ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ತಪ್ಪಿದರ ಹಿಂದೆ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ: ಸಚಿವ ಯತೀಂದ್ರ ಸಿದ್ದರಾಮಯ್ಯ
ನಗರಾಭಿವೃದ್ದಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ
ಮೈಸೂರು: ಶಾಸಕ ತನ್ವೀರ್ ಸೇಠ್ ಗೆ ಸಚಿವ ಸ್ಥಾನ ತಪ್ಪಿದರ ಹಿಂದೆ ನಮ್ಮ ತಂದೆಯ ಪಾತ್ರ ಇಲ್ಲ. ಹಾಗೆಯೇ ಸಚಿವ ಸಂಪುಟದ ಬಗ್ಗೆ ನಮ್ಮ ತಂದೆಗೆ ಯಾವ ಅಸಮಾಧಾನವೂ ಇಲ್ಲ ಎಂದು ನಗರಾಭಿವೃದ್ದಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಶಾಸಕ ತನ್ವೀರ್ ಸೇಠ್ ಗೆ ಸಚಿವ ಸ್ಥಾನ ಕೈತಪ್ಪಲು ನಮ್ಮ ಜಿಲ್ಲೆಯ ಮಾಜಿ ಸಿಎಂ ಕಾರಣ ಎಂಬ ಎಚ್.ವಿಶ್ವನಾಥ್ ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಸಾಕ್ಷಿಯಿಲ್ಲ, ಆಧಾರವಿಲ್ಲದೇ ಸುಮ್ಮನೆ ಹೇಳುತ್ತಾರೆ. ತಂದೆಯವರು ಯಾರನ್ನೂ ಶಿಫಾರಸ್ಸು ಮಾಡಿಲ್ಲ. ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದರಲ್ಲಿ ನಮ್ಮ ತಂದೆಯ ಪಾತ್ರವಿಲ್ಲ" ಎಂದು ಸ್ಪಷ್ಟಪಡಿಸಿದರು.
ಇಬ್ಬರಿಗೆ ಮುಸ್ಲಿಂ ಕೋಟಾದಲ್ಲಿ ನೀಡಬೇಕಿತ್ತು. ಅದನ್ನು ಹೈಕಮಾಂಡ್ ಭರ್ತಿ ಮಾಡಿದೆ. ಕೆಲವರ ಹೆಸರನ್ನ ತಂದೆವರು ಹೇಳಿದ್ದರು. ಅವರ ಲಿಸ್ಟ್ ನಾನು ನೋಡಿರಲಿಲ್ಲ. ಈ ಬಗ್ಗೆ ನನಗೆ ಹೆಚ್ಚೇನು ಗೊತ್ತಿಲ್ಲ. ತಂದೆಯವರು ಡಾ.ಎಚ್.ಸಿ.ಮಹದೇವಪ್ಪ ಪರ ಕೇಳಿದ್ದು ಸತ್ಯ ಎಂದರು.
ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಗೈರಾಗಿರುವುದಕ್ಕೆ ಪ್ರತಿಕ್ರಿಯಿಸಿ, ಈ ಸಚಿವ ಸಂಪುಟದ ಬಗ್ಗೆ ನಮ್ಮ ತಂದೆಗೆ ಯಾವ ಅಸಮಾಧಾನವೂ ಇಲ್ಲ. ಆಗಸ್ಟ್ 3ರಂದು ನಮ್ಮ ತಂದೆಯ ಹುಟ್ಟು ಹಬ್ಬ. ಶುಭಹಾರೈಸಲು ಹಲವರು ಬಂದಿದ್ದರು. ಆ ಕಾರಣಕ್ಕೆ ಅವರು ಹೋಗಲು ಆಗಲಿಲ್ಲ. ತಂದೆಯವರಿಗೆ ಯಾವುದೇ ಅಸಮಾಧಾನ ಇಲ್ಲ. ತಂದೆಯವರು ಯಾಕೆ ಹೋಗಿಲ್ಲ ಅಂತ ಅವರನ್ನೇ ಕೇಳಬೇಕು ಎಂದರು.
ಸಚಿವ ಸಂಪುಟದ ಬಗ್ಗೆ ಅಸಮಾಧಾನ ವಿಚಾರ ಕುರಿತು ಮಾತನಾಡಿ, ಯಾರ್ಯಾರು ಅಸಮಾಧಾನಗೊಂಡಿದ್ದಾರೋ ಅವರನ್ನು ಸಮಾಧಾನ ಮಾಡುವ ಕೆಲಸ ಮುಗಿದಿದೆ. ಶಾಸಕರಾದ ತನ್ವೀರ್ ಸೇಠ್, ಮಹದೇವಪ್ಪ ಇಬ್ಬರು ಅನುಭವಿ ರಾಜಕಾರಣಿಗಳಾಗಿದ್ದಾರೆ. ಅವರಿಗೆ ಸಮಾಧಾನಪಡಿಸುವಷ್ಟು ನಾನು ದೊಡ್ಡವನಲ್ಲ ಎಂದರು.
ಜಾತಿ ಆಧಾರಿತ ಪ್ರಾತಿನಿಧ್ಯ ನೀಡಿ ಎಂಬ ದಿನೇಶ್ ಗುಂಡೂರಾವ್ ಹೇಳಿಕೆ ಪ್ರತಿಕ್ರಿಯಿಸಿ, ಸಚಿವ ಸಂಪುಟ ವಿಸ್ತರಣೆ ವೇಳೆ ಕೆಲವು ಅಡೆತಡೆ ಆಗುತ್ತವೆ. ಕೇವಲ ಸಚಿವ ಸ್ಥಾನವಲ್ಲ, ಕೆಲವೊಂದು ಬಾರಿ ಕೆಲವು ಜಾತಿಗಳಿಗೆ ಅವಕಾಶ ತಪ್ಪುತ್ತದೆ. ಅದನ್ನು ಬೇರೆ ರೀತಿಯಲ್ಲಿ ಪಕ್ಷ ಸರಿದೂಗಿಸುತ್ತದೆ ಎಂದರು.
ಜಾತಿ ವ್ಯವಸ್ಥೆ ಪುನಃ ಬರಬಾರದು ಎಂಬುದು ನನ್ನ ಆಶಯ. ಶೋಷಣೆ ಆದರೆ ನಾವು ಶೋಷಿತರಾಗಿರುತ್ತೇವೆ. ಅವರೆಲ್ಲರೂ ಶೋಷಣೆ ಮಾಡುವುದನ್ನೇ ಮುಂದುವರಿಸುತ್ತಾರೆ. ಆ ಕಾರಣಕ್ಕೆ ಹಿಂದೂರಾಷ್ಟ್ರಕ್ಕೆ ವಿರೋಧವಿದೆ. ಇಷ್ಟು ವರ್ಷಗಳ ಕಾಲ ದೇಶ ಸೆಕ್ಯುಲರ್ ದೇಶವಾಗಿದೆ. ಈಗಲೂ ಭಾರತ ಧರ್ಮಾಧಾರಿತ ರಾಷ್ಟ್ರ ಆಗಿಲ್ಲ. ಧರ್ಮ ನಿರಪೇಕ್ಷಿತ ರಾಷ್ಟ್ರ ಎಂಬುದು ನಮ್ಮ ಹೇಳಿಕೆ ಎಂದರು.
ಕಂಬಳ ವಿಚಾರವಾಗಿ ಮಾತನಾಡಿದ ಅವರು, ಈವತೆಗೆ ಕಂಬಳ ಆಯೋಜಿಸುವ ಬಗ್ಗೆ ಅಂತಿಮ ತೀರ್ಮಾನ ಆಗಿಲ್ಲ. ಮುಖ್ಯಮಂತ್ರಿಗಳು ನಡೆಯಬೇಕು ಎಂದರೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.
ಸಿಎಂ ಬರ ಅಧ್ಯಯನ ಮಾಡುವಂತೆ ತಿಳಿಸಿದ್ದಾರೆ. ಈ ಹಿನ್ನೆಲೆ ಗುರುವಾರ ಮತ್ತು ಶುಕ್ರವಾರ ಜಿಲ್ಲೆಯ ವಿವಿದೆಢೆ ಭೇಟಿ ನೀಡುವೆ. ಎಲ್ಲೆಲ್ಲಿ ಮಳೆ ಕೊರತೆ ಆಗಿದೆ. ಆಯಾ ತಾಲ್ಲೂಕುಗಳಿಗೆ ನಾನು ಭೇಟಿ ನೀಡುವೆ. ಮೊದಲು ತಾತ್ಕಾಲಿಕವಾಗಿ ಜಿಲ್ಲಾ ಉಸ್ತುವಾರಿ ಮಾಡಿದರು. ಈಗ ಬಹುತೇಕ ನಾನೇ ಎಂದು ಫಿಕ್ಸ್ ಮಾಡಿದ್ದಾರೆ. ಮೊದಲಿಗೆ ಜ್ಞಾನಪ್ರಕಾಶ ಸ್ವಾಮೀಜಿ ಭೇಟಿ ಮಾಡಿದ್ದೇನೆ. ನಂತರ ಸುತ್ತೂರು ಶ್ರೀಗಳನ್ನ ಭೇಟಿ ಮಾಡಿ ಆಶೀರ್ವಾದ ಪಡೆಯುವೆ ಎಂದು ಹೇಳಿದರು.