16ನೇ ಹಣಕಾಸು ಆಯೋಗದ ಸೂತ್ರ; ಕರ್ನಾಟಕ ಗರಿಷ್ಠ ಫಲಾನುಭವಿ
ಸಾಂದರ್ಭಿಕ ಚಿತ್ರ PC: x.com/NDTVProfitIndia
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದಲ್ಲಿರುವ ಕರ್ನಾಟಕ ರಾಜ್ಯ 16ನೇ ಹಣಕಾಸು ಆಯೋಗದ ಸಮತಲ ಹಂಚಿಕೆ ಸೂತ್ರದಲ್ಲಿ ಅತಿದೊಡ್ಡ ಫಲಾನುಭವಿಯಾಗಿ ಹೊರಹೊಮ್ಮಿದೆ. ಆದಾಗ್ಯೂ ಬಿಜೆಪಿ ಆಡಳಿತದ ಮಧ್ಯಪ್ರದೇಶಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಹಣಕಾಸು ಆಯೋಗವು ಸಂವಿಧಾನಾತ್ಮಕ ಸಂಸ್ಥೆಯಾಗಿದ್ದು, ಕೇಂದ್ರ ಸರ್ಕಾರ ಸಂಗ್ರಹಿಸಿದ ಆದಾಯವನ್ನು ಕೇಂದ್ರ ಹಾಗೂ ವಿವಿಧ ರಾಜ್ಯಗಳಿಗೆ ಹಂಚಿಕೆ ಮಾಡುವ ವ್ಯವಸ್ಥೆಯಾಗಿದೆ. ಕೇಂದ್ರ ಸರ್ಕಾರ ಇದರ ಕಾನೂನಾತ್ಮಕ ಬದ್ಧತೆಯನ್ನು ಹೊಂದಿಲ್ಲವಾದರೂ, ಆಯೋಗದ ಸಲಹೆಗಳನ್ನು ಸಾಮಾನ್ಯವಾಗಿ ಜಾರಿ ಮಾಡುತ್ತದೆ.
ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ ನೇತೃತ್ವದ ಆಯೋಗವನ್ನು 2023ರಲ್ಲಿ ರಚಿಸಲಾಗಿತ್ತು. ಅನುದಾನದಲ್ಲಿ ಹೆಚ್ಚಿನ ಪಾಲಿನ ಬೇಡಿಕೆ ಇಟ್ಟ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜತೆ ಚರ್ಚಿಸಿದ ಬಳಿಕ 225ರ ನವೆಂಬರ್ ನಲ್ಲಿ ವರದಿಯನ್ನು ರಾಷ್ಟ್ರಪತಿಗೆ ಸಲ್ಲಿಸಿತ್ತು.
ಹೊಸ ಸೂತ್ರದ ಪ್ರಕಾರ ಕೇಂದ್ರೀಯ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕ 2026-31ರ ಅವಧಿಗೆ ಶೇಕಡ 4.13ರಷ್ಟು ಪಾಲು ಪಡೆಯಲಿದೆ. ಈ ಹಿಂದೆ 15ನೇ ಹಣಕಾಸು ಆಯೋಗದ ಅಡಿಯಲ್ಲಿ ಇದು ಶೇಕಡ 3.65 ಆಗಿತ್ತು. ಅಂದರೆ ಕರ್ನಾಟಕದ ಪಾಲು ಈ ಹಿಂದೆ ಇದ್ದ 55,663 ಕೋಟಿ ರೂಪಾಯಿಯಿಂದ 63,050 ಕೋಟಿ ರೂಪಾಯಿಗಳಿಗೆ ಹೆಚ್ಚಲಿದೆ. ಕರ್ನಾಟಕದ ಪಾಲು 7387 ಕೋಟಿ ಅಧಿಕವಾಗಲಿದೆ.
ಹೊಸ ಸೂತ್ರದಲ್ಲಿ ತೆರಿಗೆ ಹಂಚಿಕೆಯಲ್ಲಿ "ಒಟ್ಟಾರೆ ದೇಶೀಯ ಉತ್ಪನ್ನ (ಜಿಡಿಪಿ)ಗೆ ಕೊಡುಗೆ ವಿಭಾಗಕ್ಕೆ ಶೇಕಡ 10ರಷ್ಟು ಒತ್ತು ನೀಡಿರುವುದರಿಂದ ಕರ್ನಾಟಕದ ಅನುದಾನ ಹೆಚ್ಚಲಿದೆ. ಇದು ರಾಜ್ಯಗಳ ಆರ್ಥಿಕ ಸಾಧನೆಯನ್ನು ಅಳೆದು ಉತ್ತಮ ಸಾಧನೆಗೆ ಬಹಮಾನ ನೀಡುವ ಹೊಸ ಮಾನದಂಡವಾಗಿದೆ.
ಉತ್ಪಾದನೆ, ಸೇವೆ ಹಾಗೂ ತಂತ್ರಜ್ಞಾನ ಕ್ಷೇತ್ರಗಳ ಮೂಲಕ ಭಾರತ ಸರ್ಕಾರಕ್ಕೆ ಕರ್ನಾಟಕ ಅತಿದೊಡ್ಡ ದೇಣಿಗೆಯನ್ನು ತೆರಿಗೆ ರೂಪದಲ್ಲಿ ನೀಡುತ್ತಿದೆ. ಇದರಿಂದಾಗಿ ಇದಕ್ಕೆ ಅರ್ಹ ಪ್ರತಿಫಲವನ್ನು ಪಡೆಯುವುದು ಸಾಧ್ಯವಾಗಲಿದೆ.
2026-31ರ ಅವಧಿಯಲ್ಲಿ ಕೇಂದ್ರ ಸರ್ಕಾರ ತನ್ನ ಒಟ್ಟು ತೆರಿಗೆ ಆದಾಯದಲ್ಲಿ ಶೇಕಡ 41ನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಪ್ರಕಟಿಸಿದ್ದರು.
ಮಧ್ಯಪ್ರದೇಶ ಕನಿಷ್ಠ ಪ್ರತಿಫಲ ಪಡೆಯಲಿದ್ದು, ಈ ಹಿಂದೆ ಪಡೆಯುತ್ತಿದ್ದ 1.12 ಲಕ್ಷ ಕೋಟಿಗೆ ಹೋಲಿಸಿದರೆ ಆ ರಾಜ್ಯದ ಅನುದಾನ 7677 ಕೋಟಿಯಷ್ಟು ಕಡಿಮೆಯಾಗಲಿದೆ. ಅಂದರೆ ಒಟ್ಟು ತೆರಿಗೆ ಆದಾಯ ಹಂಚಿಕೆಯಲ್ಲಿ ರಾಜ್ಯದ ಪಾಲು ಶೇಕಡ 7.85ರಿಂದ 7.35ಕ್ಕೆ ಕುಸಿಯಲಿದೆ. ನೆರೆಯ ರಾಜ್ಯವಾದ ಕೇರಳ ಕೂಡಾ 6975 ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನ ಪಡೆಯಲಿದೆ.