ಹಸಿರು ಪರಿಸರ ನಿರ್ಮಾಣಕ್ಕೆ ಸಾಮೂಹಿಕ ಪ್ರಯತ್ನ ಅಗತ್ಯ : ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ
ಮಿಯಾವಾಕಿ ಮಾದರಿಯಲ್ಲಿ ‘ಭಾರತ ವನ’ ಯೋಜನೆ; ಸಸಿ ನೆಡುವ ಕಾರ್ಯಕ್ರಮ
ಮೈಸೂರು : ಮರ-ಗಿಡಗಳನ್ನು ಬೆಳೆಸುವುದು ಕೇವಲ ಪರಿಸರ ಸಂರಕ್ಷಣೆಯ ಕೆಲಸವಲ್ಲ, ಅದು ಮುಂದಿನ ಪೀಳಿಗೆಯ ಭವಿಷ್ಯವನ್ನು ಸುರಕ್ಷಿತಗೊಳಿಸುವ ಮಹತ್ವದ ಜವಾಬ್ದಾರಿಯಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದ ಲಲಿತಾದ್ರಿಪುರದ ಸುತ್ತಮುತ್ತ ಕ್ಯಾಚ್ ಫೌಂಡೇಶನ್, ಎಸ್ಬಿಐ ಹಾಗೂ ಎಸ್ಬಿಐ ಫೌಂಡೇಶನ್ನ ಸಿಎಸ್ಆರ್ ಅನುದಾನದ ಸಹಯೋಗದಲ್ಲಿ ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಉಪಸ್ಥಿತಿಯಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಪಾನ್ನ ಪ್ರಸಿದ್ಧ ‘ಮಿಯಾವಾಕಿ’ ಮಾದರಿಯಲ್ಲಿ ‘ಭಾರತ ವನ’ ಯೋಜನೆಯಡಿ ಒಂದೇ ದಿನದಲ್ಲಿ 40 ಸಾವಿರ ಗಿಡಗಳನ್ನು ನೆಡಲಾಗುತ್ತಿದೆ. ಸ್ಥಳೀಯ ತಳಿಯ ಸಸ್ಯಗಳಿಗೆ ವಿಶೇಷ ಆದ್ಯತೆ ನೀಡಿರುವುದು ಈ ಯೋಜನೆಯ ಪ್ರಮುಖ ವೈಶಿಷ್ಟ್ಯವಾಗಿದೆ ಎಂದು ತಿಳಿಸಿದರು.
ಮಿಯಾವಾಕಿ ಮಾದರಿಯಲ್ಲಿ ರೂಪುಗೊಳ್ಳುತ್ತಿರುವ ಈ ನಗರ ಅರಣ್ಯವು ಮುಂದಿನ ದಿನಗಳಲ್ಲಿ ಮೈಸೂರಿನ ಹಸಿರು ಹೊದಿಕೆಯನ್ನು ಹೆಚ್ಚಿಸುವುದರ ಜೊತೆಗೆ ಪರಿಸರ ಸಮತೋಲನ ಕಾಪಾಡಲು ಸಹಕಾರಿಯಾಗಲಿದೆ. ಅಲ್ಲದೆ, ಹಕ್ಕಿ-ಪಕ್ಷಿಗಳು ಹಾಗೂ ವಿವಿಧ ಪ್ರಾಣಿ ಸಂಕುಲಗಳಿಗೆ ನೈಸರ್ಗಿಕ ಆವಾಸಸ್ಥಾನ ಕಲ್ಪಿಸಲಿದೆ ಎಂದರು.
ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಹಾಗೂ ತಾಯಂದಿರ ಹೆಸರಿನಲ್ಲಿ ಗಿಡಗಳನ್ನು ನೆಟ್ಟಿರುವುದು ಅತ್ಯಂತ ಸಂತಸದ ಸಂಗತಿ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮತ್ತು ಪ್ರಕೃತಿಯ ಮೇಲಿನ ಕಾಳಜಿಯನ್ನು ಬೆಳೆಸುವುದು ಇಂತಹ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಬೇಕು. ಸರ್ಕಾರ, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಕೈಜೋಡಿಸಿದಾಗ ಮಾತ್ರ ಸುಸ್ಥಿರ ಮತ್ತು ಪರಿಸರಸ್ನೇಹಿ ನಗರಗಳನ್ನು ನಿರ್ಮಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮೈಸೂರಿನ ನೈಸರ್ಗಿಕ ಸೌಂದರ್ಯ ಮತ್ತು ಹಸಿರು ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಸಾಮೂಹಿಕ ಪರಿಸರ ಅಭಿಯಾನಗಳು ಮಹತ್ವದ ಪಾತ್ರ ವಹಿಸಲಿವೆ. ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಅಮೂಲ್ಯ ಕೊಡುಗೆಯಾಗಿ ನೀಡುವ ಸಂಕಲ್ಪದೊಂದಿಗೆ ಮೈಸೂರನ್ನು ಇನ್ನಷ್ಟು ಹಸಿರು ಹಾಗೂ ಪರಿಸರಸ್ನೇಹಿ ನಗರವನ್ನಾಗಿ ರೂಪಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಸಚಿವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್. ಶ್ರೀವತ್ಸ, ಪರಿಸರವಾದಿ ಡಾ. ರಾಧಾಕೃಷ್ಣ ನಾಯರ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಬಿಐ ಫೌಂಡೇಶನ್ನ ಪ್ರಧಾನ ಮುಖ್ಯ ವ್ಯವಸ್ಥಾಪಕ ದೀಪಕ್ ಕೌಶಿಕ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.