ಲೇಖಕ, ಪ್ರಕಾಶಕರ ವಿರುದ್ಧ ಕಾಂಗ್ರೆಸ್ ದೂರು; ‘ಗಾಂಧಿ ಹತ್ಯೆಯ ಸತ್ಯ’ ನಾಟಕ ಪ್ರದರ್ಶನ ರದ್ದು
ಮೈಸೂರು : ಮಹಾತ್ಮಾ ಗಾಂಧೀಜಿ ಅವರ ಕುರಿತು ಆಕ್ಷೇಪಾರ್ಹ ಹಾಗೂ ಆಧಾರರಹಿತ ಹೇಳಿಕೆಗಳನ್ನು ಒಳಗೊಂಡಿದೆ ಎನ್ನಲಾದ ’ಗಾಂಧಿ ಹತ್ಯೆಯ ಸತ್ಯ’ ಕೃತಿಯ ಲೇಖಕ ಅಡ್ಡಂಡ ಸಿ. ಕಾರ್ಯಪ್ಪ ಮತ್ತು ಪ್ರಕಾಶಕರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ ಹಿನ್ನಲೆ ಮೈಸೂರಿನಲ್ಲಿ ನಾಟಕ ಪ್ರದರ್ಶನ ರದ್ದು ಮಾಡಲಾಗಿದೆ.
ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ನಗರ ಕಾಂಗ್ರೆಸ್ ವತಿಯಿಂದ ಸಲ್ಲಿಸಿರುವ ದೂರಿನಲ್ಲಿ, ಕೃತಿಯಲ್ಲಿರುವ ಹಲವು ಅಂಶಗಳು ಐತಿಹಾಸಿಕ ವ್ಯಕ್ತಿಗಳ ಹೆಸರಿನಲ್ಲಿ ಆಧಾರರಹಿತ ಹೇಳಿಕೆಗಳನ್ನು ಒಳಗೊಂಡಿವೆ. ಮಹಾತ್ಮಾ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರೂ ಸೇರಿದಂತೆ ರಾಷ್ಟ್ರೀಯ ನಾಯಕರ ಹೆಸರಿನಲ್ಲಿ ಉಲ್ಲೇಖಿಸಿರುವ ಹೇಳಿಕೆಗಳ ಸತ್ಯಾಸತ್ಯತೆಯನ್ನು ಅಧಿಕೃತ ದಾಖಲೆಗಳ ಮೂಲಕ ಪರಿಶೀಲಿಸಬೇಕು ಎಂದು ಒತ್ತಾಯಿಸಲಾಗಿದೆ.
ಕೃತಿಯ ಸಂಪೂರ್ಣ ಪ್ರತಿಯನ್ನು ವಶಕ್ಕೆ ಪಡೆದು ಪರಿಶೀಲಿಸಬೇಕು. ಲೇಖಕರಿಂದ ಹೇಳಿಕೆಗಳ ಮೂಲ ಮತ್ತು ಪ್ರಕಟಣೆಯ ಉದ್ದೇಶದ ಕುರಿತು ವಿಚಾರಣೆ ನಡೆಸಬೇಕು. ಪ್ರಕಾಶಕರ ಪಾತ್ರವನ್ನೂ ತನಿಖೆಗೊಳಪಡಿಸಬೇಕು. ಅಪರಾಧದ ಅಂಶಗಳು ಪ್ರಾಥಮಿಕವಾಗಿ ಸಾಬೀತಾದಲ್ಲಿ ಲೇಖಕರನ್ನು ಬಂಧಿಸಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಹಾಗೂ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ಅವರು ದೂರಿಗೆ ಸಹಿ ಹಾಕಿದ್ದಾರೆ.