Mysuru | ಗಣೇಶೋತ್ಸವ ಮೆರವಣಿಗೆ ವೇಳೆ ಪ್ರಚೋದನಕಾರಿ ಭಾಷಣ ಆರೋಪ: ಪ್ರತಾಪ್ ಸಿಂಹ ವಿರುದ್ಧ FIR ದಾಖಲು
ಪ್ರತಾಪ್ ಸಿಂಹ
ಮೈಸೂರು: ಟಿ.ನರಸೀಪುರದಲ್ಲಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರ ವಿರುದ್ಧ ಟಿ.ನರಸೀಪುರ ಪೊಲೀಸರು FIR ದಾಖಲಿಸಿದ್ದಾರೆ.
BNS ಕಾಯ್ದೆಯಡಿ ಸೆಕ್ಷನ್ 132, 191, 194, 196(1)(a)(b), 299, 353(1)(b)(c) ಹಾಗೂ ಸೆಕ್ಷನ್ 190ರ ಅಡಿಯಲ್ಲಿ ಟಿ.ನರಸೀಪುರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಸೆ. 18 ರ ಶುಕ್ರವಾರ ಗಣಪತಿ ವಿಸರ್ಜನೆ ವೇಳೆ ಶೋಭಯಾತ್ರೆ ವೇಳೆ ಟಿ.ನರಸೀಪುರ ಲಿಂಕ್ ರಸ್ತೆಯಲ್ಲಿರುವ ಮಸೀದಿ ಮುಂಭಾಗ ಪ್ರತಾಪ್ ಸಿಂಹ ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂದು ಆರೋಪಿಲಾಗಿದೆ.
ಹೀಗಾಗಿ ಸಾರ್ವಜನಿಕ ಸೇವಕರು ಮತ್ತು ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪ ಹಾಗೂ ಗುಂಪುಗಳು ಹಾಗೂ ಜಾತಿಗಳ ನಡುವೆ ದ್ವೇಷ ಉತ್ತೇಜನೆ, ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮತ್ತು ಪ್ರಚೋದನಕಾರಿ ಭಾಷಣಗಳ ಆರೋಪ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಟಿ.ನರಸೀಪುರ ಇನ್ಸ್ ಪೆಕ್ಟರ್ ವಿರುದ್ಧ ಮಸೀದಿ ಮುಂದೆ ನಿಂತು ಪ್ರತಾಪ್ ಸಿಂಹ ಭಾಷಣ ಮಾಡಿ ಇನ್ಸ್ ಪೆಕ್ಟರ್ ಗೆ ಸವಾಲು ಹಾಕಿದ್ದರು.
ಈ ಸಂಬಂಧ ಶನಿವಾರ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಪ್ರತಾಪ್ ಸಿಂಹ ವಿರುದ್ಧ ದೂರು ನೀಡಿತ್ತು.