ಮಣಿಪುರ | ವ್ಯಕ್ತಿಯ ಕತ್ತರಿಸಿದ ತಲೆ ಮರಳಿಸಲು 48 ಗಂಟೆಗಳ ಗಡುವು ನೀಡಿದ ನಾಗಾ ಸಂಘಟನೆ
Photo Credit: PTI
ಇಂಫಾಲ: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಶಸ್ತ್ರ ಸಜ್ಜಿತ ಗುಂಪುಗಳಿಂದ ಹತ್ಯೆಯಾಗಿದ್ದಾರೆ ಎನ್ನಲಾದ ವ್ಯಕ್ತಿಯೊಬ್ಬರ ಕತ್ತರಿಸಿದ ತಲೆಯನ್ನು ಮರಳಿಸಲು ನಾಗಾ ನಾಗರಿಕ ಸಮಾಜ ಸಂಘಟನೆಯೊಂದು 48 ಗಂಟೆಗಳ ಗಡುವ ನೀಡಿದೆ.
ಕಾಂಗ್‌ಪೋಕ್ಪಿ ಜಿಲ್ಲೆಯ ಮಕುಯಿ ಅಶಾಂಗ್ ಗ್ರಾಮದ ಮೇಲೆ ನಡೆದ ಶಂಕಿತ ಬಂಡುಕೋರರ ದಾಳಿಯಲ್ಲಿ ಹತ್ಯೆಯಾದ 52 ವರ್ಷದ ಅಜಿನ್‌ಬೌ ಆರ್. ಮುಂಡವನ್ನು ಮರಣೋತ್ತರ ಪರೀಕ್ಷೆಗಾಗಿ ಶನಿವಾರ ರಾತ್ರಿ ಇಂಫಾಲದ ಜವಾಹರ್‌ಲಾಲ್ ನೆಹರೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ತರಲಾಗಿದೆ.
ಶಸ್ತ್ರಸಜ್ಜಿತ ಉಗ್ರರ ನಡುವೆ ಅಜಿನ್‌ಬೌ ಅವರ ಕತ್ತರಿಸಿದ ತಲೆ ಇರುವ ವೀಡಿಯೊ ಶನಿವಾರ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು.
ರವಿವಾರ ಹೇಳಿಕೆ ನೀಡಿದ ‘ಜಾಯಿಂಟ್ ಟ್ರೈಬ್ಸ್ ಕೌನ್ಸಿಲ್ ಮಣಿಪುರ’ (ಜೆಟಿಸಿಎಂ), ‘‘ಅಜಿನ್‌ಬೌ ಆರ್, ಅವರ ತಲೆ ಇನ್ನೂ ಪತ್ತೆಯಾಗಿಲ್ಲ. ಗೌರವಯುತ ದಫನಕ್ಕಾಗಿ ಅವರ ತಲೆಯನ್ನು ಕುಟುಂಬದ ಸದಸ್ಯರಿಗೆ ಮರಳಿಸುವ ವರೆಗೆ ಮರಣೋತ್ತರ ಪರೀಕ್ಷೆ ನಡೆಸಲು ಬಿಡುವುದಿಲ್ಲ. ಉಗ್ರರು ಅವರ ತಲೆಯನ್ನು ಟ್ರೋಪಿಯಂತೆ ಪರಿಗಣಿಸುತ್ತಿರುವಾಗ, ರಾಜ್ಯ ಸರಕಾರದ ವ್ಯವಸ್ಥೆಯು ಅವರ ದೇಹದ ಅವಶೇಷಗಳನ್ನು ಇನ್ನಷ್ಟು ವಿರೂಪಗೊಳಿಸಲು ನಾವು ಅನುಮತಿಸುವುದಿಲ್ಲ’’ ಎಂದು ಅದು ತಿಳಿಸಿದೆ.
ಹಿಂಸಾಚಾರ ಮರುಕಳಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳೇ ನೇರ ಹೊಣೆ ಎಂದು ಆರೋಪಿಸಿದ ಜಾಯಿಂಟ್ ಟ್ರೈಬ್ಸ್ ಕೌನ್ಸಿಲ್ ಮಣಿಪುರ’, ‘‘ಈ ಹೇಯ ಕೃತ್ಯ ಮಾನವ ಕುಲಕ್ಕೆ ಎಸಗಿದ ಅವಮಾನ’’ ಎಂದು ಹೇಳಿದೆ. ಕತ್ತರಿಸಿದ ತಲೆಯನ್ನು ಪತ್ತೆ ಹಚ್ಚಿ ಮರಳಿಸಲು ಅದು 48 ಗಂಟೆಗಳ ಗಡುವು ನೀಡಿದೆ. ವಿಫಲವಾದರೆ ನ್ಯಾಯಕ್ಕಾಗಿ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಸಿದೆ.