ಮೈಸೂರು : ʼಅರಮನೆ ಮಂಡಳಿ ಸರಕಾರದ್ದು, ಅರಮನೆ ಜಾಗವೂ ಸರಕಾರದ್ದು, ಅವರಿಗೆ ಉಳಿದುಕೊಳ್ಳಲು ಒಂದಿಷ್ಟು ಜಾಗ ಕೊಟ್ಟಿದ್ದೇವೆ ಅಷ್ಟೆʼ ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಗೆ ತಿರುಗೇಟು ನೀಡಿದ್ದಾರೆ.

ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ರವಿವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ದಸರಾದಲ್ಲಿ ರಾಜಮನೆತನ ಮತ್ತು ಅಧಿಕಾರಿಗಳ ನಡುವಿನ ಸಮನ್ವಯತೆ ಕುರಿತು ಅಸಮಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಯತೀಂದ್ರ, ʼಪ್ರಮೋದಾದೇವಿ ಒಡೆಯರ್ ಅವರು ಹೇಳಿರುವ ಸಮಸ್ಯೆ ಬಗೆಹರಿಸುತ್ತೇವೆ. ಆದರೆ, ಅವರು ಹೇಳಿರುವುದನ್ನೆಲ್ಲ ಒಪ್ಪಲು ಆಗುವುದಿಲ್ಲ. ಅವರು ಹೇಳಿದಂತೆ 7 ದಿನ ದಸರಾ ಮಾಡಲು ಸಾಧ್ಯವಿಲ್ಲ. ಸರಕಾರದ್ದು ದಸರಾ ಅಲ್ಲ ಎಂಬ ಪದ ಬಳಕೆಯೂ ಸರಿಯಲ್ಲ. ಸರಕಾರದ ದಸರೆಗೂ ಇತಿಹಾಸ ಇದೆ. ಅದನ್ನು ದಸರಾ ಅಲ್ಲ ಎಂಬುದನ್ನು ನಾವು ಒಪ್ಪುವುದಿಲ್ಲʼ ಎಂದು ಹೇಳಿದರು.

ʼಅಂಬಾರಿಯನ್ನು ನಾವು ಉಚಿತವಾಗಿ ಪಡೆಯುತ್ತಿಲ್ಲ. ಅಂಬಾರಿಗೂ ಸರಕಾರ ದುಡ್ಡು ಕೊಡುತ್ತದೆ. ಅವರಿಗೆ ಏನಾದರೂ ಸಮಸ್ಯೆ ಇದ್ದಿದ್ದರೆ ಸರಕಾರಕ್ಕೆ ನೇರವಾಗಿ ಹೇಳಬಹುದಿತ್ತು. ನಾವು ನಿರಂತರವಾಗಿ ಅವರ ಜೊತೆಯಲ್ಲಿ ಸಂಪರ್ಕದಲ್ಲಿದ್ದೆವು. ನಮ್ಮ ಗಮನಕ್ಕೆ ಏನನ್ನೂ ತಂದಿಲ್ಲ. ಏಕಾಏಕಿ ಮಾಧ್ಯಮಗಳಿಗೆ ಪತ್ರ ಬರೆದರೆ ಹೇಗೆ? ಅವರು ಸರಕಾರಕ್ಕೇನೂ ಪತ್ರ ಬರೆದಿಲ್ಲʼ ಎಂದು ಹೇಳಿದರು.

ಅಗತ್ಯವಿದರೆ ನಾವು ಕೆಲವರನ್ನು ಸರಕಾರದಿಂದ ಅವರ ಬಳಿಗೆ ಕಳುಹಿಸುತ್ತೇವೆ. ಮುಖ್ಯಮಂತ್ರಿಯವರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೆ. ಏನು ಸಮಸ್ಯೆಯಾಗಿದೆ ಎಂಬುದನ್ನು ಬೇಕಿದ್ದರೆ ಚರ್ಚೆ ಮಾಡುತ್ತೇವೆ ಎಂದರು.

ಅಂಬಾರಿ ಆನೆ ಯಾವುದು ಎಂಬುದನ್ನು ಅವರಿಗೆ ಹೇಳುವ ಅವಶ್ಯಕತೆ ಕಾನೂನು ಪ್ರಕಾರ ಇಲ್ಲ. ಅಂಬಾರಿ ಆನೆ ತೀರ್ಮಾನ ಆಗಿದ್ದೇ ಕೊನೆ ಗಳಿಗೆಯಲ್ಲಿ. ಮೊದಲು ಮಹೇಂದ್ರ ಆಮೇಲೆ ಧನಂಜಯ ಎಂದರು, ಆಮೇಲೆ ಪ್ರಶಾಂತ ಎಂದರು. ಇಲ್ಲೇ ಸ್ವಲ್ಪ ಗೊಂದಲ ಇತ್ತು. ಹೀಗಾಗಿ ಆಯ್ಕೆ ತಡವಾಗಿದೆ. ಅವರಿಗೆ ಅಂಬಾರಿ ಆನೆ ಯಾವುದು ಎಂಬುದನ್ನು ಹೇಳುವ ಅಗತ್ಯ ಇಲ್ಲ ಎಂದರು.

ಜೆಟ್ಟಿ ಕಾಳಗ ರದ್ದಾದ ವಿಚಾರದಲ್ಲಿ ಪ್ರಮೋದಾದೇವಿ ಒಡೆಯ‌ರ್ ಅವರು ಪತ್ರದಲ್ಲಿ ಉಲ್ಲೇಖ ಮಾಡಿರುವುದು ಒಂದು. ಪೊಲೀಸರು ಹೇಳುತ್ತಿರುವುದೊಂದು. ಜೆಟ್ಟಿಗಳೇ ತಡವಾಗಿ ಬಂದರು, ನಮ್ಮಿಂದೇನೂ ತೊಂದರೆ ಆಗಿಲ್ಲವೆಂದು ಪೊಲೀಸರು ಹೇಳಿದ್ದಾರೆ. ಇದನ್ನೇ ನಾವು ಪರಿಶೀಲನೆ ಮಾಡುತ್ತಿದ್ದೇವೆ. ಎಲ್ಲಿ ತಪ್ಪಾಗಿದೆ ಎಂಬುದನ್ನು ನೋಡುತ್ತಿದ್ದೇವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor