Photo Credit : PTI

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 200 ಅಧಿಕಾರಿಗಳು ವಿರೋಧ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಮಾಹಿತಿಗಳನ್ನು ರವಾನಿಸುತ್ತಿದ್ದಾರೆ. ಈ ಅಧಿಕಾರಿಗಳಲ್ಲಿ ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದಂತಹ ಸಂಸ್ಥೆಗಳು ಹಾಗೂ ಇಲಾಖೆಗಳ ಅಧಿಕಾರಿಗಳು ಸೇರಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಹೊಸದಿಲ್ಲಿಯ ಇಂದಿರಾ ಭವನದಲ್ಲಿರುವ ಕಾಂಗ್ರೆಸ್‌ನ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಈ ಮಾಹಿತಿ ನೀಡಿದರು.

‘‘ಮೋದಿ ಜಿ, ನಿಮ್ಮ ಸರಕಾರದ 200 ಅಧಿಕಾರಿಗಳು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ನಮಗೆ ಮಾಹಿತಿ ರವಾನಿಸುತ್ತಿದ್ದಾರೆ’’ ಎಂದು ರಾಹುಲ್ ಗಾಂಧಿ ನೇರವಾಗಿ ಪ್ರಧಾನಿ ಅವರಿಗೆ ಸಂದೇಶ ನೀಡಿದರು. ಆದರೆ, ರಾಹುಲ್ ಗಾಂಧಿ ಈ ಅಧಿಕಾರಿಗಳ ಗುರುತು ಬಹಿರಂಗಪಡಿಸಿಲ್ಲ ಅಥವಾ ಅವರು ನೀಡುತ್ತಿರುವ ಮಾಹಿತಿಯ ವಿವರ ತಿಳಿಸಿಲ್ಲ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಏಕೀಕೃತ ಚಳವಳಿಯನ್ನಾಗಿ ಬಿಂಬಿಸಲು ಪ್ರಯತ್ನಿಸಿದ ರಾಹುಲ್ ಗಾಂಧಿ, ಯಾವುದೇ ಪ್ರತ್ಯೇಕ ಪ್ರತಿಭಟನೆಗಳು ನಡೆಯುತ್ತಿಲ್ಲ ಎಂದು ಪ್ರತಿಪಾದಿಸಿದರು.

ಅವರು, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ ಯುವಕರ ನೇತೃತ್ವದ ಪ್ರತಿಭಟನೆಗಳು ಮತ್ತು ಮತ ಕಳವು ವಿರುದ್ಧ ‘ಇಂಡಿಯಾ’ ಒಕ್ಕೂಟ ನಡೆಸುತ್ತಿರುವ ಹೋರಾಟ ಎರಡೂ ಒಂದೇ ಬೃಹತ್ ಚಳವಳಿಯ ಭಾಗ ಎಂಬ ಸುಳಿವು ನೀಡಿದರು.

‘‘ಇಲ್ಲಿ ಯಾವುದೇ ಪ್ರತ್ಯೇಕ ಪ್ರತಿಭಟನೆಗಳಿಲ್ಲ. ಜ್ಞಾನೇಶ್ ಕುಮಾರ್, ಅನಂತರ ಪ್ರಧಾನಿ ಹಾಗೂ ಅಮಿತ್ ಶಾ ಅವರನ್ನು ವಜಾಗೊಳಿಸುವ ಉದ್ದೇಶದಿಂದ ಒಂದೇ ಪ್ರತಿಭಟನೆ ನಡೆಯುತ್ತಿದೆ. ನಾವು ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ’’ ಎಂದು ಹೇಳುವ ಮೂಲಕ ಅವರು ವಿರೋಧ ಪಕ್ಷದ ನಿರ್ಧಾರವನ್ನು ಒತ್ತಿ ಹೇಳಿದರು.

ಯುವ ಪ್ರತಿಭಟನಕಾರರಿಗೆ ಬೆಂಬಲದ ಸಂದೇಶ ನೀಡಿದ ರಾಹುಲ್ ಗಾಂಧಿ, ತಮ್ಮ ಬೇಡಿಕೆಗಳು ಈಡೇರುವ ವರೆಗೆ ಚಳವಳಿ ಮುಂದುವರಿಯುತ್ತದೆ ಎಂದರು. ‘‘ಸಂವಿಧಾನವನ್ನು ಎತ್ತಿ ಹಿಡಿಯುವ ವರೆಗೆ, ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ನಿರ್ಗಮಿಸುವ ವರೆಗೆ, ಚುನಾವಣಾ ವ್ಯವಸ್ಥೆ ಸುಧಾರಿಸುವ ವರೆಗೆ ಮತ್ತು ನ್ಯಾಯ ಸಿಗುವ ವರೆಗೆ ದೇಶದ ಯುವಕರು ಪ್ರತಿಭಟನೆ ನಿಲ್ಲಿಸುವುದಿಲ್ಲ’’ ಎಂದರು.

ಈ ಹೋರಾಟವನ್ನು ಸಂವಿಧಾನವನ್ನು ರಕ್ಷಿಸುವ ಮತ್ತು ಚುನಾವಣಾ ವ್ಯವಸ್ಥೆಯನ್ನು ಸುಧಾರಿಸುವ ಹೋರಾಟ ಎಂದು ಕರೆದ ರಾಹುಲ್ ಗಾಂಧಿ, ನ್ಯಾಯ ಸಿಗುವ ವರೆಗೆ ವಿರೋಧ ಪಕ್ಷವಾಗಲಿ ಯುವಕರಾಗಲಿ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor