ಮೈಸೂರು : ನಾಡಹಬ್ಬ ದಸರಾ ಜಂಬೂ ಸವಾರಿ ಮೆರವಣಿಗೆಯ ವರದಿಗಾಗಿ ತೆರಳಿದ್ದ ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿ, ದುರ್ವರ್ತನೆ ತೋರಿದ ಹಾಗೂ ಹಲ್ಲೆಗೆ ಯತ್ನಿಸಿದ ಪೊಲೀಸರ ಕ್ರಮವನ್ನು ಖಂಡಿಸಿ ಪತ್ರಕರ್ತರು ಪ್ರತಿಭಟನೆ ನಡೆಸಿದರು.

ಘಟನೆಯ ಹಿನ್ನೆಲೆಯಲ್ಲಿ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರಿಗೆ (ಡಿಜಿ ಮತ್ತು ಐಜಿಪಿ) ಪತ್ರ ಬರೆದು ಆಗ್ರಹಿಸಿದ್ದಾರೆ.

ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕೃತ ವಾಹನದಲ್ಲಿ, ಮೈಸೂರು ಪೊಲೀಸರಿಂದ ಅನುಮೋದಿತ ಪಾಸ್‌ಗಳನ್ನು ಹೊಂದಿದ್ದ ಪತ್ರಕರ್ತರು ದಸರಾ ಜಂಬೂ ಸವಾರಿ ವರದಿಗಾಗಿ ಅರಮನೆಯ ಬ್ರಹ್ಮಪುರಿ ಗೇಟ್ ಮೂಲಕ ಪ್ರವೇಶಿಸಲು ಮುಂದಾದರು. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ವಾಹನವನ್ನು ಒಳಗೆ ಬಿಡಲು ನಿರಾಕರಿಸಿ ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು ಆರೋಪಿಸಲಾಗಿದೆ.

ಬಳಿಕ ಪತ್ರಕರ್ತರು ವಾಹನದಿಂದ ಇಳಿದು ಕಾಲ್ನಡಿಗೆಯಲ್ಲಿ ತೆರಳಲು ಮುಂದಾದಾಗ ಬ್ಯಾರಿಕೇಡ್‌ಗಳನ್ನು ಅಡ್ಡಹಾಕಿ ತಡೆಯಲಾಯಿತು. ಅಲ್ಲದೆ, ಪತ್ರಕರ್ತರು ನಕಲಿ ಪಾಸ್‌ಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿ, ಹಿರಿಯ ಪತ್ರಕರ್ತರು ಸೇರಿದಂತೆ ಹಲವರ ಕತ್ತಿನ ಪಟ್ಟಿ ಹಿಡಿದು ಎಳೆದಾಡಿ ಹಲ್ಲೆಗೆ ಮುಂದಾದರು ಎಂದು ದೂರಲಾಗಿದೆ. ಪತ್ರಕರ್ತರು ಸ್ಥಳದಲ್ಲೇ ಪ್ರತಿಭಟನೆಗೆ ಮುಂದಾದ ಬಳಿಕ ಅವರನ್ನು ಒಳಗೆ ಬಿಡಲಾಯಿತು.

ಅಲ್ಲಿಂದ ಮಾಧ್ಯಮ ಗ್ಯಾಲರಿಗೆ ತೆರಳುತ್ತಿದ್ದಾಗ ಮತ್ತೊಂದು ಸ್ಥಳದಲ್ಲಿ ಪೊಲೀಸರು ಪತ್ರಕರ್ತರನ್ನು ತಡೆದು ಪ್ರವೇಶ ನಿರಾಕರಿಸಿದರು. ಸ್ಥಳಕ್ಕೆ ಆಗಮಿಸಿದ ಮೈಸೂರು ನಗರ ಡಿಸಿಪಿ ಪ್ರಿಯಂವದಾ ಅವರೂ ಪತ್ರಕರ್ತರಿಗೆ ಪ್ರವೇಶ ಕಲ್ಪಿಸಲು ಸತಾಯಿಸಿದರು ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿಯೂ ಪತ್ರಕರ್ತರು ಪ್ರತಿಭಟನೆಗೆ ಮುಂದಾದರು. ಬಳಿಕ ಶಾಸಕ ಟಿ.ಎಸ್. ಶ್ರೀವತ್ಸ ಸ್ಥಳಕ್ಕೆ ಆಗಮಿಸಿದ ನಂತರ ಪತ್ರಕರ್ತರಿಗೆ ಒಳಪ್ರವೇಶಿಸಲು ಅವಕಾಶ ನೀಡಲಾಯಿತು.

ಪದೇಪದೇ ಎದುರಾದ ಅಡಚಣೆಗಳಿಂದ ಬೇಸತ್ತ ಪತ್ರಕರ್ತರು, ಮುಖ್ಯಮಂತ್ರಿ ನಂದಿ ಧ್ವಜ ಪೂಜೆಗೆ ಆಗಮಿಸುವ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಡಿಜಿಪಿ ಸಲೀಂ ಅವರು, ಪತ್ರಕರ್ತರಿಗೆ ತೊಂದರೆಯಾಗಿರುವ ವಿಷಯ ತಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿ, ಪ್ರತಿಭಟನೆ ಕೈಬಿಟ್ಟು ಸ್ಥಳದಿಂದ ತೆರಳುವಂತೆ ಮನವಿ ಮಾಡಿದರು.

ಆದರೆ, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ ಅವರು, ಪತ್ರಕರ್ತರಿಗೆ ಅವಮಾನ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಸ್ಥಳಕ್ಕೆ ಆಗಮಿಸಿ, ತೊಂದರೆ ನೀಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅವರ ಮನವಿಯ ಬಳಿಕ ಪತ್ರಕರ್ತರು ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ಪತ್ರಕರ್ತರಾದ ಆಂಶಿ ಪ್ರಸನ್ನ ಕುಮಾರ್, ಧರ್ಮಾಪುರ ನಾರಾಯಣ, ಮೂಗೂರು ನಂಜುಂಡಸ್ವಾಮಿ, ಪ್ರಗತಿ ಗೋಪಾಲಕೃಷ್ಣ, ಕೆ.ಪಿ. ನಾಗರಾಜ್, ರಾಮ್, ಕಾರ್ತಿಕ್, ಪ್ರಸನ್ನ, ಶೇಖರ್ ಕಿರುಗುಂದ, ಕೃಷ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪೊಲೀಸರ ವಿರುದ್ಧ ಕ್ರಮಕ್ಕೆ ಕೆ. ಶಿವಕುಮಾರ್ ಆಗ್ರಹ :

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಯ ವರದಿಗಾಗಿ ತೆರಳಿದ ಪತ್ರಕರ್ತರ ಮೇಲೆ ದುರ್ವರ್ತನೆ ತೋರಿ, ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿ ಮತ್ತು ಐಜಿಪಿ ಅವರಿಗೆ ಪತ್ರ ಬರೆದಿರುವ ಅವರು, ಮೈಸೂರು ದಸರಾ ನಾಡಿನ ಹೆಮ್ಮೆಯ ಆಚರಣೆಯಾಗಿದ್ದು, ಅದರ ಯಶಸ್ಸಿಗಾಗಿ ಸಾವಿರಾರು ಮಂದಿ ಶ್ರಮಿಸುತ್ತಾರೆ. ದಸರಾ ಮಹೋತ್ಸವದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳು ಹಾಗೂ ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆಯ ಸುದ್ದಿಗಳನ್ನು ಜನರ ಮನೆಮನೆಗೆ ತಲುಪಿಸುವಲ್ಲಿ ಪತ್ರಕರ್ತರು ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಾರಿ ಪತ್ರಕರ್ತರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸದ ಕಾರಣ ವರದಿಗಾರಿಕೆಗೆ ಅಡಚಣೆ ಉಂಟಾಗಿದೆ. ಪ್ರತಿ ವರ್ಷ ಜಂಬೂ ಸವಾರಿ ಮೆರವಣಿಗೆಯ ವರದಿಗಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಅರಮನೆಯ ಕರಿಕಲ್ಲು ತೊಟ್ಟಿ ಮೂಲಕ ಪ್ರವೇಶ ಕಲ್ಪಿಸಲಾಗುತ್ತಿತ್ತು. ಆದರೆ, ಈ ಬಾರಿ ಬ್ರಹ್ಮಪುರಿ ಗೇಟ್ ಮೂಲಕ ಪ್ರವೇಶ ಕಲ್ಪಿಸಲಾಗುವುದು ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿತ್ತು. ಆದರೂ, ಅಲ್ಲಿನ ಕರ್ತವ್ಯನಿರತ ಪೊಲೀಸರು ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಿಸಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಅಧಿಕೃತವಾಗಿ ನೀಡಲಾಗಿದ್ದ ದಸರಾ ವರದಿಗಾರಿಕೆಯ ಗುರುತಿನ ಚೀಟಿ (ಡ್ಯೂಟಿ ಪಾಸ್) ಹೊಂದಿದ್ದ ಪತ್ರಕರ್ತರನ್ನೇ ನಕಲಿ ಪಾಸ್ ಮಾಡಿಕೊಂಡು ಬಂದಿದ್ದಾರೆ ಎಂದು ಆರೋಪಿಸಿ ಪೊಲೀಸರು ದುರ್ವರ್ತನೆ ತೋರಿದ್ದಾರೆ. ಅಲ್ಲದೆ, ಹಿರಿಯ ಪತ್ರಕರ್ತರ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ. ಇದನ್ನು ಖಂಡಿಸಿ ಪತ್ರಕರ್ತರು ಸ್ಥಳದಲ್ಲೇ ಪ್ರತಿಭಟನೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕೆ. ಶಿವಕುಮಾರ್ ತಿಳಿಸಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕೃತ ವಾಹನ ಪಾಸ್ ಹೊಂದಿದ್ದ ಸರ್ಕಾರಿ ವಾಹನದಲ್ಲಿ ಆಗಮಿಸಿದ ಪತ್ರಕರ್ತರನ್ನು ಬ್ರಹ್ಮಪುರಿ ಪ್ರವೇಶ ದ್ವಾರದ ಬಳಿ ತಡೆದು ನಿಲ್ಲಿಸಲಾಗಿದೆ. ಇದರಿಂದ ನಿಗದಿತ ಸಮಯಕ್ಕೆ ಕಾರ್ಯಕ್ರಮಗಳ ವರದಿ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ಬಳಿಕ ಕಾಲ್ನಡಿಗೆಯಲ್ಲಿ ಬಂದ ಅನೇಕ ಪತ್ರಕರ್ತರಿಗೂ ಈ ದ್ವಾರದಲ್ಲಿ ಪ್ರವೇಶವಿಲ್ಲ ಎಂದು ಹೇಳಿ ವಾಪಸ್ ಕಳುಹಿಸಲಾಗಿದೆ. ಅರಮನೆ ಆವರಣದಲ್ಲಿ ಪತ್ರಕರ್ತರಿಗಾಗಿ ವ್ಯವಸ್ಥೆ ಮಾಡಲಾಗಿದ್ದ ಮಾಧ್ಯಮ ಗ್ಯಾಲರಿಗೆ ಒಮ್ಮೆ ಮಾತ್ರ ಪ್ರವೇಶ ನೀಡಿ, ಬಳಿಕ ಅದನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳನ್ನು ವರದಿ ಮಾಡಿ, ನಿಗದಿತ ಸಮಯಕ್ಕೆ ಸುದ್ದಿ ಸಂಸ್ಥೆಗಳಿಗೆ ತಲುಪಿಸುವುದು ಪತ್ರಕರ್ತರ ಪ್ರಮುಖ ಜವಾಬ್ದಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಪೊಲೀಸರು ಅಸಭ್ಯವಾಗಿ ವರ್ತಿಸಿ, ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಪೊಲೀಸ್ ಇಲಾಖೆಯ ವೈಫಲ್ಯವನ್ನು ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ದುರ್ವರ್ತನೆ ತೋರಿದ ಹಾಗೂ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಮುಂದಿನ ಬಾರಿ ದಸರಾ ಮಹೋತ್ಸವದ ವರದಿಗಾರಿಕೆಗೆ ಯಾವುದೇ ಅಡಚಣೆ ಉಂಟಾಗದಂತೆ ಜಿಲ್ಲಾಡಳಿತವು ಇಂತಹ ಅವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಲು ಸೂಕ್ತ ಸೂಚನೆ ನೀಡಬೇಕು ಎಂದು ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor