ಪಿರಿಯಾಪಟ್ಟಣ ರೈತ ‘ನಮ್ಮ ಊರಿನ ಹುಡುಗರಿಗೆ ಹೆಣ್ಣು ಸಿಗುತ್ತಿಲ್ಲ’ ಎನ್ನುವಾಗ ವೇದಿಕೆಯಲ್ಲಿದ್ದವರು ನಕ್ಕಿರಬಹುದು. ಆದರೆ ಆ ರೈತನ ಮಾತಿನ ಹಿಂದೆ ಒಂದು ದಿನ ಖಾಲಿಯಾಗಬಹುದಾದ ಮನೆಗಳಿವೆ. ಪಾಳು ಬೀಳಬಹುದಾದ ಹೊಲಗಳಿವೆ. ಹಿರಿಯರಾಗಿ ಉಳಿಯುವ ತಂದೆ-ತಾಯಿಗಳಿದ್ದಾರೆ. ಮುಂದಿನ ತಲೆಮಾರಿಗೆ ಹೋಗದ ಕೃಷಿ ಜ್ಞಾನವಿದೆ.

ಪಿರಿಯಾಪಟ್ಟಣದಲ್ಲಿ ಮೊನ್ನೆ ಮೊನ್ನೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಪ್ರಜಾಸೇವೆ’ಯಲ್ಲಿ ಜನರ ಅಹವಾಲು ಆಲಿಸುತ್ತಿದ್ದಾಗ ರೈತರೊಬ್ಬರು ಬರ, ಬೆಳೆ, ಬೆಲೆ, ಸಾಲದ ಮಾತುಗಳನ್ನೇನೂ ಆಡದೆ, ತಮ್ಮ ಊರಿನ ಅನೇಕ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ; ಕೆಲವರು ಜಿಗುಪ್ಸೆಗೊಂಡು ಆತ್ಮಹತ್ಯೆಯ ದಾರಿಯನ್ನೂ ಹಿಡಿದಿದ್ದಾರೆ. ಈ ಸಮಸ್ಯೆಗೆ ಸರಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದರು. ವೇದಿಕೆಯಲ್ಲಿದ್ದ ಕೆಲವರು ಅದನ್ನು ತಮಾಷೆಯಾಗಿ ತೆಗೆದುಕೊಂಡು ನಕ್ಕರು. ಆದರೆ ಆ ರೈತನ ಮಾತಿನ ಹಿಂದೆ ಎಷ್ಟು ದೊಡ್ಡ ಸಾಮಾಜಿಕ ನೋವು ಅಡಗಿದೆ ಎಂಬುದನ್ನು ಗಮನಿಸಬೇಕು. ಇದು ಪಿರಿಯಾಪಟ್ಟಣದ ಸಮಸ್ಯೆಯಷ್ಟೇ ಅಲ್ಲ. ಇಡೀ ರಾಜ್ಯ, ದೇಶದ ಸಮಸ್ಯೆ. ಒಂದು ಕಾಲದಲ್ಲಿ ಕೃಷಿಕನ ಮನೆಯಲ್ಲಿರುವ ಜಮೀನು, ಮನೆ, ಹಸು, ತೋಟ, ಹೊಲ ಇವೆಲ್ಲವೂ ಕುಟುಂಬದ ಆರ್ಥಿಕ ಭದ್ರತೆಯ ಗುರುತುಗಳಾಗಿದ್ದವು. ಈಗ ಅವೇ ಕೆಲವು ಸಂದರ್ಭಗಳಲ್ಲಿ ಮನೆಮಗನ ಮದುವೆಗೆ ಸಾಕಾಗದ ಅರ್ಹತೆಗಳಾಗಿವೆ. ಹತ್ತು ಎಕರೆ ಇರಲಿ, ನೂರು ಎಕರೆ ಇರಲಿ, ತೆಂಗು-ಅಡಿಕೆ ತೋಟ ಇರಲಿ, ಹಟ್ಟಿಯಲ್ಲಿ ಹಸುಗಳಿರಲಿ, ಮನೆಯ ಮುಂದೆ ನಾಲ್ಕು ಕಾರುಗಳಿರಲಿ; ಆ ಮನೆಯ ಯುವಕನಿಗೆ ಮದುವೆಯಾಗಲು ಹೆಣ್ಣು ಸಿಗದ ಪರಿಸ್ಥಿತಿ ಇಂದು ಅನೇಕ ಕೃಷಿ ಕುಟುಂಬಗಳಲ್ಲಿ ಕಾಣಿಸುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಹವ್ಯಕ ಸಮಾಜದಲ್ಲಿ ಈ ಬದಲಾವಣೆಯನ್ನು ನಾನು ಬಹಳ ವರ್ಷಗಳ ಹಿಂದೆಯೇ ಹತ್ತಿರದಿಂದ ನೋಡಿದ್ದೇನೆ. ಕೆಲವೊಂದು ಮನೆಗಳ ಆರ್ಥಿಕ ಸ್ಥಿತಿ ಹೇಗಿದೆ ಎನ್ನುವುದನ್ನು ಹೊರಗಿನಿಂದ ನೋಡಿದರೆ ಅಚ್ಚರಿಯಾಗುತ್ತದೆ. ಹೊಲ, ತೋಟ, ಹಸು, ಮನೆ, ಉಳಿತಾಯ, ಆಸ್ತಿಪಾಸ್ತಿ ಎಲ್ಲವೂ ಇರುತ್ತವೆ. ಆದರೆ ಮನೆಯ ಯುವಕನ ಮದುವೆಯ ವಿಷಯ ಬಂದಾಗ ಈ ಸಂಪತ್ತಿಗೆ ಇದ್ದಕ್ಕಿದ್ದಂತೆ ಬೇರೆ ಅರ್ಥ ಬರುತ್ತದೆ. ಕೃಷಿಯಲ್ಲಿ ದುಡಿಯುವ ಹುಡುಗನಿಗೆ ಹೆಣ್ಣು ಕೊಡುವುದಕ್ಕಿಂತ ನಗರದಲ್ಲಿ ಯಾವುದೋ ಚಿಕ್ಕ ಉದ್ಯೋಗ ಮಾಡುತ್ತಿರುವ ಹುಡುಗನಿಗೆ ಹೆಣ್ಣು ಕೊಡುವುದು ಸುರಕ್ಷಿತ ಎಂಬ ಭಾವನೆ ಅನೇಕ ಕುಟುಂಬಗಳಲ್ಲಿ ಬೆಳೆದಿದೆ. ಕೃಷಿ ಮನೆಯ ಹುಡುಗನನ್ನು ಒಪ್ಪುವ ಹುಡುಗಿಗಿಂತ ಈ ಕುರಿತು ಗಂಭೀರವಾಗಿ ಯೋಚನೆ ಮಾಡುವವರು ಆಕೆಯ ಅಪ್ಪ ಅಮ್ಮ. ಕೃಷಿ ಈಗ ಭಾಗಶಃ ಸಂಪತ್ತು ನೆಮ್ಮದಿ ಪರಾವಲಂಬನೆ ತಪ್ಪುವ ವೃತ್ತಿಯಾಗಿದ್ದರೂ, ಸಾಮಾಜಿಕ ಪ್ರತಿಷ್ಠೆ ಕೊಡುವ ವೃತ್ತಿಯೆಂಬ ಭಾವನೆ ನಿಧಾನವಾಗಿ ಕಳೆದುಹೋಗಿದೆ.

ಹೆಣ್ಣುಮಕ್ಕಳಿಗೆ ತಮ್ಮ ಬದುಕಿನ ಸಂಗಾತಿಯನ್ನು ಆಯ್ಕೆಮಾಡುವ ಹಕ್ಕು ಇದ್ದೇ ಇದೆ. ಅವರು ಕೂಡ ತಮ್ಮ ಭವಿಷ್ಯದ ಬದುಕು ಹೇಗಿರಬೇಕು ಎಂಬುದನ್ನು ಯೋಚಿಸುತ್ತಾರೆ. ನಾನು ಹಳ್ಳಿಗೆ ಹೋಗಿ ಬದುಕಬೇಕೇ?, ಮದುವೆಯಾದ ಮೇಲೆ ಅತ್ತೆ-ಮಾವನ ಜೊತೆ ಇರಬೇಕೇ?, ಹೊಲ-ತೋಟ ನೋಡಿಕೊಳ್ಳಬೇಕೇ?, ಬೆಳಗ್ಗೆ ಎದ್ದು ಹಸುಗಳಿಗೆ ಮೇವು ಹಾಕಬೇಕೇ?, ಹಾಲು ಕರೆಯ ಬೇಕೆ?, ಸೆಗಣಿ ಗಂಜಲ ಬಾಚ ಬೇಕೇ, ಮನೆ ಮತ್ತು ಕೃಷಿಯ ಎರಡೂ ಹೊಣೆ ನನ್ನ ಮೇಲಾಗುತ್ತದೆಯೇ? ಎಂಬ ಪ್ರಶ್ನೆಗಳು ಅವರಿಗೂ ಇವೆ. ಕೆಲವೊಮ್ಮೆ ಇಂಥ ಪ್ರಶ್ನೆಗಳು ಕೆಲವರಿಗೆ ಕಠಿಣವಾಗಿ ಕಾಣಬಹುದು. ಹುಡುಗರನ್ನು ತತ್ತರಿಸುವಂತೆ ಮಾಡಬಹುದು. ಆದರೆ ಆ ಪ್ರಶ್ನೆಗಳ ಹಿಂದೆ ಕೂಡ ಹೆಣ್ಣುಮಕ್ಕಳು ತಮ್ಮ ಬದುಕಿನ ಬಗ್ಗೆ ಭಯಪಡುವ ಒಂದು ವಾಸ್ತವವಿದೆ.

ರೈತನ ಮನೆಗೆ ಸೊಸೆ ಬೇಕು; ಆದರೆ ತನ್ನಂತೆ ಮನೆಗೆ ಬರುವ ಸೊಸೆ ಕೂಡ ಕೃಷಿಕೆಯಾಗಬೇಕೆಂದು ಭಾವಿಸಲು ಆತ ಸಿದ್ಧನಿಲ್ಲ.! ಹುಡುಗಿಗೆ ನಗರದಲ್ಲಿ ಕೆಲಸ ಬೇಕು; ಹುಡುಗನ ಕುಟುಂಬಕ್ಕೆ ಮನೆಯ ಜವಾಬ್ದಾರಿ ಹೊರುವ ಸೊಸೆ ಬೇಕು. ಹುಡುಗನಿಗೆ ಹೆಂಡತಿ ಬೇಕು; ಹುಡುಗಿಯ ಕುಟುಂಬಕ್ಕೆ ನಗರ ಜೀವನ ಬೇಕು. ಕೃಷಿ ಕುಟುಂಬಕ್ಕೆ ಕೃಷಿ ಉಳಿಯಬೇಕು; ಆದರೆ ಕೃಷಿ ಮನೆಯ ಹುಡುಗನಿಗೆ ಹೆಣ್ಣು ಕೊಡುವಾಗ ಆ ಕೃಷಿಯೇ ಒಂದು ಅಡಚಣೆಯಾಗುತ್ತದೆ.! ಈ ವಿರೋಧಾಭಾಸವನ್ನು ನಾವು ಗಮನಿಸದೆ ಕೇವಲ ‘ಹೆಣ್ಣುಮಕ್ಕಳು ಕಡಿಮೆಯಾಗಿದ್ದಾರೆ’ ಎಂದು ಹೇಳುವುದು ಸಮಸ್ಯೆಯನ್ನು ಮತ್ತಷ್ಟು ಸರಳಗೊಳಿಸುವುದೇ ಆಗಿದೆ.

ಪರಿಣಾಮವಾಗಿ ಈ ಭಾಗದ ಮದುವೆಯ ವಯಸ್ಸು ದಾಟಿದ ಅನೇಕ ಹವ್ಯಕ ಯುವಕರು ಬೇರೆ ಸಮುದಾಯಗಳ ಹುಡುಗಿಯರನ್ನು ಮದುವೆಯಾಗುತ್ತಿದ್ದಾರೆ. ಉತ್ತರ ಕರ್ನಾಟಕದ ಲಿಂಗಾಯತ ಕುಟುಂಬಗಳ ಹುಡುಗಿಯರನ್ನು ಉತ್ತರ ಕನ್ನಡಕ್ಕೆ ಸೊಸೆಯಾಗಿ ಕರೆದುಕೊಂಡು ಬಂದಿರುವವರನ್ನು ನೋಡಿದ್ದೇನೆ. ಕಾದು ಕಾದು ಹುಡುಗಿ ಸಿಗದೇ ನಲವತ್ತು ಐವತ್ತು ವರ್ಷ ದಾಟಿದ ಮೇಲೆ ಮದುವೆಯಾದವರಿದ್ದಾರೆ. ಕೆಲವರು ಜಾತಿ ಮೀರಿ ವಿಧವೆಯರನ್ನು ವರಿಸಿದ್ದಾರೆ. ಇವೆಲ್ಲ ತಪ್ಪು ಎಂದು ಹೇಳುವ ಪ್ರಶ್ನೆಯೇ ಇಲ್ಲ. ಸಮ ಸಮಾಜದ ಹಿನ್ನೆಲೆಯಲ್ಲಿ ಇದು ಅಗತ್ಯವೂ ಹೌದು. ಮನುಷ್ಯನ ಬದುಕಿಗೆ ಸಂಗಾತಿ ಬೇಕು; ಪ್ರೀತಿ, ಪರಸ್ಪರ ಗೌರವ ಮತ್ತು ಹೊಂದಾಣಿಕೆ ಇದ್ದರೆ ಜಾತಿಯ ಗಡಿ ಏಕೆ ಬೇಕು ಎಂಬ ಪ್ರಶ್ನೆಯೂ ಸಹಜ. ಹವ್ಯಕರ ಸಮುದಾಯದಲ್ಲಿ ಹುಡುಗರು ಮತ್ತು ಹುಡುಗಿಯರ ಸಂಖ್ಯೆಯಲ್ಲಿ ವ್ಯತ್ಯಾಸ ಇರಬಹುದು. ಅರುವತ್ತು-ನಲವತ್ತು ಎನ್ನುವ ಅನುಪಾತವೂ ಇರಬಹುದು. ಆದರೆ ಮದುವೆಯ ಸಮಸ್ಯೆಯನ್ನು ಕೇವಲ ಈ ಸಂಖ್ಯೆಯ ಲೆಕ್ಕದಲ್ಲಿ ನೋಡಿದರೆ ಅದರ ನಿಜವಾದ ಕಾರಣ ನಮಗೆ ಕಾಣಿಸುವುದಿಲ್ಲ. ಏಕೆಂದರೆ ಈ ಸಮುದಾಯದ ಹುಡುಗಿಯರು ಅಂತರ್ಜಾತೀಯ ಮದುವೆಗೆ ಸಿದ್ಧರಿಲ್ಲ ಎನ್ನುವುದೂ ಸರಿಯಲ್ಲ. ಬೇರೆ ಸಮುದಾಯದ ಹುಡುಗನನ್ನು ಮದುವೆಯಾಗುವ ಮನಸ್ಸು ಅವರಲ್ಲಿ ಕಾಣಿಸುತ್ತದೆ. ಸಾಕಷ್ಟು ಉದಾಹರಣೆಯೂ ಇದೆ. ಆದರೆ ತಮ್ಮದೇ ಸಮುದಾಯದ ಕೃಷಿಕ ಹುಡುಗನನ್ನು ಮದುವೆಯಾಗುವ ವಿಷಯ ಬಂದಾಗ ಮಾತ್ರ ಹಿಂಜರಿಕೆ ಕಾಣಿಸುತ್ತದೆ ಎನ್ನುತ್ತಾರೆ ಶಿರಸಿ ಸಮೀಪದ ತಾರಕೋಡದ ಕೆ.ಎನ್. ಹೆಗಡೆ. ಹಾಗಾದರೆ ಸಮಸ್ಯೆ ಹುಡುಗಿಯರ ಸಂಖ್ಯೆಯಲ್ಲ, ಕೃಷಿಕ ಬದುಕಿನ ಬಗ್ಗೆ ಬೆಳೆದಿರುವ ಮನೋಭಾವದಲ್ಲಿರಬಹುದೇ ಎಂಬ ಪ್ರಶ್ನೆ ಎದುರಾಗುತ್ತದೆ. ಈ ಭಾಗದ ಈ ಸಮುದಾಯದ ಮಠಗಳು, ಸ್ವಾಮೀಜಿಗಳು, ವಿವಿಧ ಸಂಘಟನೆಗಳು ಈ ಸಮಸ್ಯೆಯನ್ನು ಗಂಭೀರವಾಗಿ ಗಮನಿಸಿರುವುದು ಒಳ್ಳೆಯ ಸಂಗತಿ. ಅವರೆಲ್ಲ ಆಗಾಗ ವರ-ವಧುಗಳನ್ನು ಪರಿಚಯಿಸುವ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಮದುವೆಯಾಗಲು ಬಯಸುವ ಹುಡುಗ-ಹುಡುಗಿಯರು ಪರಸ್ಪರ ಭೇಟಿಯಾಗುವ ವೇದಿಕೆಗಳನ್ನು ಸೃಷ್ಟಿಸುತ್ತಾರೆ. ಆದರೆ ಈ ಕಾರ್ಯಕ್ರಮಗಳಲ್ಲೊಂದು ವಿಚಿತ್ರ ಅನುಭವವೂ ಇದೆ. ವರನ ಕಡೆಯವರು ಬರುತ್ತಾರೆಯೇ ಹೊರತು ಅಲ್ಲಿ ವಧುವಿನ ಕಡೆಯವರು ಬರುವುದಿಲ್ಲ. ಹುಡುಗಿಯರಿಗೆ ಇಂಥ ವೇದಿಕೆಗಳ ಅಗತ್ಯವೇ ಇಲ್ಲದಂತೆ ಕಾಣುತ್ತದೆ. ಇದೂ ಕೂಡ ನಾವು ಯೋಚಿಸಬೇಕಾದ ವಿಷಯ.

ಕೆಲವು ಕಡೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉತ್ತರದ ಕಾಶಿಯವರೆಗೂ ಹೋಗಿ ಸಮಾನಾಂತರ ಸಮುದಾಯದ ಹುಡುಗಿಯರನ್ನು ಹುಡುಕಿ, ಇಲ್ಲಿನ ಕೃಷಿಕ ಹುಡುಗರಿಗೆ ಮದುವೆ ಮಾಡಿಸಿದ ಉದಾಹರಣೆಗಳಿವೆ. ಮದುವೆ ನಡೆಯಿತು ಎಂದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುವುದಿಲ್ಲ. ಇಂಥ ಕೆಲವು ಮದುವೆಗಳು ನಂತರ ಯಶಸ್ವಿಯಾಗದೆ ಹೋದ ಅನುಭವಗಳೂ ಇವೆ. ಎರಡು ಕುಟುಂಬಗಳ ಸಂಸ್ಕೃತಿ, ಭಾಷೆ, ಬದುಕಿನ ಕ್ರಮ, ನಿರೀಕ್ಷೆಗಳು, ಕೃಷಿಯ ಬಗ್ಗೆ ಇರುವ ತಿಳಿವಳಿಕೆ ಮತ್ತು ಹೊಂದಾಣಿಕೆ ಇವೆಲ್ಲವೂ ಮದುವೆಯ ನಂತರದ ಬದುಕಿನಲ್ಲಿ ಮಹತ್ವ ಪಡೆದುಕೊಳ್ಳುತ್ತವೆ.

ಇಲ್ಲಿ ನನಗೆ ಮುಖ್ಯವಾಗಿ ಕಾಣಿಸುವ ಪ್ರಶ್ನೆ ಬೇರೆಯದು. ಒಂದು ಸಮುದಾಯದಲ್ಲಿ ಕೃಷಿ ತಲೆತಲಾಂತರಗಳಿಂದ ಬದುಕಿನ ಆಧಾರವಾಗಿದ್ದರೆ, ಅದೇ ಕೃಷಿಕ ಬದುಕು ಮದುವೆಯ ಮಾರುಕಟ್ಟೆಯಲ್ಲಿ ಏಕೆ ಹಿಂದುಳಿದ ಸ್ಥಾನಕ್ಕೆ ಹೋಗಬೇಕು? ಕೃಷಿಕ ಹುಡುಗ ಎಂದರೆ ಇನ್ನೂ ಮಣ್ಣಿನೊಂದಿಗೆ ಬದುಕುವವನು, ಆದರೆ ಇಂದಿನ ದೃಷ್ಟಿಯಲ್ಲಿ ಅವನಿಗೆ ಸ್ಥಿರವಾದ ಉದ್ಯೋಗವಿಲ್ಲ ಎನ್ನುವ ಭಾವನೆ ಏಕೆ ಮೂಡಿದೆ? ಕೃಷಿಯಿಂದ ಆದಾಯ ಪಡೆಯುವ ಸಾಮರ್ಥ್ಯ, ಭೂಮಿಯ ಮೌಲ್ಯ, ಸ್ವಂತ ಬದುಕನ್ನು ಕಟ್ಟಿಕೊಳ್ಳುವ ಸ್ವಾತಂತ್ರ್ಯ, ಆಹಾರವನ್ನು ಉತ್ಪಾದಿಸುವ ಜ್ಞಾನ ಇವೆಲ್ಲಕ್ಕಿಂತ ಕಚೇರಿಯ ಕೆಲಸ, ನಗರ ಜೀವನ ಮತ್ತು ಮಾಸಿಕ ಸಂಬಳಕ್ಕೆ ಏಕೆ ಹೆಚ್ಚಿನ ಮೌಲ್ಯ ಸಿಗುತ್ತಿದೆ? ನಮ್ಮ ಸೊಸೈಟಿಯ ಖಾತೆಯಲ್ಲಿ ಒಂದು ಕೋಟಿ ರೂ. ಠೇವಣಿ ಇಟ್ಟ ಯುವ ಕೃಷಿಕರೊಬ್ಬರಿದ್ದಾರೆ. ಅವರ ನಾಲ್ಕು ಎಕರೆ ಅಡಿಕೆ ತೋಟ, ಅಷ್ಟೇ ಕಾಳುಮೆಣಸು ಅದ್ಭುತವಾಗಿದೆ. ಪಾರ್ಚೂನರ್ ಕಾರಲ್ಲಿ ಓಡಾಡುತ್ತಾರೆ. ಅವರಿಗೆ ಕೃಷಿಕ ಎಂಬ ಒಂದೇ ಕಾರಣಕ್ಕಾಗಿ ಹೆಣ್ಣು ಸಿಗದೇ ಇದ್ದದ್ದು ಅತ್ಯಂತ ನೋವಿನ ಸಂಗತಿ ಎನ್ನುತ್ತಾರೆ ಬೈರುಂಬೆ ಸೊಸೈಟಿಯ ಕಾರ್ಯದರ್ಶಿ ಗಣಪತಿ ಎಂ. ಹೆಗಡೆ.

ಇದು ಹವ್ಯಕರ ಸಮಸ್ಯೆ ಅಷ್ಟೇ ಅಲ್ಲ. ಗ್ರಾಮೀಣ ಭಾರತದ ಅನೇಕ ಸಮುದಾಯಗಳಲ್ಲಿ ಕೃಷಿಕ ಹುಡುಗನ ಮದುವೆಯ ಪ್ರಶ್ನೆ ಇದೇ ದಿಕ್ಕಿನಲ್ಲಿ ಸಾಗುತ್ತಿದೆ. ಕೃಷಿ ಮಾಡುವ ಹುಡುಗನಿಗೆ ಹೆಣ್ಣು ಕೊಡುವುದಿಲ್ಲ ಎನ್ನುವುದು ಒಂದೆಡೆ; ಕೃಷಿ ಮಾಡುವ ಹುಡುಗಿಯೇ ಕೃಷಿಕನನ್ನು ಮದುವೆಯಾಗಲು ಸಿದ್ಧಳಿಲ್ಲ ಎನ್ನುವುದು ಇನ್ನೊಂದು ಕಡೆ. ಕೃಷಿಯನ್ನು ಗೌರವಿಸುವ ಮಾತು ಎಲ್ಲರ ಬಾಯಲ್ಲಿದೆ. ಆದರೆ ಕೃಷಿಕನನ್ನು ಜೀವನ ಸಂಗಾತಿಯಾಗಿ ಸ್ವೀಕರಿಸುವ ಸಂದರ್ಭದಲ್ಲಿ ಅದೇ ಗೌರವ ಕಾಣುವುದಿಲ್ಲ. ಹೀಗಾಗಿ ಮಠಗಳು, ಸ್ವಾಮೀಜಿಗಳು ಮತ್ತು ಸಂಘಟನೆಗಳು ವಧು-ವರರನ್ನು ಒಂದೆಡೆ ಸೇರಿಸುವ ಕಾರ್ಯಕ್ರಮಗಳನ್ನು ಮಾಡುವುದಷ್ಟೇ ಸಾಕಾಗುವುದಿಲ್ಲ. ಹುಡುಗಿಯರಿಗೆ ಕೃಷಿಕ ಬದುಕಿನ ಬಗ್ಗೆ ಇರುವ ಅಸಮಾಧಾನವೇನು, ಅವರ ಪೋಷಕರ ಆತಂಕವೇನು, ಕೃಷಿಕ ಹುಡುಗನನ್ನು ಮದುವೆಯಾಗಲು ಬಯಸುವ ಹುಡುಗಿಯ ನಿರೀಕ್ಷೆಗಳೇನು ಎಂಬುದನ್ನು ಕೇಳಬೇಕು. ಹಾಗೆಯೇ ಕೃಷಿಕ ಹುಡುಗರೂ ತಮ್ಮ ಬದುಕನ್ನು ಬದಲಿಸಿಕೊಳ್ಳಲು ಸಿದ್ಧರಾಗಬೇಕಿದೆ. ಕೃಷಿ ಎಂದರೆ ಕೇವಲ ಅಡಿಕೆ ತೋಟ, ಭತ್ತದ ಗದ್ದೆ, ಹಸು-ಕೋಳಿ ಸಾಕುವುದು ಮಾತ್ರವಲ್ಲ; ಜ್ಞಾನ, ತಂತ್ರಜ್ಞಾನ, ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ಹೊಸ ಆದಾಯದ ದಾರಿಗಳನ್ನು ಸೇರಿಸಿಕೊಂಡು ಕೃಷಿಯನ್ನು ಹೊಸ ಬದುಕಾಗಿ ಕಟ್ಟಿಕೊಳ್ಳುವ ಪ್ರಯತ್ನವೂ ಆಗಬೇಕು.

ಹುಡುಗಿಯನ್ನು ಎಲ್ಲಿಂದಲೋ ಹುಡುಕಿ ತಂದು ಕೃಷಿಕ ಹುಡುಗನಿಗೆ ಮದುವೆ ಮಾಡಿಸುವುದರಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಮದುವೆ ಎನ್ನುವುದು ಎರಡು ಕುಟುಂಬಗಳ ಜೋಡಣೆಯಷ್ಟೇ ಅಲ್ಲ, ಎರಡು ಬದುಕುಗಳ ಒಪ್ಪಂದವೂ ಹೌದು. ಕೃಷಿಕ ಬದುಕು ಗೌರವಯುತವೂ ಭವಿಷ್ಯವುಳ್ಳದ್ದೂ ಆಗಿದೆ ಎಂಬ ನಂಬಿಕೆ ಮೊದಲು ಆ ಸಮುದಾಯದೊಳಗೇ ಮರಳಿ ಹುಟ್ಟಬೇಕು. ಕೃಷಿಯನ್ನು ಪ್ರೀತಿಸುವ ಹುಡುಗನಿಗೆ ತನ್ನದೇ ಸಮುದಾಯದಲ್ಲಿ ಹುಡುಗಿ ಸಿಗದ ಪರಿಸ್ಥಿತಿ ಬಂದಿದ್ದರೆ, ಹುಡುಗಿಯರ ಕೊರತೆಯನ್ನಷ್ಟೇ ದೂಷಿಸುವುದಕ್ಕಿಂತ ಮೊದಲು ನಮ್ಮ ಕೃಷಿಯನ್ನೂ ಕೃಷಿಕ ಬದುಕನ್ನೂ ನಾವು ಹೇಗೆ ನೋಡುತ್ತಿದ್ದೇವೆ ಎಂಬುದನ್ನು ಒಮ್ಮೆ ಕನ್ನಡಿ ಮುಂದೆ ನಿಂತು ನೋಡಿಕೊಳ್ಳುವುದು ಒಳ್ಳೆಯದು.

ಊರಲ್ಲಿ ಕೃಷಿ ಹೆಕ್ಟೇರುಗಟ್ಟಲೆ ಇದ್ದರೂ, ಆತ ಕುಟುಂಬಕ್ಕೆ ಒಬ್ಬನೇ ಮಗನಾಗಿದ್ದರೂ ಇತ್ತೀಚೆಗೆ ಮದುವೆಯಾಗುವ ಉದ್ದೇಶದಿಂದಲೇ ಊರು ಬಿಟ್ಟು ನಗರಕ್ಕೆ ಹೋಗುವ ಯುವಕರಿದ್ದಾರೆ. ನಗರದಲ್ಲಿ ಯಾವುದಾದರೂ ಚಿಕ್ಕ ಉದ್ಯೋಗ ಮಾಡಿಕೊಂಡು ಬದುಕುವುದನ್ನು ಆರಿಸಿಕೊಳ್ಳುತ್ತಾರೆ. ಕಾರಣ ಆ ಉದ್ಯೋಗದಿಂದ ಬರುವ ಹಣ ಮಾತ್ರವಲ್ಲ. ‘ನಗರದಲ್ಲಿ ಕೆಲಸ ಮಾಡುತ್ತಾನೆ’ ಎಂಬ ಒಂದು ವಾಕ್ಯವೇ ಕೆಲವರ ಕಣ್ಣಿನಲ್ಲಿ ಹುಡುಗನ ಸಾಮಾಜಿಕ ಮೌಲ್ಯವನ್ನು ಬದಲಿಸುತ್ತದೆ. ಹೊಲದಲ್ಲಿ ದುಡಿಯುವವನಿಗಿಂತ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವನಿಗೆ ಮದುವೆಗೆ ಅವಕಾಶ ಹೆಚ್ಚಿದೆ ಎನ್ನುವ ಮನೋಭಾವ ನಮ್ಮ ಸಮಾಜದಲ್ಲಿ ಬೆಳೆದಿರುವುದು ನಿಜಕ್ಕೂ ವಿಚಿತ್ರ. ಎನ್ನುತ್ತಾರೆ ಬೈರುಂಬೆಯ ಕೆ.ಎಂ. ಹೆಗಡೆ.

ಮುಂದೆ ಇದರ ಪರಿಣಾಮ ಮದುವೆ ಆಗದೇ ಇರುವ ಯುವಕನ ವೈಯಕ್ತಿಕ ಬದುಕಿನಲ್ಲೇ ನಿಲ್ಲುವುದಿಲ್ಲ. ಒಂದು ತಲೆಮಾರು ಮದುವೆಯಾಗದೆ ಉಳಿದರೆ ಅದರ ಪರಿಣಾಮ ಗ್ರಾಮೀಣ ಜನಸಂಖ್ಯೆಯ ಮೇಲೂ ಬೀಳುತ್ತದೆ. ಮನೆಯಲ್ಲಿರುವ ವೃದ್ಧ ತಂದೆ-ತಾಯಿಗೆ ಮುಂದೆ ಯಾರು? ಹೊಲ-ತೋಟವನ್ನು ಯಾರು ನೋಡಿಕೊಳ್ಳಬೇಕು? ತಲೆಮಾರುಗಳಿಂದ ಬಂದ ಬೀಜ, ಕೃಷಿ ಜ್ಞಾನ, ಪಶುಪಾಲನೆಯ ಅನುಭವ, ನೀರಿನ ಮೂಲಗಳ ಅರಿವು, ಮಣ್ಣಿನ ಗುಣ ತಿಳಿದಿರುವ ಸ್ಥಳೀಯ ಜ್ಞಾನ ಯಾರಿಗೆ ಹೋಗಬೇಕು? ಕೃಷಿ ಜಮೀನು ಮುಂದಿನ ತಲೆಮಾರಿಗೆ ಹೋಗದೆ ತುಂಡಾಗಬಹುದು, ಮಾರಾಟವಾಗಬಹುದು ಅಥವಾ ಕೃಷಿಯೇ ನಿಂತುಹೋಗಬಹುದು. ಮದುವೆಯಾಗದ ಯುವಕರ ಸಂಖ್ಯೆ ಹೆಚ್ಚಿದಂತೆ ಗ್ರಾಮವೆಂಬುದು ಕೇವಲ ಮನೆಗಳ ಗುಂಪಾಗಿ ಉಳಿದು, ಕುಟುಂಬಗಳ ನಿರಂತರತೆ ಕಡಿಮೆಯಾಗುವ ಅಪಾಯವಿದೆ.

ಇದರ ಜೈವಿಕ ಪರಿಣಾಮವೂ ಇದೆ. ಮನುಷ್ಯನ ಸಮಾಜದ ಸಹಜ ಪುನರುತ್ಪತ್ತಿ ಕುಟುಂಬ ವ್ಯವಸ್ಥೆಯೊಂದಿಗೆ ಸಂಬಂಧಿಸಿದೆ. ಒಂದು ಪ್ರದೇಶದಲ್ಲಿ ಮದುವೆಯಾಗುವ ವಯಸ್ಸಿನ ಪುರುಷರು ಮತ್ತು ಮಹಿಳೆಯರ ನಡುವೆ ಅಸಮತೋಲನ ಉಂಟಾದರೆ, ವಲಸೆ ಹೆಚ್ಚಾದರೆ, ಮದುವೆಯ ವಯಸ್ಸು ನಿರಂತರವಾಗಿ ಮುಂದೂಡಲ್ಪಟ್ಟರೆ, ಮುಂದಿನ ತಲೆಮಾರಿನ ಜನಸಂಖ್ಯೆಯ ಸ್ವರೂಪ ಬದಲಾಗುತ್ತದೆ. ಆದರೆ ಇದನ್ನು ಕೇವಲ ಜನಸಂಖ್ಯೆಯ ಲೆಕ್ಕಾಚಾರವಾಗಿ ನೋಡಲು ಸಾಧ್ಯವಿಲ್ಲ. ಮನುಷ್ಯನು ಸಂಖ್ಯೆಯಲ್ಲ; ಅವನಿಗೆ ಸಂಗಾತಿ, ಕುಟುಂಬ, ಭಾವನಾತ್ಮಕ ನೆಲೆ, ಸಾಮಾಜಿಕ ಸಂಬಂಧಗಳ ಅಗತ್ಯವಿದೆ. ಮದುವೆಯಾಗದೆ ಉಳಿಯುವ ಯುವಕನ ಮನಸ್ಸಿನ ಏಕಾಂತವೂ ಈ ಚರ್ಚೆಯ ಒಂದು ಭಾಗವಾಗಬೇಕು.

ಈ ಮೇಲಿನ ಕಾರಣಗಳಿಗಾಗಿ ಇಂತಹ ಅಹವಾಲು ಸರಕಾರದ ಮುಂದೆ ಬಂದಾಗ ಅದನ್ನು ನಗುವಿನ ವಿಷಯವನ್ನಾಗಿ ಮಾಡದೆ, ಅದರ ಹಿಂದೆ ಇರುವ ಸಾಮಾಜಿಕ ಬದಲಾವಣೆಯನ್ನು ಅಧ್ಯಯನ ಮಾಡುವುದು ಸರಕಾರದ ಕರ್ತವ್ಯ. ಗ್ರಾಮೀಣ ಪ್ರದೇಶಗಳಲ್ಲಿ ಮದುವೆಯಾಗದೆ ಉಳಿಯುತ್ತಿರುವ ಯುವಕರ ಸ್ಥಿತಿ, ಮಹಿಳೆಯರ ನಗರ ವಲಸೆ, ಕೃಷಿಕ ಕುಟುಂಬಗಳ ಮದುವೆ ಮಾದರಿಗಳ ಬದಲಾವಣೆ, ಅಂತರ್‌ಜಾತಿ ಮತ್ತು ಅಂತರ್‌ಪ್ರಾದೇಶಿಕ ಮದುವೆಗಳ ಹೆಚ್ಚಳ, ಮದುವೆಯ ವಯಸ್ಸಿನ ಏರಿಕೆ ಇವೆಲ್ಲದರ ಬಗ್ಗೆ ಸಮಾಜಶಾಸ್ತ್ರಜ್ಞರು, ಜನಸಂಖ್ಯಾಶಾಸ್ತ್ರಜ್ಞರು, ಮಹಿಳಾ ಅಧ್ಯಯನ ತಜ್ಞರು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಅಧ್ಯಯನ ಮಾಡುವವರು ಒಟ್ಟಾಗಿ ಸಂಶೋಧನೆ ಮಾಡಬೇಕಾಗಿದೆ.

ಅದರ ಜೊತೆಗೆ ಕೃಷಿಯನ್ನು ಮತ್ತೆ ‘ಉದ್ಯೋಗ’ ಬದುಕು ಮಾತ್ರವಲ್ಲ, ಗೌರವದ ಜೀವನ ಸಾಧ್ಯತೆ, ಉದ್ಯಮ ಎಂದು ನೋಡುವ ಮನೋಭಾವವನ್ನು ಬೆಳೆಸಬೇಕಾಗಿದೆ. ರೈತನ ಮಗ ಕೃಷಿ ಮಾಡುತ್ತಾನೆ ಎಂದರೆ ಅವನು ಜೀವನದಲ್ಲಿ ಸೋತವನು ಅಲ್ಲ. ಅವನು ಮಣ್ಣಿನ ಜೊತೆ ಬದುಕು ಕಟ್ಟಿಕೊಳ್ಳುವವನು. ಆದರೆ ಅದನ್ನು ಹೇಳುವುದಷ್ಟೇ ಸಾಲದು. ಕೃಷಿ ಮಾಡುವ ಯುವಕನಿಗೆ ಉತ್ತಮ ಆದಾಯ, ತಂತ್ರಜ್ಞಾನ, ಸಾಮಾಜಿಕ ಭದ್ರತೆ, ವಿಶ್ರಾಂತಿ, ಶಿಕ್ಷಣ, ಆರೋಗ್ಯ, ವಾಸಸ್ಥಳ ಮತ್ತು ತನ್ನ ಸಂಗಾತಿಯೊಂದಿಗೆ ಗೌರವದಿಂದ ಬದುಕುವ ಪರಿಸರವೂ ಬೇಕು. ಕೃಷಿ ಕುಟುಂಬದಲ್ಲಿ ಸೊಸೆ ಬಂದರೆ ಅವಳು ಉಚಿತ ಕಾರ್ಮಿಕಳಾಗಬೇಕು ಎಂಬ ಹಳೆಯ ಮನೋಭಾವ ಬದಲಾಗಬೇಕು. ಕೃಷಿ ಮನೆಯ ಹೆಣ್ಣು ಕೂಡ ಕೃಷಿಯ ಪಾಲುದಾರಳಾಗಬಹುದು; ಆದರೆ ಆ ಪಾಲುದಾರಿಕೆ ಆಯ್ಕೆಯಿಂದ ಮತ್ತು ಗೌರವದಿಂದ ಬರಬೇಕು.

ನನಗೆ ಪಿರಿಯಾಪಟ್ಟಣದ ಆ ರೈತನ ಮಾತಿನಲ್ಲಿ ಇದೇ ಕಾರಣಕ್ಕೆ ಒಂದು ದೊಡ್ಡ ಎಚ್ಚರಿಕೆಯ ಧ್ವನಿ ಕೇಳಿಸಿತು. ಅವರು ‘ನಮ್ಮ ಊರಿನ ಹುಡುಗರಿಗೆ ಹೆಣ್ಣು ಸಿಗುತ್ತಿಲ್ಲ’ ಎಂದರು. ವೇದಿಕೆ ಯಲ್ಲಿದ್ದವರು ನಕ್ಕಿರಬಹುದು. ಆದರೆ ಆ ರೈತನ ಮಾತಿನ ಹಿಂದೆ ಒಂದು ದಿನ ಖಾಲಿಯಾಗಬಹುದಾದ ಮನೆಗಳಿವೆ. ಪಾಳು ಬೀಳಬಹುದಾದ ಹೊಲಗಳಿವೆ. ಹಿರಿಯರಾಗಿ ಉಳಿಯುವ ತಂದೆ-ತಾಯಿಗಳಿದ್ದಾರೆ. ಮುಂದಿನ ತಲೆಮಾರಿಗೆ ಹೋಗದ ಕೃಷಿ ಜ್ಞಾನವಿದೆ.

(ಅಂಕಣಕಾರರು: ಉಪನ್ಯಾಸಕರು, ಚಿಂತಕರು)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor