ಹುಣಸೂರು ಚಿನ್ನದ ಅಂಗಡಿ ಡರೋಡೆ ಪ್ರಕರಣ | ಬಿಹಾರ ಮೂಲದ ಇಬ್ಬರು ಆರೋಪಿಗಳ ಬಂಧನ: ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ
ಮೈಸೂರು: ಮೈಸೂರು ಜಿಲ್ಲೆ ಹುಣಸೂರಿನ ಸ್ಕೈಗೋಲ್ಡ್ ಅಂಡ್ ಡೈಮಂಡ್ ಚಿನ್ನದ ಅಂಗಡಿಯಲ್ಲಿ ನಡೆದ ಡರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ರಿಷಿಕೇಶ್ ಅಲಿಯಾಸ್ ಚೋಟಾ ಸಿಂಗ್ ಮತ್ತು ಪಂಕಜ್ ಕುಮಾರ್ ಎಂಬ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.28 ರಂದು ಹುಣಸೂರು ನಗರದ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಶಾಪ್ ಚಿನ್ನದ ಅಂಗಡಿಗೆ ಮಧ್ಯಾಹ್ನ 2.04 ಗಂಟೆ ಸಮಯದಲ್ಲಿ ಐವರು ಮುಖಕ್ಕೆ ಮಾಸ್ಕ್ ಹಾಗೂ ಹೆಲ್ಮೆಟ್ ಧರಿಸಿ ಕೈಗಳಲ್ಲಿ ಪಿಸ್ತೂಲ್ ಗಳನ್ನು ಹಿಡಿದು ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರನ್ನು ಹೆದರಿಸಿ ಅಂಗಡಿಯಲ್ಲಿದ್ದ 450 ವಿವಿಧ ಮಾದರಿಯ ಸುಮಾರು 10 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಬೆನ್ನತ್ತಿದ ನಮ್ಮ ಪೊಲೀಸರು ತಾಂತ್ರಿಕ ವಿಧಾನ ಅನುಸರಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಆರೋಪಿಗಳಿಂದ 12.5 ಗ್ರಾಂ ಚಿನ್ನ, 92 ಸಾವಿರ ನಗದು ಮತ್ತು ಒಂದು ಬುಲೆಟ್ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಯಾರೂ ಮೊಬೈಲ್ ಬಳಸದ ಹಿನ್ನೆಲೆಯಲ್ಲಿ ದರೋಡೆ ಪ್ರಕರಣ ಬೇಧಿಸಲು ಕಷ್ಟವಾಗಿತ್ತು. ಬಿಹಾರ ಸೇರಿ ಇತರೆ ರಾಜ್ಯಗಳಲ್ಲಿ ಎರಡು ವಾರದಿಂದ ಶೋಧ ಕಾರ್ಯ ನಡೆಸಿದ್ದೆವು. ಈ ವೇಳೆ ಅಲ್ಲಿಯ ಪೊಲೀಸರ ಸಹಾಯದಿಂದ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದೇವೆ. ದಿಲ್ಲಿಯ ಜೇತ್ ಪುರ್ ಜಿಲ್ಲೆಯ ಹರಿನಗರ ಬಡಾವಣೆಯ ರಿಷಿಕೇಶ್ ಕುಮಾರ್ ಸಿಂಗ್ (ವಿಜಯಕುಮಾರ್ ಸಿಂಗ್) ಹಾಗೂ ಬಿಹಾರದ ಬಾಗಲ್ ಪುರ ಜಿಲ್ಲೆಯ ಪಂಕಜ್ ಕುಮಾರ್ (ರಾಮನಾಥ್ ಪ್ರಸಾದ್ ಸಿಂಗ್) ವಶಕ್ಕೆ ಪಡೆದಿದ್ದೇವೆಂದರು.
ಬಂಧಿತರಲ್ಲಿ ಪಂಕಜ್ ಕುಮಾರ್ ಸಿಂಗ್ ಹಿಂದೆಯೂ 27 ಕೊಲೆ, ಕಳವು ಪ್ರಕರಣಗಳಲ್ಲಿ ಭಾಗಯಾಗಿದ್ದನು. ಚೋಟು ಸಿಂಗ್ 4 ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಇವರೂ ಕಳ್ಳತನವನ್ನೇ ಗುರಿಯಾಗಿಸಿಕೊಂಡಿದ್ದು, ಕಳವಿಗೆ ಸೂಕ್ತ ಜಾಗ ನೋಡುತ್ತಾರೆ. ಈ ಘಟನೆಗೂ ಮುನ್ನ ಹಾಸನ, ತುಮಕೂರು, ಕೊಡಗಿನಲ್ಲಿಯೂ ಹೊಂಚು ಹಾಕಿದ್ದರು. ಅಂತಿಮವಾಗಿ ಹುಣಸೂರು ಅಂಗಡಿ ಆಯ್ಕೆ ಮಾಡಿಕೊಂಡರು. ಯಾವ ಕಾರಣಕ್ಕೆ ಆ ಅಂಗಡಿ ಆಯ್ಕೆ ಮಾಡಿಕೊಂಡರು ಎಂಬಿತ್ಯಾದಿ ಅಂಶ ಪೂರ್ಣ ತನಿಖೆಯಿಂದಷ್ಟೇ ಹೊರಬರಬೇಕಿದೆ ಎಂದು ಹೇಳಿದರು.
ಇನ್ನೂ 10ಕ್ಕೂ ಹೆಚ್ಚು ಮಂದಿ ಆರೋಪಿಗಳಿರುವ ಸಂಶಯವಿದೆ. ವಿಡಿಯೋದಲ್ಲಿನ ಮುಖ ಚಹರೆ ಹಾಗೂ ಇವರ ಮೇಲಿನ ಹಳೆಯ ಪ್ರಕರಣಗಳಿಂದ ಇವರನ್ನು ಪತ್ತೆ ಹಚ್ಚಲು ಸಾಧ್ಯವಾಯಿತು. ಸದರಿ ಗ್ಯಾಂಗ್ ಜೈಲಿನಲ್ಲಿ ಬೇರೆ ಬೇರೆ ಆರೋಪಿತರ ಸಂಪರ್ಕ ಆಗಿರಬಹುದು ಎಂಬಿತ್ಯಾದಿ ಸಂಶಯವಿದೆ. ಎಲ್ಲರ ಬಂಧನ ಬಳಿಕ ಅದು ತಿಳಿಯಲಿದೆ. ಕೇರಳ, ಆಂದ್ರ ಪ್ರದೇಶದಲ್ಲಿಯೂ ಇಂತಹ ದರೋಡೆ ಪ್ರಕರಣಗಳು ನಡೆದಿವೆ. ಕೆಲವು ಪ್ರಕರಣ ಇದುವರೆಗೂ ಪತ್ತೆ ಮಾಡಲಾಗಿಲ್ಲ. ಇನ್ನೂ ಕೆಲವು ಪ್ರಕರಣಗಳಲ್ಲಿ ಪೂರ್ಣ ಆರೋಪಿಗಳನ್ನು ಬಂದಿಸಲಾಗಿಲ್ಲ. ಹೀಗಿರುವಾಗ ರಾಜ್ಯದಲ್ಲಿ ನಡೆಸಿದ ಮೊದಲ ಪ್ರಯತ್ನದಲ್ಲೇ ನಮ್ಮ ಪೊಲೀಸರ ತಂಡ ಅವರನ್ನು ಪತ್ತೆ ಹಚ್ಚಿದ್ದು, ಉಳಿದವರನ್ನು ಶೀಘ್ರ ಬಂದಿಸಲಿದ್ದೇವೆ ಎಂದು ಹೇಳಿದರು.
ಘಟನೆಗೂ ಮುನ್ನ ಮೂರು ನಾಲ್ಕು ದಿನಗಳಿಂದ ಸ್ಥಳೀಯ ಲಾಡ್ಜ್ ಗಳಲ್ಲಿ ಸುಳ್ಳು ಆಧಾರ್, ಮೊಬೈಲ್ ನಂಬರ್ ನೀಡಿ ವಾಸ್ತವ್ಯ ಹೂಡಿದ್ದರು. ಇವರ ಸೆರೆಹಿಡಿಯಲು 50 ಮಂದಿಯ ಪೊಲೀಸರ ತಂಡ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು.
ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಅಪರ ಪೊಲೀಸ್ ಅಧೀಕ್ಷಕ ಎಲ್. ನಾಗೇಶ್, ಸಿ. ಮಲ್ಲಿಕ್, ಹುಣಸೂರು ಉಪವಿಭಾಗದ ಡಿವೈಎಸ್ ಪಿ ರವಿ ಡಿವೈಎಸ್‌ಪಿ,
ಸೈಬರ್ ಠಾಣೆ ಡಿಎಸ್ ಪಿ ಶ್ರೀಕಾಂತ್ ಸೈಬರ್ ಕ್ರೈಂ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಗಳಾದ ಆರ್. ಸಂತೋಷ್ ಕಶ್ಯಪ್, ದೀಪಕ್, ಪುನೀತ್ ಪ್ರಸನ್ನಕುಮಾರ್, ಗಂಗಾಧರ್, ಎಸ್.ಪಿ.ಸುನೀಲ್, ಪಿ.ಎಸ್.ಐ.ಗಳಾದ ಅಜಯ್ ಕುಮಾರ್,ಜಗದೀಶ, ರವಿ ಕುಮಾರ್, ಚಂದ್ರಹಾಸ ನಾಯಕ, ಸಿಬ್ಬಂದಿಗಳಾದ ಎಚ್.ಎನ್.ಅರುಣ ಹೆಚ್.ಎನ್, ಆರ್. ಪ್ರಭಾಕರ, ಶ್ರೀನಿವಾಸ್ ಪ್ರಸಾದ್, ಡಿ.ಎ. ಇರ್ಫಾನ್, ವಿಜಯ್ ಪವಾರ್, ಸತೀಶ್, ಪುನೀತ್, ಚಂದು, ಮಹೇಂದ್ರ ಸಂಜಯ್ ಹಾಗೂ ಜಿಲ್ಲಾ ಬೆಕ್ನಿಕಲ್ ವಿಭಾಗದ ಎ.ಎಸ್.ಐ ವಸಂತ್ ಕುಮಾರ್, ಲೋಕೇಶ್, ಪೀರ್ ಖಾನ್, ಸುನಿತಾ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು. ಸುದ್ದಿಗೋಷ್ಠಿಯಲ್ಲಿ ಅಡಿಷನಲ್ ಎಸ್ಪಿ ಎಲ್.ನಾಗೇಶ್ ಉಪಸ್ಥಿತರಿದ್ದರು.