ಮೈಸೂರು : ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅ.11ರಿಂದ 21ರವರೆಗೆ ನಡೆಯಲಿದ್ದು, ಎರಡು ಹಂತಗಳಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.

ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ದಸರಾ ಭದ್ರತೆಗಾಗಿ 5,161 ಸಿವಿಲ್ ಮತ್ತು ಸಂಚಾರ ಪೊಲೀಸರ ಜೊತೆಗೆ 33 ಕೆಎಸ್‌ಆರ್‌ಪಿ ತುಕಡಿಗಳು, 25 ಸಿಎಆರ್ ತುಕಡಿಗಳು, 24 ಎಸಿಎಸ್ ತಂಡಗಳು ಹಾಗೂ 1,500 ಹೋಮ್‌ಗಾರ್ಡ್‌ಗಳನ್ನು ನಿಯೋಜಿಸಲಾಗುತ್ತಿದೆ. ಒಟ್ಟು 6,719 ಪೊಲೀಸ್ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ 18 ಪೊಲೀಸ್ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಜಂಬೂಸವಾರಿ ದಿನದಂದು ಶಿಥಿಲಗೊಂಡ ಕಟ್ಟಡಗಳು ಹಾಗೂ ಮರಗಳ ಮೇಲೆ ಕುಳಿತು ಮೆರವಣಿಗೆ ವೀಕ್ಷಿಸುವುದನ್ನು ನಿಷೇಧಿಸಲಾಗಿದೆ. ಹಳೆಯ ದಸರಾ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮೈಸೂರು ನಗರದ ಹಲವು ಕಡೆಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ದಸರಾಗೆ ಆಗಮಿಸುವ ಪ್ರವಾಸಿಗರ ವಾಹನಗಳಿಗಾಗಿ ಅಚ್ಚುಕಟ್ಟಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ದಸರಾ ಮಹೋತ್ಸವದ ಪ್ರಮುಖ ಸ್ಥಳಗಳಲ್ಲಿ 35,794 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ತುರ್ತು ಸೇವೆಗಳಿಗಾಗಿ 28 ಆಂಬ್ಯುಲೆನ್ಸ್‌ಗಳು ಹಾಗೂ 33 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗುವುದು ಎಂದರು.

ಹೀಲಿಯಂ ಬಲೂನ್‌ಗಳ ಮಾರಾಟ ನಿಷೇಧ :

ಈ ಬಾರಿಯ ದಸರಾ ಸಂದರ್ಭದಲ್ಲಿ ಹೀಲಿಯಂ ಬಲೂನ್‌ಗಳ ಮಾರಾಟವನ್ನು ನಿಷೇಧಿಸಲಾಗಿದೆ. ಜಂಬೂಸವಾರಿ ವೀಕ್ಷಣೆಗೆ 48 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುತ್ತದೆ. ಗೋಲ್ಡ್ ಪಾಸ್ ಹೊಂದಿರುವವರಿಗೂ ನಿಗದಿತ ಆಸನ ಸಂಖ್ಯೆಯನ್ನು ನೀಡಲಾಗುವುದು ಎಂದು ಸೀಮಾ ಲಾಟ್ಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಪ್ರಿಯಂವದಾ ಮತ್ತು ಸುಂದರರಾಜ್ ಉಪಸ್ಥಿತರಿದ್ದರು. ಎಸಿಪಿಗಳಾದ ರವಿಪ್ರಸಾದ್, ಶಿವಶಂಕರ್, ರಾಜೇಂದ್ರ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor