ಮೈಸೂರು: ಖಾಸಗಿ ಶಾಲೆಗಳಲ್ಲಿ ಆರ್.ಟಿ.ಇ ಪ್ರವೇಶದಡಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 9ನೇ ತರಗತಿ ಪ್ರವೇಶಕ್ಕೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದ ಘಟನೆ ನಡೆದಿದೆ.

ನಗರದ ಪಡುವಾರಹಳ್ಳಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಮುಂಭಾಗ ಮಂಗಳವಾರ ಸಂಜೆಯಿಂದ ದಲಿತ ಸಂಘರ್ಷ ಸಮಿತಿ ವತಿಯಿಂದ ಆಹೋರಾತ್ರಿ ಧರಣಿ ಆರಂಭವಾಗಿದ್ದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.

ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗದ ಅನೇಕ ಬಡ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆ ಮಕ್ಕಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 8 ನೇ ತರಗತಿವರೆಗೆ ವ್ಯಾಸಾಂಗ ಮಾಡಲು ಅವಕಾಶ ಕಲ್ಪಿಸಲಾಗಿದೆ. 9 ನೇ ತರಗತಿಗೆ ಶಾಲಾ ಆಡಳಿತ ಮಂಡಳಿಯವರು ಅವಕಾಶ ಕಲ್ಪಿಸದೆ ಟಿ.ಸಿ. ಕೊಟ್ಟು ಕಳುಹಿಸುತ್ತಿದ್ದಾರೆ. ನಮ್ಮ ಶಾಲೆ ಫೀಸ್ ಸಂಪೂರ್ಣವಾಗಿ ಕಟ್ಟಿದರೆ ಅವಕಾಶ ನೀಡುತ್ತೇವೆ ಇಲ್ಲಾಂದರೆ ಶಾಲೆ ಬಿಟ್ಟು ಹೋಗಿ ಎಂದು ಹೇಳಿ ಪ್ರಸಕ್ತ ಸಾಲಿನಲ್ಲಿ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ. 8 ನೇ ತರಗತಿವರೆಗೆ ಇಂಗ್ಲೀಷ್ ಮೀಡಿಯಂ ನಲ್ಲಿ ವ್ಯಾಸಾಂಗ ಮಾಡಿ ಇದೀಗ ಕನ್ನಡ ಮೀಡಿಯಂ ನಲ್ಲಿ ವಿದ್ಯಾಭ್ಯಾಸ ಮಾಡಲು ಮಕ್ಕಳಿಗೆ ತೊಂದರೆ ಉಂಟಾಗಿ ಅನೇಕ ಮಕ್ಕಳು ವಿಚಲಿತರಾಗಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಶಾಲಾ ಶೈಕ್ಷಣಿಕ ವರ್ಷ ಎಪ್ರಿಲ್ ನಿಂದ ಹಲವಾರು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್.ಟಿ.ಇ ಅಡಿ ವ್ಯಾಸಾಂಗ ಮಾಡುತ್ತಿರುವ ಮಕ್ಕಳ ಪೋಷಕರಿಗೆ ಖಾಸಗಿ ಶಾಲೆಗಳ ಫೀಸ್ ಕಟ್ಟಲಾಗದೆ ಕಂಗಾಲಾಗಿದ್ದಾರೆ. ಇತ್ತ ರಾಜ್ಯ ಸರ್ಕಾರವೂ ಜವಾಬ್ದಾರಿ ವಹಿಸುತ್ತಿಲ್ಲ, ಇದರಿಂದ ಎಸ್ಸಿ,ಎಸ್ಟಿ ಸಮುದಾಯ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರ ಸಮಸ್ಯೆ ಬಗೆಹರಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಹಾರೋಹಳ್ಳಿ ನಟರಾಜ್, ಚನ್ನಕೇಶವ, ಗಾಂಧಿನಗರ ಗಿರಿ, ಹರಸಿನಕೆರೆ ಶಿವರಾಜು, ಭುಗತಗಳ್ಳಿ ಸಣ್ಣಮಾದು, ಸೋಮನಾಯಕ, ಶಿವಮೂರ್ತಿ, ಮೈಸೂರು ವಿವಿ ಶಿವಕುಮಾರ್, ರಶ್ಮಿ, ಆನಂದ್ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನೇರಳೆ ಸತೀಶ್ ಕುಮಾರ್/ವಾರ್ತಾಭಾರತಿ

contributor

ನೇರಳೆ ಸತೀಶ್ ಕುಮಾರ್ ಅವರು ಕಳೆದ 20 ವರ್ಷಗಳಿಂದ ಪತ್ರಿಕೋದ್ಯಮ‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ನಂಜನಗೂಡಿನಿಂದ ಪತ್ರಿಕೋದ್ಯಮ ಆರಂಭಿಸಿದ ಅವರು, ಮೈಸೂರು, ಬೆಂಗಳೂರು ನಗರಗಳಲ್ಲಿ ಹಲವಾರು ಜಿಲ್ಲಾ ಮತ್ತು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ವರದಿಗಾರ ಮತ್ತು ಉಪ ಸಂಪಾದಕನಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಕಳೆದ 9 ವರ್ಷಗಳಿಂದ ವಾರ್ತಾಭಾರತಿ ಪತ್ರಿಕೆಯಲ್ಲಿ ಮೈಸೂರು ಜಿಲ್ಲಾ ವರದಿಗಾರರಾಗಿಕರ್ತವ್ಯ ನಿರ್ವಹಿಸುತ್ತಿದ್ದಾರೆ.