲ್ಲ ಚಟುವಟಿಕೆಗಳ ನಡುವೆ ಸಂಸ್ಥೆ ಕೈಗೆತ್ತಿಕೊಂಡಿರುವ ಮತ್ತೊಂದು ಮುಖ್ಯ ಕೆಲಸ ಮಣ್ಣು ಪರೀಕ್ಷಾ ಕೇಂದ್ರದ ಸ್ಥಾಪನೆ. ನಾಗೇಂದ್ರ ಅವರ ಗಮನಕ್ಕೆ ಬಂದಿರುವಂತೆ ಬಹುತೇಕ ರೈತರಿಗೆ ತಮ್ಮ ಕೃಷಿ ಭೂಮಿಯ ಮಣ್ಣಿನಲ್ಲಿರುವ ಪೋಷಕಾಂಶಗಳ ಸ್ಥಿತಿಗತಿಯ ಬಗ್ಗೆ ವೈಜ್ಞಾನಿಕ ಅರಿವಿಲ್ಲ. ಕೃಷಿಯ ವಾಣಿಜ್ಯೀಕರಣ ಮತ್ತು ಏಕಬೆಳೆ ಪದ್ಧತಿಯ ವಿಸ್ತರಣೆಯೊಂದಿಗೆ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ ಹೆಚ್ಚಾಗಿದೆ. ಸಸ್ಯಜನ್ಯ ಮತ್ತು ಪ್ರಾಣಿಜನ್ಯ ಸಾವಯವ ಗೊಬ್ಬರಗಳ ಬಳಕೆ ಕಡಿಮೆಯಾಗಿದೆ. ಇದರಿಂದ ಮಣ್ಣಿನ ಸಹಜ ಗುಣಧರ್ಮ ಮತ್ತು ಪೋಷಕಾಂಶಗಳ ಸಮತೋಲನದ ಮೇಲೆ ಪರಿಣಾಮ ಬೀರಿದೆ. ಮಣ್ಣಿನಲ್ಲಿ ಯಾವ ಅಂಶದ ಕೊರತೆಯಿದೆ, ಯಾವುದರ ಪ್ರಮಾಣ ಹೆಚ್ಚಾಗಿದೆ ಎಂಬುದನ್ನು ಕಣ್ಣಿನಿಂದ ನೋಡಿ ನಿರ್ಧರಿಸಲು ಸಾಧ್ಯವಿಲ್ಲ. ಅದಕ್ಕೆ ವೈಜ್ಞಾನಿಕ ಪರೀಕ್ಷೆ ಅಗತ್ಯ.
ಮಣ್ಣು ಪರೀಕ್ಷೆ ಎಂದರೆ ಒಂದು ವರದಿ ಪಡೆದುಕೊಳ್ಳುವುದಷ್ಟೇ ಅಲ್ಲ. ಅದರ ಆಧಾರದ ಮೇಲೆ ಭೂಮಿಗೆ ಅಗತ್ಯವಾದ ಪೋಷಕಾಂಶಗಳನ್ನು ಸೂಕ್ತ ಪ್ರಮಾಣದಲ್ಲಿ ಒದಗಿಸುವುದು, ಮಣ್ಣಿನ ಆರೋಗ್ಯವನ್ನು ಕಾಪಾಡುವುದು ಮತ್ತು ಅನಗತ್ಯ ಗೊಬ್ಬರಗಳ ಬಳಕೆಯಿಂದ ಆಗುವ ವೆಚ್ಚವನ್ನು ಕಡಿಮೆ ಮಾಡುವುದು. ಕೃಷಿ ಭೂಮಿಯ ಮಣ್ಣಿನ ಸಾಲವನ್ನು ತುಂಬಿಸುವ ಕೆಲಸವೂ ಹೌದು. ಈ ಅಗತ್ಯವನ್ನು ಮನಗಂಡು ಸಂಸ್ಥೆಯ ಆವರಣದಲ್ಲಿಯೇ ಮಣ್ಣು ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸಂಸದ ಬಿ.ವೈ. ರಾಘವೇಂದ್ರ ಅವರ ಸ್ಥಳೀಯ ಅಭಿವೃದ್ಧಿ ನಿಧಿಯ ನೆರವಿನಿಂದ ಈ ಘಟಕ ರೂಪುಗೊಂಡಿದ್ದು, ಅಗತ್ಯವಾದ ವೈಜ್ಞಾನಿಕ ವಿಶ್ಲೇಷಣಾ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಪರೀಕ್ಷೆ ಮತ್ತು ವಿಶ್ಲೇಷಣೆಯ ಕೆಲಸಕ್ಕಾಗಿ ನುರಿತ ವ್ಯಕ್ತಿಯನ್ನೂ ಆಯ್ಕೆ ಮಾಡಲಾಗಿದೆ. ಸ್ಥಳೀಯ ರೈತರು ತಮ್ಮ ಭೂಮಿಯ ಮಣ್ಣನ್ನು ಸುಲಭವಾಗಿ ಪರೀಕ್ಷಿಸಿಕೊಳ್ಳಲು ಇದರಿಂದ ಅನುಕೂಲವಾಗಲಿದೆ. ಭವಿಷ್ಯದಲ್ಲಿ ಮಣ್ಣಿನ ಆರೋಗ್ಯ ಕಾಪಾಡುವ ರೈತರಿಗೆ ಸರಕಾರವೇ ಪ್ರೋತ್ಸಾಹಧನ ನೀಡುವ ವ್ಯವಸ್ಥೆ ರೂಪುಗೊಳ್ಳಬಹುದು ಎಂಬ ನಿರೀಕ್ಷೆಯೂ ನಾಗೇಂದ್ರ ಅವರಿಗಿದೆ.
ಸಂಸ್ಥೆಯ ಆಡಳಿತ ವ್ಯವಸ್ಥೆಯನ್ನೂ ರೈತರ ಸಹಭಾಗಿತ್ವಕ್ಕೆ ಅನುಕೂಲವಾಗುವಂತೆ ರೂಪಿಸಲಾಗಿದೆ. ತಂಡದ ಸದಸ್ಯರು ಹಳ್ಳಿಹಳ್ಳಿಗೆ ತೆರಳಿ ರೈತರನ್ನು ಸಂಪರ್ಕಿಸಿ ಸಂಸ್ಥೆಯ ಉದ್ದೇಶ ಮತ್ತು ಪ್ರಯೋಜನಗಳನ್ನು ವಿವರಿಸಿದ್ದಾರೆ. ಹತ್ತು ಜನರ ನಿರ್ದೇಶಕ ಮಂಡಳಿ, ಐದು ವರ್ಷಗಳ ಅಧಿಕಾರಾವಧಿ ಮತ್ತು ತನ್ನದೇ ಆದ ನಿಯಮಾವಳಿಗಳೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ರೈತರು ಸಂಸ್ಥೆಗೆ ಭೇಟಿ ನೀಡಿ ಚಟುವಟಿಕೆಗಳನ್ನು ವೀಕ್ಷಿಸಲು ಮತ್ತು ತರಬೇತಿ ಪಡೆಯಲು ಅಗತ್ಯವಾದ ಸ್ಥಳಾವಕಾಶವೂ ಇದೆ. ಆರಂಭದ ವರ್ಷಗಳಲ್ಲಿ ದೊರೆತ ಸರಕಾರಿ ಹ್ಯಾಂಡ್ ಹೋಲ್ಡಿಂಗ್ ನೆರವಿನ ಅವಧಿ ಮುಗಿದಿರುವುದರಿಂದ ಮುಂದೆ ಸಂಸ್ಥೆ ತನ್ನದೇ ಆದ ಆರ್ಥಿಕ ಚಟುವಟಿಕೆಗಳ ಮೂಲಕ ಸ್ವಾವಲಂಬಿಯಾಗಬೇಕಿದೆ. ಮಣ್ಣು ಪರೀಕ್ಷೆ, ಕೃಷಿ ಉತ್ಪನ್ನಗಳ ಖರೀದಿ ಮತ್ತು ಮಾರಾಟ, ಮೌಲ್ಯವರ್ಧಿತ ವಸ್ತುಗಳ ಮಾರುಕಟ್ಟೆ ಇವುಗಳ ಮೂಲಕ ನಿರ್ವಹಣಾ ವೆಚ್ಚವನ್ನು ನಿಭಾಯಿಸಿಕೊಂಡು ರೈತರಿಗೆ ನೆರವಾಗುವ ಕೆಲಸವನ್ನು ಮುಂದುವರಿಸುವುದು ಅದರ ಮುಂದಿನ ಸವಾಲು.
ಮಲೆನಾಡು ಗಿಡ್ಡ ಅಭಿವೃದ್ಧಿ ಸಂಸ್ಥೆಯ ಆಶಯವನ್ನು ವಿವರಿಸುವಾಗ ನಾಗೇಂದ್ರ ಒಂದು ಮುಖ್ಯವಾದ ಮಾತನ್ನು ಹೇಳುತ್ತಾರೆ. ಮಲೆನಾಡು ಗಿಡ್ಡದ ಅಭಿವೃದ್ಧಿ ಎಂದರೆ ಕೇವಲ ಆ ತಳಿಯನ್ನೇ ಉಳಿಸುವುದಲ್ಲ. ಅದನ್ನು ಕೇಂದ್ರವಾಗಿಟ್ಟುಕೊಂಡು ಇಡೀ ರೈತ ಸಮುದಾಯದ ಆರ್ಥಿಕ ಪುನಶ್ಚೇತನಕ್ಕೆ ಪ್ರಯತ್ನಿಸುವುದು. ಇಂದು ಮಲೆನಾಡು ಗಿಡ್ಡ ಸಾಕುವ ರೈತ ನಾಳೆ ಬೇರೆ ತಳಿಯ ಹಸು ಸಾಕಬಹುದು, ಬೇರೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ಆದರೆ ಅವನ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯಬೇಕು. ಅವನ ದುಡಿಮೆಗೆ ಮಾರುಕಟ್ಟೆಯಲ್ಲಿ ಗೌರವ ಸಿಗಬೇಕು. ಅವನ ಬದುಕು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಇದೇ ಸಂಸ್ಥೆಯ ನಿಜವಾದ ಉದ್ದೇಶ.
ರೈತನ ತೋಟದಲ್ಲಿ ಹಾಳಾಗುವ ಒಂದು ಹಣ್ಣಿಗೂ ಮಾರುಕಟ್ಟೆ ಹುಡುಕುವುದು, ಒಂದು ಹಸುವಿನ ಸಗಣಿಗೂ ಮೌಲ್ಯ ಕಂಡುಕೊಳ್ಳುವುದು, ಮಹಿಳೆಯೊಬ್ಬಳ ಕೈಚಳಕವನ್ನು ಸಣ್ಣ ಉದ್ಯಮವಾಗಿ ಬೆಳೆಸುವುದು, ಮಣ್ಣಿನ ಆರೋಗ್ಯವನ್ನು ಪರೀಕ್ಷಿಸಿ ಕೃಷಿ ವೆಚ್ಚವನ್ನು ಕಡಿಮೆ ಮಾಡುವ ಪ್ರಯತ್ನ ಮಾಡುವುದು ಇವೆಲ್ಲವೂ ಒಂದೇ ಕೃಷಿ ಚಿಂತನೆಯ ಬೇರೆ ಬೇರೆ ಮುಖಗಳು. ರೈತನಿಗೆ ತಿಂಗಳಿಗೆ ಐದು ಸಾವಿರ ರೂಪಾಯಿ ಹೆಚ್ಚುವರಿ ಆದಾಯ ದೊರೆಯುವಂತಾದರೂ ಅವನ ಮನೆಯ ಹಲವು ಆರ್ಥಿಕ ಒತ್ತಡಗಳು ಕಡಿಮೆಯಾಗಬಹುದು. ಕೃಷಿಯ ಆದಾಯವೆಂದರೆ ವರ್ಷಕ್ಕೊಮ್ಮೆ ಕೈಗೆ ಬರುವ ದೊಡ್ಡ ಮೊತ್ತ ಮಾತ್ರವಲ್ಲ; ಮನೆಯ ದೈನಂದಿನ ಖರ್ಚಿಗೆ ನೆರವಾಗುವ ಇಂಥ ಸಣ್ಣ ಆದಾಯದ ಮೂಲಗಳೂ ಬಹಳ ಮುಖ್ಯ.
ಒಂದು ದೇಸಿ ಹಸುವಿನ ತಳಿಯನ್ನು ಉಳಿಸುವ ಚಿಂತನೆಯಿಂದ ಆರಂಭವಾದ ನಾಗೇಂದ್ರ ಸಾಗರ್ ಮತ್ತು ಅವರ ಬಳಗದ ಪ್ರಯತ್ನ ಇಂದು ರೈತ ಉತ್ಪಾದನೆ, ಮೌಲ್ಯವರ್ಧನೆ, ಮಹಿಳೆಯರ ಉದ್ಯಮಶೀಲತೆ, ಮಣ್ಣು ಪರೀಕ್ಷೆ, ಸಾವಯವ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಪುನಶ್ಚೇತನದವರೆಗೆ ವಿಸ್ತರಿಸಿದೆ. ಇಲ್ಲಿ ಮಲೆನಾಡು ಗಿಡ್ಡ ಕೇವಲ ಒಂದು ಹಸುವಿನ ತಳಿಯಲ್ಲ; ರೈತನನ್ನು ಮತ್ತೆ ಕೃಷಿಯೊಂದಿಗೆ ಬೆಸೆಯುವ ಒಂದು ನೆಪ. ಹಸುವಿನಿಂದ ಗೊಬ್ಬರ, ಗೊಬ್ಬರದಿಂದ ಆರೋಗ್ಯಕರ ಮಣ್ಣು, ಮಣ್ಣಿನಿಂದ ಕೃಷಿ ಉತ್ಪನ್ನ, ಉತ್ಪನ್ನದಿಂದ ಮೌಲ್ಯವರ್ಧನೆ, ಅದಕ್ಕೆ ಮಾರುಕಟ್ಟೆ ಮತ್ತು ಆ ಮೂಲಕ ರೈತನ ಮನೆಗೆ ಆದಾಯ ತಲುಪುವ ಒಂದು ಸರಪಳಿ ಇಲ್ಲಿ ರೂಪುಗೊಳ್ಳುತ್ತಿದೆ. ರೈತನಿಗೆ ಕೇವಲ ಕೃಷಿ ಉಳಿಸಿಕೊಳ್ಳಿ ಎಂದು ಉಪದೇಶಿಸುವುದರಿಂದ ಪ್ರಯೋಜನವಿಲ್ಲ. ಅವನ ಉತ್ಪನ್ನಕ್ಕೆ ಬೆಲೆ ಸಿಗಬೇಕು, ಅವನ ದುಡಿಮೆಗೆ ಗೌರವ ದೊರೆಯಬೇಕು, ಕೃಷಿಯ ಆವರಣದಲ್ಲಿರುವ ಸಂಪನ್ಮೂಲಗಳ ಮೂಲಕವೇ ಬದುಕಿಗೆ ಹೊಸ ಆದಾಯದ ದಾರಿಗಳು ತೆರೆದುಕೊಳ್ಳಬೇಕು. ನಾಗೇಂದ್ರ ಬಳಗದ ಈ ಪ್ರಯತ್ನದಲ್ಲಿ ಕಾಣಿಸುವ ಮುಖ್ಯವಾದ ಆಶಯ ಇದೇ.
(ಅಂಕಣಕಾರರು: ಉಪನ್ಯಾಸಕರು, ಚಿಂತಕರು)