ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ ಏಕರೂಪ ನಿಯಮ ಜಾರಿಗೆ ವರದಿ ಸಿದ್ಧತೆ : ಸತೀಶ್ ಮಹನಾ
ದೇಶದ ಆರು ರಾಜ್ಯಗಳ ವಿಧಾನಸಭಾಧ್ಯಕ್ಷರ ಸಭೆ
ಮೈಸೂರು, ಮೇ 12 : ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಜನಪ್ರತಿನಿಧಿ ಸಭೆ ಆರಂಭಿಸಿ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದ ಮೈಸೂರಲ್ಲಿ ದೇಶದ ಎಲ್ಲ ರಾಜ್ಯಗಳ ವಿಧಾನಸಭೆಗಳ ಕಾರ್ಯ ವಿಧಾನ ಹಾಗೂ ನಡವಳಿಕೆಯ ಏಕರೂಪತೆ ತರುವ ಪ್ರಪ್ರಥಮ ಸಭೆ ಮಂಗಳವಾರ ಆರಂಭಗೊಂಡಿತು.
ನಗರದ ಸೈಲೆಂಟ್ ಶೋರ್ಸ್ ಹೋಟೆಲ್‌ನಲ್ಲಿ ಉತ್ತರ ಪ್ರದೇಶದ ವಿಧಾನಸಭೆಯ ಸಭಾಧ್ಯಕ್ಷರೂ ಆದ ಸಮಿತಿಯ ಅಧ್ಯಕ್ಷ ಸತೀಶ್ ಮಹನಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಾಗಲ್ಯಾಂಡ್, ಹಿಮಾಚಲ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮತ್ತು ದಿಲ್ಲಿಯ ವಿಧಾನಸಭಾ ಸಭಾಧ್ಯಕ್ಷರು ಭಾಗವಹಿಸಿದ್ದಾರೆ.
ಎಲ್ಲಾ ರಾಜ್ಯದ ವಿಧಾನಸಭೆಗಳ ಕಾರ್ಯವಿಧಾನ ಹಾಗೂ ನಡವಳಿಕೆಯ ಏಕರೂಪತೆ ತರುವ ನಿಟ್ಟಿನಲ್ಲಿ ಆರು ರಾಜ್ಯಗಳ ವಿಧಾನಸಭೆಯ ಸಭಾಧ್ಯಕ್ಷರುಗಳನ್ನೊಳಗೊಂಡ ಸಮಿತಿಯನ್ನು ಲೋಕಸಭೆಯ ಸಭಾಧ್ಯಕ್ಷ ಓಂ ಬಿರ್ಲಾ ರಚಿಸಿದ್ದಾರೆ.
ಮೊದಲ ದಿನದ ಸಭೆಯಲ್ಲಿ ತಮ್ಮ ರಾಜ್ಯಗಳ ವಿಧಾನಸಭೆಯ ನಡಾವಳಿಗಳ ಬಗ್ಗೆ ಕಾರ್ಯದರ್ಶಿಗಳು ಮಾಹಿತಿ ನೀಡಿದರು. ಬುಧವಾರ ಸಭೆ ಮುಂದುವರಿಯಲಿದೆ. ಮೊದಲ ದಿನ ಸಭೆಯ ಬಳಿಕ ಸತೀಶ್ ಮಹನಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಮಿತಿಯು ಸಭೆ ನಡೆಸಿ ಎಲ್ಲಾ ರಾಜ್ಯಗಳ ವಿಧಾನಮಂಡಲದಲ್ಲಿರುವ ನೀತಿ ನಿಯಮಗಳು ಹಾಗೂ ನಿಯಮಗಳನ್ನು ಉತ್ತಮಗೊಳಿಸುವ ಬಗ್ಗೆ ಚರ್ಚೆ ನಡೆಸಿ ವರದಿ ಸಿದ್ಧಪಡಿಸಲಿದೆ. ಇದರೊಂದಿಗೆ ಬೇರೆ ರಾಜ್ಯಗಳ ಸಭಾಧ್ಯಕ್ಷರು ನೀಡುವ ಸಲಹೆಗಳನ್ನು ಸಹ ಪಡೆಯಲಾಗುವುದು ಎಂದರು.
ಸಮಿತಿಯು ವರದಿಯನ್ನು ಸಿದ್ಧಪಡಿಸಿ ಲೋಕಸಭಾಧ್ಯಕ್ಷರಿಗೆ ಸಲ್ಲಿಸಲಿದೆ. ಇಂದು ಪ್ರಥಮ ಸಭೆ ನಡೆಸಲಾಗಿದ್ದು, ಮುಂದಿನ ಸಭೆಯನ್ನು 1.5 ತಿಂಗಳೊಳಗಾಗಿ ದಿಲ್ಲಿಯಲ್ಲಿ ನಡೆಸಲಾಗುವುದು. ಸಮಿತಿಗೆ ವರದಿ ನೀಡಲು 6 ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದರು.
40 ವರ್ಷಗಳ ಹಿಂದೆ ವಿಧಾನ ಮಂಡಲದ ನೀತಿ ನಿಯಮಗಳನ್ನು ರೂಪಿಸಲಾಗಿತ್ತು. ಈ ಹಿಂದೆ 25 ರಿಂದ 30 ವರ್ಷಗಳಿಗೆ ತಲೆಮಾರು ಬದಲಾವಣೆಯಾಗುತ್ತಿತ್ತು. ಇಂದು 5 ವರ್ಷಗಳಲ್ಲಿ ತಲೆಮಾರು ಬದಲಾವಣೆಯಾಗುತ್ತಿದೆ. ತಂತ್ರಜ್ಞಾನ, ಮೂಲಸೌಕರ್ಯ, ಹಣಕಾಸು ವ್ಯವಹಾರ, ಸೇರಿದಂತೆ ವಿವಿಧ ವ್ಯವಸ್ಥೆಗಳು ಬದಲಾವಣೆ ಹಾಗೂ ಸಾರ್ವಜನಿಕರ ಶ್ರೇಯೋಭಿವೃದ್ಧಿಯನ್ನು ಮುಖ್ಯವಾಗಿ ಇರಿಸಿಕೊಂಡು ಸಮಿತಿ ಚರ್ಚೆ ನಡೆಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್, ಸಮಿತಿಯ ಸದಸ್ಯರಾದ ನಾಗಾಲ್ಯಾಂಡ್ ವಿಧಾನಸಭೆಯ ಸಭಾಧ್ಯಕ್ಷ ಶ್ಯಾರಿಗ್ಯಾನ್ ಲಾಂಗ್ಕುಮೇರ್, ಹಿಮಾಚಲ ಪ್ರದೇಶದ ವಿಧಾನಸಭೆಯ ಸಭಾಧ್ಯಕ್ಷ ಕುಲ್‌ದೀಪ್ ಸಿಂಗ್ ಪತಾನೀಯ ಹಾಗೂ ದಿಲ್ಲಿ ವಿಧಾನಸಭೆಯ ಸಭಾಧ್ಯಕ್ಷ ವಿಜೇಂದರ್ ಗುಪ್ತ ಉಪಸ್ಥಿತರಿದ್ದರು.
ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ಇಲ್ಲ: ಯ.ಟಿ.ಖಾದರ್
ವಿಧಾನಸಭೆಗಳಲ್ಲಿ ಏಕೀಕೃತ ನಿಯಮಗಳನ್ನು ಜಾರಿಗೆ ತರುವುದರಿಂದ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ಇಲ್ಲ. ಒಂದೊಂದು ರಾಜ್ಯದ ವಿಧಾನಸಭೆಗಳಲ್ಲಿ ಒಂದೊಂದು ನಿಯಮಗಳಿವೆ. ಅವುಗಳನ್ನು ಏಕೀಕೃತಗೊಳಿಸಲು ಮೈಸೂರಲ್ಲಿ ಪ್ರಥಮ ಸಭೆ ನಡೆಸಿದ್ದೇವೆ. ಸರಿಯಾದ ಕೋರಂ, ಸದಸ್ಯರ ಭಾಗವಹಿಸುವಿಕೆ, ಪ್ರಶ್ನೋತ್ತರ, ಸದನವನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಯಾವ ರೀತಿ ನಿಯಮದಲ್ಲಿ ತರಬೇಕು ಎಂದು ಚರ್ಚೆ ಮಾಡಿ ಅಂತಿಮ ವರದಿಯನ್ನು ಲೋಕಸಭೆ ಸಭಾಧ್ಯಕ್ಷರಿಗೆ ಸಲ್ಲಿಸುತ್ತೇವೆ.
-ಯು.ಟಿ.ಖಾದರ್, ಸ್ಪೀಕರ್