490 ಪೊಲೀಸ್ ಸಿಬ್ಬಂದಿಗೆ ಕೇಂದ್ರ ಗೃಹಮಂತ್ರಿ ದಕ್ಷತಾ ಪದಕ ಪ್ರಕಟ
Photo Credit : ANI
ಹೊಸದಿಲ್ಲಿ, ಅ. 31: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯಾದ ಶನಿವಾರ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CISF) ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ (ಸಿಪಿಒ) ಒಟ್ಟು 490 ಸಿಬ್ಬಂದಿಗೆ ಪ್ರತಿಷ್ಠಿತ ‘ಕೇಂದ್ರ ಗೃಹಮಂತ್ರಿ ದಕ್ಷತಾ ಪದಕ’ ಘೋಷಿಸಲಾಗಿದೆ. ಈ ಪಟ್ಟಿಯಲ್ಲಿ ಸಿಬಿಐನ 14 ಅಧಿಕಾರಿಗಳೂ ಸೇರಿದ್ದಾರೆ.
ಫೆಬ್ರವರಿ 1, 2024ರಂದು ಗೃಹ ಸಚಿವಾಲಯದ ಅಧಿಸೂಚನೆಯ ಮೂಲಕ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿತ್ತು.
ಪೊಲೀಸ್ ಪಡೆಗಳು, ಭದ್ರತಾ ಸಂಸ್ಥೆಗಳು, ಗುಪ್ತಚರ ವಿಭಾಗಗಳು, NSG ಮತ್ತು ಅಸ್ಸಾಂ ರೈಫಲ್ಸ್ನ ಸಿಬ್ಬಂದಿಯ ಅತ್ಯುತ್ತಮ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗುತ್ತದೆ.
ಉತ್ತಮ ವೃತ್ತಿಪರ ಮಾನದಂಡಗಳನ್ನು ಉತ್ತೇಜಿಸಲು ಹಾಗೂ ಅಧಿಕಾರಿಗಳ ಮನೋಬಲ ಹೆಚ್ಚಿಸಲು ಈ ಪದಕವನ್ನು ನೀಡಲಾಗುತ್ತದೆ ಎಂದು ಸರಕಾರಿ ಪ್ರಕಟಣೆ ತಿಳಿಸಿದೆ.
ಪ್ರಶಸ್ತಿಯನ್ನು ಕಾರ್ಯಾಚರಣೆಗಳಲ್ಲಿ ಶ್ರೇಷ್ಠತೆ, ತನಿಖೆಯಲ್ಲಿ ಅತ್ಯುತ್ತಮ ಸೇವೆ, ಅಸಾಧಾರಣ ಸಾಧನೆ, ಸಾಹಸಮಯ ಗುಪ್ತಚರ ಸೇವೆ, ವಿಧಿವಿಜ್ಞಾನದಲ್ಲಿ ಶ್ಲಾಘನೀಯ ಕಾರ್ಯ ಹೀಗೆ ಐದು ಪ್ರಮುಖ ವಿಭಾಗಗಳಲ್ಲಿ ವಿತರಿಸಲಾಗುತ್ತದೆ.
ಪ್ರತಿ ವರ್ಷ ಅಕ್ಟೋಬರ್ 31ರಂದು ಪಟೇಲರ ಜನ್ಮದಿನದಂದು ಈ ಪ್ರಶಸ್ತಿಯನ್ನು ಪ್ರಕಟಿಸಲಾಗುತ್ತದೆ.