ಕರ್ನಾಟಕದ ರಾಜಕೀಯದಲ್ಲಿ ಆಗಿ ಹೋದ ಮಹಿಳಾ ಶಾಸಕರ ಪಟ್ಟಿ ನೋಡಿದರೆ ನನಗೆ ಯಾವಾಗಲೂ ಕಾಡುವ ಪ್ರಶ್ನೆ ರಾಜಕಾರಣದ ಸಹಜ ಆಸಕ್ತಿ ಬೆಳೆಸಿಕೊಂಡು, ಜನರ ನಡುವೆಯೇ ವರ್ಷಗಟ್ಟಲೆ ಕೆಲಸ ಮಾಡಿ, ತಮ್ಮದೇ ನಾಯಕತ್ವವನ್ನು ಕಟ್ಟಿಕೊಂಡು ಚುನಾವಣೆಯಲ್ಲಿ ಗೆದ್ದು ಬಂದ ಮಹಿಳೆಯರಿಗಿಂತ, ಮನೆಯವರನ್ನು ಕಳೆದುಕೊಂಡು ಅನುಕಂಪದ ಅಲೆಯ ಮೇಲೆ ಟಿಕೆಟ್ ಪಡೆದು ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದ ಮಹಿಳೆಯರೇ ಹೆಚ್ಚು. ಅಂಥ ಶಾಸಕಿಯರ ಮೇಲೆ ಒಂದೇ ಹೊತ್ತಿನಲ್ಲಿ ಹಲವು ಹೊಣೆಗಾರಿಕೆಗಳು ಬೀಳುತ್ತವೆ. ಕುಟುಂಬ ನಿರ್ವಹಣೆ, ರಾಜಕೀಯದ ಅನನುಭವ, ಓಡಾಟ, ಕಾರ್ಯಕರ್ತರ ಮತದಾರರ ನಿರೀಕ್ಷೆ... ಪರಿಣಾಮ, ಬಹಳಷ್ಟು ಮಂದಿಗೆ ಕಲಿಕೆಯ ಕಾಲವಾಗಿಯೇ ಕಲಾಪದಲ್ಲಿ ಮೌನವಾಗಿ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ಅದನ್ನು ಅವರ ವೈಯಕ್ತಿಕ ದೌರ್ಬಲ್ಯವೆಂದು ನೋಡುವುದಕ್ಕಿಂತ, ಅವರನ್ನು ರಾಜಕೀಯಕ್ಕೆ ಕರೆತಂದ ಸಂದರ್ಭಗಳಾಗಿ ನೋಡಬೇಕಾಗುತ್ತದೆ.

ಈ ನಡುವೆ ನನಗೆ ನನ್ನೂರ ಶಕುಂತಲಾ ಶೆಟ್ಟಿಯವರು ಬೇರೆ ರೀತಿಯ ಮಹಿಳಾ ರಾಜಕಾರಣಿಯಾಗಿ ಕಾಣಿಸುತ್ತಾರೆ. ಅವರು ಚುನಾವಣೆಯ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ರಾಜಕೀಯಕ್ಕೆ ಅವತರಿಸಿದವರಲ್ಲ. ಬಾಲ್ಯದಿಂದಲೇ ಸಮುದಾಯದ ಜೊತೆಗೆ ಬೆರೆತವರು. ನೆಲದ ಜನರ ಸಮಸ್ಯೆಗಳನ್ನು ಹತ್ತಿರದಿಂದ ಕಂಡವರು. ಹೆಣ್ಣುಮಕ್ಕಳ ಆರೋಗ್ಯ, ಬಡತನ, ಶೈಕ್ಷಣಿಕ ಕೊರತೆ, ಕೃಷಿ ವಲಯದಕುಟುಂಬಗಳ ಸಮಸ್ಯೆ, ಗ್ರಾಮೀಣ ಮಹಿಳೆಯರ ಬದುಕು ಇವೆಲ್ಲವನ್ನೂ ತಮ್ಮದೇ ಬದುಕಿನ ಭಾಗವೆಂದುಕೊಂಡು ಮಿಡಿದವರು. ಯುವತಿ ಸಂಘ, ಮಹಿಳಾ ಸಂಘ, ಗ್ರಾಮ ಪಂಚಾಯತ್ ಹೀಗೆ ಸ್ಥಳೀಯ ಬದುಕಿನ ಅನೇಕ ಹಂತಗಳಲ್ಲಿ ಕೆಲಸ ಮಾಡಿದ ಅನುಭವವನ್ನು ಹೊತ್ತುಕೊಂಡೇ ರಾಜ್ಯ ರಾಜಕೀಯಕ್ಕೆ ಬಂದವರು. ಹಾಗಾಗಿ ಅವರ ರಾಜಕೀಯಕ್ಕೆ ವಿಧಾನಸಭೆಯ ಮೆಟ್ಟಿಲೇ ಮೊದಲ ಮೆಟ್ಟಿಲಾಗಿರಲಿಲ್ಲ. ಅದು ಗ್ರಾಮದಿಂದ ಹುಟ್ಟಿಕೊಂಡ ನಾಯಕತ್ವದ ಮುಂದಿನ ಹಂತವಾಗಿತ್ತು. ಅದಕ್ಕಾಗಿಯೇ ಶಕುಂತಲಾ ಶೆಟ್ಟಿ ಅವರನ್ನು ‘ನೆಲಮೂಲದ ರಾಜಕಾರಣಿ’ ಎನ್ನುವುದರಲ್ಲಿ ಅರ್ಥವಿದೆ.

ಹೆಣ್ಣು ಗಂಡು ಯಾರೇ ಇರಲಿ ಈ ದೇಶದಲ್ಲಿ ರಾಜಕಾರಣಿಗಳನ್ನು ನೋಡುವುದಕ್ಕೆ ಒಂದು ಸಿದ್ಧಕ್ರಮವಿದೆ. ಮಂತ್ರಿಯೊಬ್ಬ ಸ್ಕೂಟರ್‌ನಲ್ಲಿ ಓಡಾಡಿದರೆ, ಶಾಸಕರೊಬ್ಬರು ಸೈಕಲ್ ತುಳಿದುಕೊಂಡು ಊರು ಸುತ್ತಿದ್ದರೆ ಮರುದಿನ ಅವರ ಸರಳತೆಯ ಚಿತ್ರ ಪತ್ರಿಕೆಯ ಮುಖಪುಟದಲ್ಲಿರುತ್ತದೆ. ರಾಜಕಾರಣಿಯೊಬ್ಬರು ಸರಳವಾಗಿ ಬದುಕುವುದೇ ದೊಡ್ಡ ಸಂಗತಿಯೆಂಬಂತೆ ಈ ದೇಶ ಅವರನ್ನು ನೋಡುತ್ತದೆ. ಹಾಗೆ ನೋಡುತ್ತಾ ಮತ ಕೊಟ್ಟ ನಾವೇ ರಾಜಕಾರಣಿಗಳ ಬಗ್ಗೆ ಒಂದು ತೀರ್ಮಾನಕ್ಕೂ ಬಂದುಬಿಡುತ್ತೇವೆ. ಆದರೆ ಸ್ಕೂಟರ್, ಸೈಕಲ್, ಸರಳ ಉಡುಪು ಇವೆಲ್ಲವೂ ರಾಜಕಾರಣಿಯ ಸರಳತೆಯನ್ನು ಅಳೆಯುವ ಪೂರ್ಣ ಅಳತೆಗಳಲ್ಲ. ಕೆಲವರು ಕಾಲಕ್ರಮದಲ್ಲಿ ಭೌತಿಕವಾಗಿ ಬದಲಾಗುತ್ತಾರೆ. ಕೆಲವರು ಬೌದ್ಧಿಕವಾಗಿ ಬದಲಾಗುತ್ತಾರೆ. ಬೌದ್ಧಿಕವಾಗಿ ಬದಲಾಗದ, ಒಳಗಿನಿಂದಲೂ ಸರಳವಾಗಿಯೇ ಉಳಿಯುವ ರಾಜಕಾರಣಿಗಳ ಪಟ್ಟಿ ಮಾತ್ರ ಬಹಳ ಉದ್ದವಾಗಿರುವುದಿಲ್ಲ.

ಎರಡು ಬಾರಿ ಶಾಸಕರಾಗಿದ್ದ ಶಕುಂತಲಾ ಶೆಟ್ಟಿಯವರನ್ನು ಈ ಕಾರಣಕ್ಕಾಗಿಯೇ ಸ್ವಲ್ಪ ಬೇರೆ ರೀತಿಯಲ್ಲಿ ನೋಡುತ್ತೇನೆ ಮತ್ತು ರಾಜಕೀಯದಲ್ಲಿ ಚೂರೂ ಆಸಕ್ತಿ ಇಲ್ಲದ ನಾನು ಅವರ ಬಗ್ಗೆ ಇಲ್ಲಿ ಬರೆಯುತ್ತಿದ್ದೇನೆ. ಯಾವತ್ತೂ ಹುಟ್ಟುಮೂಲ ಕರಾವಳಿಯ ಬಂಟ ಜಾತಿಯ ಅಹಂನ್ನು ಅಂಟಿಸಿಕೊಳ್ಳದ, ರಾಜಕೀಯದ ಲೆಕ್ಕಾಚಾರದಲ್ಲೇ ಎಲ್ಲವನ್ನೂ ಅಳೆಯದ, ಹಮ್ಮುಬಿಮ್ಮುಗಳಿಲ್ಲದೆ ಜನರ ನಡುವೆ ಸರಳವಾಗಿ ಬೆರೆಯುವ ಅವರ ನಡೆ ನನಗೆ ಬಹಳ ಕಾಲದಿಂದ ಪರಿಚಿತ. ನಮ್ಮ ರಾಜಕೀಯ ವ್ಯವಸ್ಥೆ ಮನುಷ್ಯರನ್ನು ಜಾತಿ, ಧರ್ಮ, ಮತ, ಭಾಷೆ ಎಂದು ಬೇರೆ ಬೇರೆ ಪೆಟ್ಟಿಗೆಗಳಲ್ಲಿ ಇಟ್ಟು ನೋಡುವ ಅಭ್ಯಾಸ ಬೆಳೆಸಿಕೊಂಡಿರುವಾಗಲೂ ಶಕು ಅಕ್ಕ ಸಾಧ್ಯವಾದಷ್ಟು ಹೆಚ್ಚು ಪ್ರಮಾಣದಲ್ಲಿ ಜನರನ್ನು ಜನರಾಗಿ ನೋಡುವ ಒಂದು ಸಹಜ ಗುಣವನ್ನು ಉಳಿಸಿಕೊಂಡಿದ್ದಾರೆ.

ಶಕು, ಬಾಲಕಿಯಾಗಿದ್ದಾಗಲೇ ಪ್ರೈಮರಿ ಶಾಲೆಯ ಡೆಸ್ಕಿನ ಮೇಲೆ ಹುಡುಗರು ಪದೇಪದೇ ಸಹಪಾಠಿ ಹುಡುಗಿಯರ ಹೆಸರು ಬರೆಯುತ್ತಿದ್ದುದನ್ನು ಗಮನಿಸಿ ಕ್ರಾಂತಿಕಾರಿಯಾಗಿ ಪ್ರತಿಭಟಿಸಿ, ಅಲ್ಲಿಂದಲೇ ನಾಯಕತ್ವದ ಮೊದಲ ಪಾಠ ಕಲಿತವರು. ಅನಿವಾರ್ಯವಾಗಿ ಅವರಿಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಹಾಗೆ ನಿಂತ ಓದು ಅವರ ಬದುಕಿನ ಕಲಿಕೆಯನ್ನು ನಿಲ್ಲಿಸಲಿಲ್ಲ. ಪೆರ್ಲದಿಂದ ಗಂಡನ ಮನೆ ಕುಂತೂರಿಗೆ ಬಂದು ಯುವತಿ ಸಂಘ, ಮಹಿಳಾ ಸಂಘಗಳನ್ನು ಸಕ್ರಿಯವಾಗಿ ಕಟ್ಟಿಕೊಂಡರು. ಜಾತಿ, ಮತ, ಧರ್ಮ ನೋಡದೆ ಹೆಣ್ಣುಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸಿದರು. ಜನರ ನಡುವೆ ಓಡಾಡುತ್ತಾ ಬೆಳೆದ ಆ ಅನುಭವವೇ ಮುಂದೆ ಅವರನ್ನು ರಾಜಕೀಯಕ್ಕೆ ಕರೆದುಕೊಂಡು ಹೋಯಿತು. ಎರಡು ಬಾರಿ ಪುತ್ತೂರಿನಿಂದ ವಿಧಾನಸಭೆಯನ್ನು ಪ್ರವೇಶಿಸಿದರು. 2004ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದ ಅವರು, 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೆ ಪುತ್ತೂರಿನಿಂದ ಗೆದ್ದರು. ಅವರ ರಾಜಕೀಯ ಬದುಕಿನ ಈ ಬದಲಾವಣೆಗಳೂ ಕೂಡ ಅವರು ಒಂದೇ ಪಕ್ಷದ ಗಡಿಗಿಂತ ಕ್ಷೇತ್ರದ ಜನರೊಂದಿಗಿನ ತಮ್ಮ ಸಂಬಂಧವನ್ನು ಮುಖ್ಯವಾಗಿ ನೋಡಿದ ಸಂದರ್ಭವಾಗಿ ತೋರಿಸುತ್ತವೆ.

ಶಕು ಅಕ್ಕ ನಾಟಕದಲ್ಲಿ ಅಭಿನಯಿಸಿದ್ದಾರೆ. ಯಕ್ಷಗಾನದಲ್ಲಿ ಭಾಗವಹಿಸಿದ್ದಾರೆ. ಆಕಾಶವಾಣಿಯಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಸಿನೆಮಾದಲ್ಲೂ ನಟಿಸಿ ಪ್ರಶಸ್ತಿ ಪಡೆದಿದ್ದಾರೆ. ಸಾಹಿತ್ಯ ಓದಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬೆರೆತಿದ್ದಾರೆ. ಈಗ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದಂತಹ ಉನ್ನತ ಸಾಹಿತ್ಯ-ಸಾಂಸ್ಕೃತಿಕ ವೇದಿಕೆಯಲ್ಲೂ ಅಧ್ಯಕ್ಷೆಯಾಗಿ ಸಕ್ರಿಯರಾಗಿದ್ದಾರೆ. ರಾಜಕೀಯ ಅಧಿಕಾರದಿಂದ ಹೊರಬಂದ ಮೇಲೆ ಸಾರ್ವಜನಿಕ ಬದುಕಿನಿಂದ ಹಿಂದೆ ಸರಿಯದೆ ಸಾಂಸ್ಕೃತಿಕ ಬದುಕಿನ ಕಡೆಗೆ ಇನ್ನಷ್ಟು ತಿರುಗಿಕೊಂಡಿರುವುದು ಅವರ ವ್ಯಕ್ತಿತ್ವದ ಇನ್ನೊಂದು ಮುಖ.

ನಾಲ್ಕೈದು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಒಂದು ದಿನ ಅವರು ನಮ್ಮ ಮಹಿಳಾ ಕಾಲೇಜಿಗೆ ಬಂದರು. ತಮಗಿಂತಲೂ ಹೆಚ್ಚು ತೂಕವಿರಬಹುದಾದ ಅಂಬೇಡ್ಕರ್ ಸಾಹಿತ್ಯದ ಸಮಗ್ರ ಸಂಪುಟಗಳನ್ನು ಹೊತ್ತು ತಂದು ಪ್ರಾಂಶುಪಾಲರ ಮೇಜಿನ ಮೇಲೆ ಇಟ್ಟು, ‘‘ಇದು ಕಾಲೇಜಿಗೆ’’ ಎಂದರು. ನಾನು ಸಹಜವಾಗಿ, ‘‘ಇವು ನಿಮಗೆ ಬೇಡವೇ?’’ ಎಂದು ಕೇಳಿದೆ. ‘‘ನಾನು ಯಾವಾಗ ಬೇಕಾದರೂ ಕಾಲೇಜಿಗೆ ಬಂದು ಓದಬಹುದು. ಇದು ನಾನೇ ಹುಟ್ಟುಹಾಕಿದ ಕಾಲೇಜು. ಇದನ್ನು ನನಗಿಂತ ಮುಖ್ಯವಾಗಿ ಓದಬೇಕಾದವರು ಇಲ್ಲಿಯ ಮಕ್ಕಳು’’ ಎಂದರು. ಆ ಒಂದು ಮಾತಿನಲ್ಲಿ ಅವರೊಳಗಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಆಸಕ್ತಿ ನನಗೆ ಮತ್ತಷ್ಟು ಸ್ಪಷ್ಟವಾಯಿತು. ಅಧಿಕಾರದಲ್ಲಿದ್ದಾಗ ಮಾತ್ರ ಕಾಲೇಜು ತನ್ನದು ಎಂದುಕೊಳ್ಳದೆ, ಅಧಿಕಾರದಿಂದ ಹೊರಬಂದ ಮೇಲೂ ಮಕ್ಕಳ ಓದಿನ ಬಗ್ಗೆ ಯೋಚಿಸುವ ಮನಸ್ಸು ಅದು.

ಈಗ ಶಕು ಅಕ್ಕನ ಬದುಕಿನ ಇನ್ನೊಂದು ಮುಖವನ್ನು ಅವರ ಆತ್ಮಕಥೆ ‘ಚಿತ್ತ ಭಿತ್ತಿಯ ಪತ್ತಾಯ’ ತೆರೆದಿಡುತ್ತದೆ. ಇಂದು ಬೆಂಗಳೂರಿನಲ್ಲಿ ಈ ಕೃತಿ ಬಿಡುಗಡೆಯಾಗುತ್ತಿದೆ ಅನೇಕ ಹಿರಿಯ ಸಾಹಿತಿಗಳೊಂದಿಗೆ ಈ ರಾಜ್ಯದ ಮುತ್ಸದ್ದಿ ರಾಜಕಾರಣಿ ಬಿ.ಎಲ್. ಶಂಕರ್ ಕೃತಿ ಬಿಡುಗಡೆ ಮಾಡಲಿದ್ದಾರೆ. ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಇರುತ್ತಾರೆ. ಯಾವಾಗಲೂ ರಾಜಕೀಯದಂಥ ಸಾರ್ವಜನಿಕ ವೇದಿಕೆಯಲ್ಲೇ ಕಂಡ ಶಕುಂತಲಾ ಶೆಟ್ಟಿಯವರ ಹಿಂದೆ, ನಾವು ತಿಳಿಯದ ಒಂದು ಖಾಸಗಿ ಬದುಕು ಇತ್ತು ಎನ್ನುವುದನ್ನು ಈ ಆತ್ಮಕಥನದ ಕೆಲವು ಪುಟಗಳು ತೋರಿಸಿವೆ.

ಪೆರ್ಲದಿಂದ ಪುತ್ತೂರು ಉಪ್ಪಿನಂಗಡಿ ಸಮೀಪದ ಗಂಡನ ಮನೆ ಕುಂತೂರಿಗೆ ಬಂದ ಈ ಹೆಣ್ಣಿನ ಬದುಕು ಹೇಗಿತ್ತು ಎಂಬುದನ್ನು ಅವರ ಮಾತುಗಳಲ್ಲೇ ಓದಿದಾಗ ರಾಜಕಾರಣಿಯ ಮುಖದ ಹಿಂದೆ ಇದ್ದ ಒಂದು ಸಾಮಾನ್ಯ ಹೆಣ್ಣಿನ ಸಂಕಟದ ಮುಖವೂ ಕಾಣಿಸುತ್ತದೆ. ಇದ್ದಕ್ಕಿದ್ದ ಹಾಗೆ ಒಂದು ದಿನ ಆ ಮನೆಯಲ್ಲಿ ಎರಡು ಒಲೆಗಳು ಉರಿಯುತ್ತವೆ. ಅಡುಗೆ ಹೊರಗೆ ಕಾಣದಂತೆ ಹಳೆಯ ಕಣಜದ ಅತ್ತರನ್ನು ಅಡ್ಡ ಕಟ್ಟುತ್ತಾರೆ. ಹುಟ್ಟಿನಿಂದ ಮದುವೆಯಾಗಿ ಬರುವವರೆಗೂ ಮುಳಿ ಹುಲ್ಲಿನ ಮನೆ ನೋಡದ ಹುಡುಗಿ, ಸುಂದರ ಮನೆಯಲ್ಲಿ ಬೆಳೆದ ಹುಡುಗಿ, ಅಂತಹದೇ ಮನೆಯನ್ನು ಸೇರುತ್ತೇನೆ ಎಂದುಕೊಂಡವಳು, ಕಿಟಿಕಿ ಬಾಗಿಲುಗಳಿಲ್ಲದ ತೆರೆದ ಕೊಟ್ಟಿಗೆಯನ್ನು ತನ್ನ ಮನೆಯಾಗಿ ಪರಿವರ್ತಿಸಿಕೊಳ್ಳಬೇಕಾದ ಸ್ಥಿತಿಯಲ್ಲಿ ಒಬ್ಬಳೇ ಕುಳಿತು ಅಳುತ್ತಾಳೆ. ‘‘ನಾನು ಪಟೇಲರ ಮಗಳು ಎಂದು ನೆನಪಿಸಿಕೊಳ್ಳುವುದಕ್ಕೂ ಮುಜುಗರ ಅನಿಸಿತು’’ ಎನ್ನುವ ಮಾತು ಓದಿದಾಗ ಆ ಕಾಲದ ಹೆಣ್ಣಿನ ಅಸಹಾಯಕತೆಯೊಂದು ನಮ್ಮ ಮುಂದೆ ಬಂದು ನಿಲ್ಲುತ್ತದೆ.

ಇದು ರಾಜಕೀಯದ ಭಾಷೆಯಲ್ಲ. ಇದು ಈ ದೇಶದ ಹಳ್ಳಿಯ ಬದುಕಿನ ಭಾಷೆ. ಅದಕ್ಕಾಗಿಯೇ ಆತ್ಮಕಥೆಯ ಈ ಭಾಗ ನನಗೆ ಬಹಳ ಮುಖ್ಯವೆನಿಸುತ್ತವೆ. ಇಂದು ಜನರ ಮುಂದೆ ನಿಂತು ಸಾರ್ವಜನಿಕವಾಗಿ ಮಾತನಾಡುವ ಹೆಣ್ಣಿನ ಹಿಂದೆ, ಒಮ್ಮೆ ತನ್ನದೇ ಮನೆಯೊಳಗೆ ಮಾತು ಹೇಳಿಕೊಳ್ಳಲು ಜಾಗವಿಲ್ಲದೆ ಕಣ್ಣೀರಿಟ್ಟಿದ್ದ ಹೆಣ್ಣು ಇದ್ದಳು ಎಂಬುದನ್ನು ಅದು ನೆನಪಿಸುತ್ತದೆ.

ಇನ್ನೊಂದು ಪ್ರಸಂಗ ಇನ್ನೂ ಕಾಡುತ್ತದೆ. ಆಸ್ಪತ್ರೆಯಲ್ಲಿ ಹೆರಿಗೆ ನೋವು. ಹೊರಗೆ ವಿಪರೀತ ಜಡಿ ಮಳೆ. ಅಮ್ಮ, ಅಪ್ಪ, ಮನೆಯವರು ಯಾರಿಗೂ ಮಗು ಹುಟ್ಟಿದ ಸುದ್ದಿ ಇನ್ನೂ ಗೊತ್ತಿಲ್ಲ. ಯಾಕೆಂದರೆ ಅವರ್ಯಾರೂ ಅವರ ಪಕ್ಕದಲ್ಲಿ ಇರಲಿಲ್ಲ, ಪಕ್ಕದ ಹಾಸಿಗೆಯಲ್ಲಿದ್ದ ಮಹಿಳೆಯ ತಾಯಿ, ಇಚಲಂಪಾಡಿಯ ಅಜ್ಜಿ, ತನ್ನ ಮಗಳ ಶಸ್ತ್ರಚಿಕಿತ್ಸೆಗೆ ಬಂದವರು ತನ್ನ ಕೆಲಸಕ್ಕಿಂತ ಈ ಹೆಣ್ಣಿನ ಕಷ್ಟ ದೊಡ್ಡದು ಎಂದುಕೊಂಡು ಅವಳ ಜೊತೆ ನಿಂತುಕೊಳ್ಳುತ್ತಾರೆ. ನರ್ಸ್ ಹೆರಿಗೆಗಾಗಿ ಒಳಗೆ ಕರೆದುಕೊಂಡು ಹೋದಾಗಲೂ ಜೊತೆಯೇ ಹೋಗುತ್ತಾರೆ. ಮಗು ಹುಟ್ಟಿದ ಮೇಲೆ ತಾಯಿಯಂತೆ ಮುಖ ಒರೆಸುತ್ತಾರೆ. ತನ್ನ ಮನೆಯ ರೋಗಿಗೆಂದು ಮನೆಯಿಂದ ತಂದ ಬಿಸಿ ಅನ್ನ, ಉಪ್ಪಿನಕಾಯಿಯನ್ನು ಒತ್ತಾಯ ಮಾಡಿ ತಿನ್ನಿಸುತ್ತಾರೆ. ರಕ್ತಸಂಬಂಧವಿಲ್ಲದ ಒಬ್ಬ ಹೆಣ್ಣಿನ ನೋವನ್ನು ತನ್ನ ಮನೆಯ ನೋವಿನಂತೆ ಕಾಣುವ ಆ ಮಾತೃ ಹೃದಯವನ್ನು ಶಕು ಅಕ್ಕ ಇಷ್ಟು ವರ್ಷಗಳ ನಂತರವೂ ನೆನಪಿಟ್ಟುಕೊಂಡಿರುವುದೇ ಅವರೊಳಗಿನ ಮಾನವೀಯತೆಯ ಸಾಕ್ಷಿ. ಕೊನೆಗೂ ಗಂಡ ಬಂದು ಮಗುವನ್ನು ನೋಡಿ ಹೋಗುತ್ತಾರೆ. ಹೆಣ್ಣು ಮಗುವಾಗಿದ್ದರೆ ಆಪರೇಷನ್ ಮಾಡಿಸಬಹುದಿತ್ತು ಎಂಬ ಮಾತನ್ನೂ ಹೇಳುತ್ತಾರೆ. ಮಗುವನ್ನು ಹೆತ್ತು ಮಲಗಿರುವ ಹೆಣ್ಣಿನ ಬದುಕಿನಲ್ಲಿ ಆಗಿನ ಕಾಲದ ಕುಟುಂಬ ವ್ಯವಸ್ಥೆಯ ಇನ್ನೊಂದು ಮುಖ ಕಾಣಿಸುತ್ತದೆ. ಅಮ್ಮ, ಅಪ್ಪ ಬರುತ್ತಾರೋ ಎಂದು ಕಾದಿದ್ದ ಹೆಣ್ಣಿಗೆ ನಿರಾಶೆ, ನಂತರ ಅವರು ಬಂದಾಗ ಸಂಬಂಧಿಕರೂ ಬರುತ್ತಾರೆ. ಬದುಕು ಹೀಗೆಲ್ಲಾ ಚಿಕ್ಕ ಚಿಕ್ಕ ಮಾನವೀಯ ಕೈಗಳಿಂದಲೇ ಕೆಲವೊಮ್ಮೆ ಮತ್ತೆ ಎದ್ದು ನಿಲ್ಲುತ್ತದೆ.

ಇನ್ನೊಂದು ರಾತ್ರಿಯ ಕರಾಳ ಕಥೆ ಕೇಳಿ... ಉಪ್ಪಿನಂಗಡಿಗೆ ಹೋದ ಗಂಡ, ಹಿರಿಮಗ ಬರುವುದನ್ನು ಕಾಯುತ್ತಾ ಊಟ ಮಾಡದೆ ಕುಳಿತಿದ್ದಾರೆ. ಮಧ್ಯರಾತ್ರಿ ದೀಪ ಹಚ್ಚುವುದಕ್ಕೂ ಭಯ. ಮಗುವನ್ನು ಅಪ್ಪಿಕೊಂಡೇ ಮಲಗಿದ್ದಾರೆ. ಮನೆಯ ಮೇಲ್ಛಾವಣಿಯ ಮುಳಿ ಹುಲ್ಲಿನಿಂದ ಏನೋ ಹುಡಿ ಬೀಳುತ್ತಿದೆ. ಹಗ್ಗದ ಮೇಲೆ ಇಲಿಗಳು ಓಡಾಡುತ್ತಿವೆ. ಆಮೇಲೆ ಅವುಗಳ ಜೊತೆ ಹಾವು ಕೂಡ ಇರುವುದು ಗೊತ್ತಾಗುತ್ತದೆ. ಭಯದಿಂದ ಹೊದಿಕೆಯನ್ನು ತಲೆಮೇಲಿಂದ ಪಾದದವರೆಗೆ ಹೊದೆದುಕೊಂಡು ಮಗುವನ್ನು ಬಿಗಿಯಾಗಿ ಅಪ್ಪಿಕೊಂಡು ಬೆಳಗಾಗುವವರೆಗೆ ಅಳುತ್ತಾ ದೇವರನ್ನು ಪ್ರಾರ್ಥಿಸುತ್ತಾ ಮಲಗಿರುವ ಆ ಹೆಣ್ಣನ್ನು ನೆನಪಿಸಿಕೊಂಡಾಗ, ಇಂದು ನಾವು ಸಾರ್ವಜನಿಕ ವೇದಿಕೆಯಲ್ಲಿ ನೋಡುವ ಶಕುಂತಲಾ ಶೆಟ್ಟಿಯವರಿಗೂ ಆ ರಾತ್ರಿ ಮುಳಿ ಮನೆಯೊಳಗೆ ಮಗುವನ್ನು ಅಪ್ಪಿಕೊಂಡು ಹೆದರಿದ ಆ ಹೆಣ್ಣಿಗೂ ನಡುವೆ ಎಷ್ಟು ದೂರವಿದೆ ಎಂದು ಯೋಚಿಸುತ್ತೇನೆ.

ಅದು ಕರಾಳ ವಿಷದ ಹಾವು. ಬಸ್ಸು ತಪ್ಪಿದ ಕಾರಣಕ್ಕಾಗಿ ರಾತ್ರಿ ಇಡೀ ಉಪ್ಪಿನಂಗಡಿಯಲ್ಲಿ ಯಕ್ಷಗಾನ ನೋಡಿ ಬೆಳಗ್ಗೆ ಗಂಡ, ಮಗ ಬಂದು ಕೆಲಸಗಾರರ ಸಹಾಯ ಪಡೆದು ಅದನ್ನು ಕೊಂದು ದಹನ ಮಾಡುತ್ತಾರೆ. ಅದೇ ಹೊತ್ತಿನಲ್ಲಿ ಇನ್ನೊಂದು ಕಡೆ ಮಣ್ಣು ಕಲಸಿ ಮನೆ ಕಟ್ಟಲು ಅಡಿಪಾಯ ಹಾಕಲಾಗುತ್ತದೆ. ಮರದ ಕೆಲಸಗಾರರು ಅಂಗಳದಲ್ಲಿ ಕೆಲಸ ಮಾಡುತ್ತಾರೆ. ಮಣ್ಣಿನ ಕೆಲಸ ಮಾಡುವವರಿಗೆ, ಬಾವಿಯ ಕೆಲಸ ಮಾಡುವವರಿಗೆ, ಮರದ ಕೆಲಸಗಾರರಿಗೆ ಬಾಣಂತಿಯೇ ಅನ್ನ ಆಹಾರ ಕೊಡಬೇಕು. ಹೀಗೆ ಆ ಅವಧಿಯಲ್ಲಿ ಒಂದು ಕಡೆ ಹಾವು, ಇನ್ನೊಂದು ಕಡೆ ಮನೆ, ಸಂಬಂಧಿಕರ ಕಿರುಕುಳ... ಒಂದು ಕಡೆ ಭಯ, ಇನ್ನೊಂದು ಕಡೆ ಭವಿಷ್ಯ. ಶಕು ಅಕ್ಕನ ಬದುಕಿನ ಇಡೀ ರೂಪಕ ಇದೇ ಇರಬಹುದು.

ಆತ್ಮಕಥೆಯಲ್ಲಿನ ಈ ಘಟನೆಗಳನ್ನೆಲ್ಲ ಓದಿದ ಮೇಲೆ ನನಗೆ ಶಕುಂತಲಾ ಶೆಟ್ಟಿಯವರ ರಾಜಕೀಯ ಹೆಚ್ಚು ಅರ್ಥವಾಗುವುದಷ್ಟೇ ಅಲ್ಲ, ಹೆಚ್ಚು ಆಪ್ತವಾಗುತ್ತದೆ. ಜನರ ಮನೆಗೆ ಹೋಗುವಾಗ ಅವರ ಬಾಗಿಲಿನ ಒಳಗೆ ಏನು ನಡೆಯುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಲ್ಲ ಹೆಣ್ಣಿನ ರಾಜಕೀಯ ಅದು. ಹೆಣ್ಣುಮಕ್ಕಳ ಸಮಸ್ಯೆಗಳನ್ನು ಕೇವಲ ವಿಧಾನಸಭೆಯ ಪ್ರಶ್ನೆಯಾಗಿ ನೋಡದೆ, ಮನೆಯೊಳಗಿನ ನೋವಿನ ಭಾಗವಾಗಿ ಕಾಣಬಲ್ಲ ಅನುಭವ ಅದು. ಬಹುಶಃ ಅದಕ್ಕಾಗಿಯೇ ಮಹಿಳೆಯರಿಗಾಗಿ ಕೆಲಸ ಮಾಡುವ ಅವರ ರಾಜಕೀಯ ಪ್ರಯತ್ನಗಳಿಗೆ ಈ ನೆಲದ ಸಂಪರ್ಕವಿತ್ತು.

ಶಕುಂತಲಾ ಶೆಟ್ಟಿಯವರ ಬದುಕಿನಲ್ಲಿ ನನಗೆ ಇಷ್ಟವಾಗುವ ಸಂಗತಿಯೆಂದರೆ ಅವರು ರಾಜಕೀಯವನ್ನು ಜೀವನದ ಅಂತಿಮ ಗಮ್ಯಸ್ಥಾನವನ್ನಾಗಿ ಎಂದೂ ಮಾಡಿಕೊಂಡಿಲ್ಲ. ಅಧಿಕಾರ ಬಂದಾಗಲೂ ಅವರು ಜನರ ನಡುವೆ ಇದ್ದರು. ಅಧಿಕಾರ ಹೋದ ಮೇಲೂ ಜನರ ನಡುವೆ ಇದ್ದಾರೆ. ರಾಜಕೀಯದಿಂದ ಹೊರಬಂದ ನಂತರವೂ ಸಾಂಸ್ಕೃತಿಕ ಬದುಕಿನೊಳಗೆ ಹೋಗಿ, ಓದು, ಸಾಹಿತ್ಯ, ಸಂಘಟನೆ, ಮಹಿಳೆಯರ ಸಾರ್ವಜನಿಕ ಬದುಕು ಇವುಗಳ ನಡುವೆ ತಮ್ಮದೇ ಜಾಗವನ್ನು ಮಾಡಿಕೊಂಡಿದ್ದಾರೆ. ರಾಜಕಾರಣಿಯಾಗಿದ್ದವಳು ತನ್ನೊಳಗಿನ ಸಾಂಸ್ಕೃತಿಕ ಮನುಷ್ಯಳನ್ನು ಮತ್ತೆ ಹೊರಗೆ ಕರೆದು ಬದುಕನ್ನು ಮುಂದುವರಿಸಿದ ಉದಾಹರಣೆಗಳು ಅಷ್ಟು ಸಾಮಾನ್ಯವಲ್ಲ. ಶಕುಂತಲಾ ಶೆಟ್ಟಿಯವರ ಬದುಕಿನ ಈ ಭಾಗ ನನಗೆ ಹೆಚ್ಚು ಕುತೂಹಲಕಾರಿಯಾಗಿದೆ. ರಾಜಕೀಯವೇ ಜನಸೇವೆ ಮಾಡುವ ಏಕೈಕ ದಾರಿ ಅಲ್ಲ ಎಂಬುದನ್ನು ಅವರು ಈಗ ಸಾಹಿತ್ಯದ ಕಡೆಗೆ ಹೊರಳಿ ಅಲ್ಲಿಂದಲೇ ಹೇಳುತ್ತಿರುವಂತಿದೆ.

ಈಗ ‘ಚಿತ್ತ ಭಿತ್ತಿಯ ಪತ್ತಾಯ’ ಬರೆದಾದ ಮೇಲೆ ಶಕು ಅಕ್ಕ ಮತ್ತಷ್ಟು ಹಗುರವಾಗಿರಬೇಕು. ಸಾರ್ವಜನಿಕ ಬದುಕಿನಲ್ಲಿ ನಾವು ನೋಡಿದ ವ್ಯಕ್ತಿಯ ಹಿಂದೆ ಇಷ್ಟು ದೊಡ್ಡ ಖಾಸಗಿ ಬದುಕು, ಮತ್ತು ಆ ಬದುಕಿನಲ್ಲಿ ಇಷ್ಟು ಕಷ್ಟ, ಇಷ್ಟು ಮೌನ, ನೋವು ಇತ್ತು ಎಂಬುದು ತಿಳಿದಾಗ ಅವರ ಬಗ್ಗೆ ಸಹಜವಾಗಿಯೇ ಅಭಿಮಾನ ಮೂಡುತ್ತದೆ. ಈ ಆತ್ಮಕಥೆಯಲ್ಲಿ ಸತ್ಯ ಮತ್ತು ಪ್ರಾಮಾಣಿಕತೆ ಎದ್ದು ಕಾಣಿಸುತ್ತದೆ. ಈ ಆತ್ಮಕಥೆಯ ದೊಡ್ಡ ಮೌಲ್ಯವೂ ಅದೇ. ಅದು ನಾಯಕಿಯನ್ನಷ್ಟೇ ತೋರಿಸುವುದಿಲ್ಲ. ನಾಯಕಿಯಾಗುವ ಮೊದಲು ಬದುಕಿನ ಜೊತೆ ಹೋರಾಡಿದ ಹೆಣ್ಣನ್ನು ತೋರಿಸುತ್ತದೆ. ಶಕು ಅಕ್ಕನನ್ನು ನಾನು ಮುಂದೆಯೂ ಹೀಗೆಯೇ ನೋಡಲು ಇಷ್ಟಪಡುತ್ತೇನೆ.

ಬಹುಶಃ ಅದಕ್ಕೇ ಅವರ ಸರಳತೆಯನ್ನು ನಾನು ಸ್ಕೂಟರ್ ಅಥವಾ ಸೈಕಲ್‌ನ ಮೇಲಿರುವ ಶಾಸಕ ಸಂಸದರಸರಳತೆಯಂತೆ ನೋಡುವುದಿಲ್ಲ. ಅದು ತೋರಿಸಿಕೊಳ್ಳುವ ಸರಳತೆಯಲ್ಲ. ಬದುಕು ಎಷ್ಟೇ ತಿರುವುಗಳನ್ನು ಕೊಟ್ಟರೂ ಒಳಗಿನಿಂದ ಮನುಷ್ಯನಾಗಿಯೇ ಉಳಿಯುವ ಸರಳತೆ. ರಾಜಕೀಯದಲ್ಲಿ ಗೆದ್ದದ್ದು ಎರಡು ಬಾರಿ ಇರಬಹುದು. ಆದರೆ ಮನುಷ್ಯಳಾಗಿ ಬದುಕಿನ ಪರೀಕ್ಷೆಯಲ್ಲಿ ಗೆಲ್ಲಬೇಕಾದ ಸಂದರ್ಭಗಳು ಅದಕ್ಕಿಂತ ಎಷ್ಟೋ ಹೆಚ್ಚು. ಅವುಗಳ ಲೆಕ್ಕವನ್ನು ಯಾವ ಚುನಾವಣಾ ಫಲಿತಾಂಶವೂ ಹೇಳುವುದಿಲ್ಲ. ಒಬ್ಬ ಮನುಷ್ಯನನ್ನು ಮತ್ತೊಬ್ಬ ಮನುಷ್ಯ ಎಷ್ಟು ವರ್ಷಗಳ ನಂತರವೂ ನೆನಪಿಟ್ಟುಕೊಳ್ಳುತ್ತಾನೆ ಎಂಬುದೇ ಬಹುಶಃ ಆ ಬದುಕಿನ ನಿಜವಾದ ಫಲಿತಾಂಶ.

‘ಚಿತ್ತ ಭಿತ್ತಿಯ ಪತ್ತಾಯ’ವನ್ನು ಮಂಗಳೂರಿನ ಪ್ರಸಿದ್ಧ ಆಕೃತಿ ಆಶಯ ಪಬ್ಲಿಕೇಶನ್ ಪ್ರಕಟಿಸಿದೆ. ಹಿರಿಯ ಲೇಖಕಿ ಬಿ.ಎಂ. ರೋಹಿಣಿ ಅವರ ಮುನ್ನುಡಿ, ಡಾ. ಸಬಿಹಾ ಭೂಮಿಗೌಡ ಅವರ ಬೆನ್ನುಡಿ ಇದೆ.

375 ಪುಟಗಳ ಈ ಕೃತಿಯ ಮುಖಬೆಲೆ ರೂ. 500.

(ಆಕೃತಿ ಆಶಯ 7019225774)

(ಅಂಕಣಕಾರರು: ಉಪನ್ಯಾಸಕರು, ಚಿಂತಕರು)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನರೇಂದ್ರ ರೈ ದೇರ್ಲ

contributor