ಕಾಂಗ್ರೆಸ್ ದೇವರಾಜ ಅರಸುಗೆ ಮೋಸ ಮಾಡಿದಂತೆ ಸಿದ್ದರಾಮಯ್ಯರಿಗೂ ಮೋಸ ಮಾಡಿದೆ : ಬಿ.ಶ್ರೀರಾಮುಲು
"ಅಧಿಕಾರ ಹಸ್ತಾಂತರ ಬಳಿಕ ಸಿದ್ದರಾಮಯ್ಯರನ್ನು ಮೂಲೆಗುಂಪು ಮಾಡಲಾಗಿದೆ"
ಮೈಸೂರು : ಡಿ.ದೇವರಾಜ ಅರಸು ಅವರಿಗೆ ಕಾಂಗ್ರೆಸ್ ಮೋಸ ಮಾಡಿದಂತೆ ಸಿದ್ದರಾಮಯ್ಯ ಅವರಿಗೂ ಕಾಂಗ್ರೆಸ್ ಮೋಸ ಮಾಡಿದೆ. ಸಿದ್ದರಾಮಯ್ಯ ಅಧಿಕಾರ ತ್ಯಜಿಸಿದ ನಂತರ ಅವರನ್ನು ಎಲ್ಲಿಗೂ ಕರೆಯದೆ ಕಾವೇರಿ ನಿವಾದಲ್ಲಿ ಕೂಡಿ ಹಾಕಲಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಸ್ತಾಂತರ ಬಳಿಕ ಸಿದ್ದರಾಮಯ್ಯ ಅವರನ್ನು ಸಂಪೂರ್ಣ ಮೂಲೆ ಗುಂಪು ಮಾಡಲಾಗಿದೆ. ಸಿದ್ದರಾಮಯ್ಯ ಅಶೀರ್ವಾದದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಅದೇ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಕೂಡಿ ಹಾಕಿದೆ. ಸಿದ್ದರಾಮಯ್ಯ ಈಗ ಲೆಕ್ಕಕ್ಕೆ ಇಲ್ಲದ ಮನುಷ್ಯ ಎಂಬ ರೀತಿ ನೋಡಲಾಗುತ್ತಿದೆ ಎಂದು ಹೇಳಿದರು.
ಅಧಿಕಾರ ತೆಗೆದುಕೊಳ್ಳುವ ತನಕ ಸಿಎಂ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ ಅವರನ್ನು ಅತಿಯಾಗಿ ಓಲೈಸಿದರು. ಈಗ ಒಂದೇ ಒಂದು ಕಾರ್ಯಕ್ರಮಕ್ಕೂ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರನ್ನು ಕರೆಯುತ್ತಿಲ್ಲ. ಸಿಎಂ ಅವರಿಗೆ ಈಗ ಸಿದ್ದರಾಮಯ್ಯ ಬೇಕಾಗಿಲ್ಲ. ಸಿಎಂ ಮನಸ್ಸು ಮಾಡಿದ್ದರೆ ಕೆಂಪೇಗೌಡ ಜಯಂತಿಯಲ್ಲಿ ಸಿದ್ದರಾಮಯ್ಯ ಫೋಟೊ ಹಾಕಿಸಬಹುದಿತ್ತು. ಆದರೆ ಹಾಕಿಸಲಿಲ್ಲ. ಕಾಂಗ್ರೆಸ್ 2023ರಲ್ಲಿ ಅಧಿಕಾರಕ್ಕೆ ಬಂದಿದ್ದು ಸಿದ್ದರಾಮಯ್ಯ ಅವರ ಆಶೀರ್ವಾದ ದಿಂದ. ಈಗ ಅದೇ ಜನ 2028ಕ್ಕೆ ಕಾಂಗ್ರೆಸ್ ಗೆ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ನಗರಾಭಿವೃದ್ಧಿ ಸಚಿವ ಖಾತೆ ಬಿಡಬೇಕು:
ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಒಳಗಡೆಯೇ ಪಿತೂರಿ ನಡೆಯುತ್ತಿದೆ. ಯತೀಂದ್ರ ಅವರಿಗೆ ನಗರಾಭಿವೃದ್ಧಿ ಖಾತೆ ಯಾಕೆ ಎಂದು ಚರ್ಚೆ ಶುರು ಮಾಡಿರುವುದೇ ಕಾಂಗ್ರೆಸ್. ಕಾಂಗ್ರೆಸ್ ನ ಒಂದು ಗುಂಪಿಗೆ ಯತೀಂದ್ರ ಸಿದ್ದರಾಮಯ್ಯ ಆ ಖಾತೆಯಲ್ಲಿರುವುದು ಇಷ್ಟ ಇಲ್ಲ. ಮುಡಾ ಹಗರಣದಲ್ಲಿ ಯತೀಂದ್ರ ಕುಟುಂಬದ ಮೇಲೆ ಆರೋಪ ಇದೆ. ಹೀಗಾಗಿ ಯತೀಂದ್ರ ನಗರಾಭಿವೃದ್ಧಿ ಖಾತೆ ವಹಿಸಿಕೊಂಡಿರುವುದು ಸರಿಯಲ್ಲ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಯತೀಂದ್ರ ಆ ಖಾತೆ ಬಿಡಬೇಕು ಎಂದು ಹೇಳಿದರು.