ಸಚಿವರ ವೇತನಗಳು, ಸರಕಾರಿ ಅತಿಥಿಗಳ ಆದರಾತಿಥ್ಯಕ್ಕೆ ಬಜೆಟ್ ನಲ್ಲಿ 1,102 ಕೋಟಿ ರೂ. ಮೀಸಲು
Photo : PTI
ಹೊಸದಿಲ್ಲಿ, ಫೆ. 1: ಕೇಂದ್ರ ಮುಂಗಡಪತ್ರದಲ್ಲಿ ಸಚಿವ ಸಂಪುಟ, ಸಂಪುಟ ಸಚಿವಾಲಯ, ಪ್ರಧಾನಿ ಕಚೇರಿ ವೆಚ್ಚಗಳು ಮತ್ತು ಸರಕಾರಿ ಅತಿಥಿಗಳ ಆದರಾತಿಥ್ಯಕ್ಕಾಗಿ 1,102 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಈ ಮೊತ್ತವು 2025–26ರಲ್ಲಿ ಹಂಚಿಕೆ ಮಾಡಲಾಗಿದ್ದ 978.20 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗಿಂತ ಹೆಚ್ಚಾಗಿದೆ.
ಮುಂಬರುವ ವಿತ್ತವರ್ಷದಲ್ಲಿ ಸಚಿವ ಸಂಪುಟದ ವೆಚ್ಚಗಳಿಗಾಗಿ 620 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ (ಕಳೆದ ವರ್ಷ 483.54 ಕೋಟಿ ರೂ.). ಇದು ಸಂಪುಟ ಸಚಿವರು, ಸಹಾಯಕ ಸಚಿವರು ಮತ್ತು ಮಾಜಿ ಪ್ರಧಾನಿಗಳ ವೇತನಗಳು, ಇತರ ಭತ್ಯೆಗಳು ಹಾಗೂ ಪ್ರಯಾಣ ವೆಚ್ಚಗಳನ್ನು ಒಳಗೊಂಡಿದೆ.
ಇತರ ಹಂಚಿಕೆಗಳು:
• ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯಕ್ಕೆ 256.19 ಕೋಟಿ ರೂ.
• ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಗೆ 65 ಕೋಟಿ ರೂ.ವರೆಗೆ
• ಸಂಪುಟ ಸಚಿವಾಲಯಕ್ಕೆ 80 ಕೋಟಿ ರೂ.
• ಪ್ರಧಾನಿ ಕಚೇರಿಗೆ 73.52 ಕೋಟಿ ರೂ.
• ಆದರಾತಿಥ್ಯ ಮತ್ತು ಮನೋರಂಜನೆ ವೆಚ್ಚಗಳಿಗಾಗಿ 5.76 ಕೋಟಿ ರೂ.