Pune | ಹೆತ್ತವರಿಗೂ ತಿಳಿಸದೆ ಲಂಡನ್ ನಿಂದ ಮರಳಿದ್ದ ಯುವತಿ ಫ್ಲ್ಯಾಟ್ ನಲ್ಲಿ ಶವವಾಗಿ ಪತ್ತೆ
Photo Credit : NDTV
ಪುಣೆ, ಅ. 31: ಕೆಲವು ತಿಂಗಳುಗಳ ಹಿಂದೆಯೇ ತನ್ನ ಕುಟುಂಬಕ್ಕೂ ಮಾಹಿತಿ ನೀಡದೆ ಲಂಡನ್ನಿಂದ ಭಾರತಕ್ಕೆ ಮರಳಿದ್ದ 34ರ ಹರೆಯದ ಮಹಿಳೆ ಮುಗ್ಧಾ ದೇಶಮುಖ್ ಪುಣೆಯ ಗಹುಂಜೆಯಲ್ಲಿರುವ ‘ಲೋಧಾ ಬೆಲ್ಮೊಂಡೋ’ ವಸತಿ ಸಂಕೀರ್ಣದ ಬಾಡಿಗೆ ಫ್ಲ್ಯಾಟ್ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಹಾರ ಡೆಲಿವರಿ ವಹಿವಾಟುಗಳ ಆಧಾರದ ಮೇಲೆ ಆಕೆ ಭಾರತದಲ್ಲಿರುವುದು ಕುಟುಂಬಸ್ಥರಿಗೆ ತಿಳಿದುಬಂದ ಕೆಲವೇ ದಿನಗಳಲ್ಲಿ ಈ ದುರಂತ ಸಂಭವಿಸಿದೆ.
ಛತ್ರಪತಿ ಸಂಭಾಜಿನಗರ ಮೂಲದ ಮುಗ್ಧಾ MBA ವ್ಯಾಸಂಗಕ್ಕಾಗಿ ಕಳೆದ ವರ್ಷ ಜುಲೈನಲ್ಲಿ ಬ್ರಿಟನ್ಗೆ ತೆರಳಿದ್ದರು. ಅಲ್ಲಿ ಒಂಟಿಯಾಗಿ ವಾಸವಾಗಿದ್ದ ಆಕೆ ಅರೆಕಾಲಿಕ ಕೆಲಸಗಳನ್ನು ಮಾಡುತ್ತಿದ್ದರು.
ಮುಗ್ಧಾರ ಕುಟುಂಬ ಫೋನ್ ಕರೆಗಳು ಮತ್ತು ಸಂದೇಶಗಳ ಮೂಲಕ ಆಕೆಯೊಂದಿಗೆ ಸಂಪರ್ಕದಲ್ಲಿತ್ತು. ಆದರೆ, ಅಕ್ಟೋಬರ್ 24ರಂದು ಆಕೆ ಕುಟುಂಬದವರ ಕರೆಗಳಿಗೆ ಸ್ಪಂದಿಸಿರಲಿಲ್ಲ ಮತ್ತು ನಂತರ ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಆತಂಕಗೊಂಡ ಹೆತ್ತವರು ಲಂಡನ್ನಲ್ಲಿದ್ದ ಆಕೆಯ ಸ್ನೇಹಿತೆಯನ್ನು ಸಂಪರ್ಕಿಸಿದ್ದರು. ಆ ಸ್ನೇಹಿತೆ ಲಂಡನ್ ಪೊಲೀಸರಿಗೆ ನಾಪತ್ತೆ ದೂರು ನೀಡಿದಾಗ, ಮುಗ್ಧಾ ಆಗಸ್ಟ್ ಅಂತ್ಯದಲ್ಲೇ ಬ್ರಿಟನ್ ತೊರೆದು ಭಾರತಕ್ಕೆ ಮರಳಿದ್ದಾರೆ ಎನ್ನುವುದು ತಿಳಿದುಬಂದಿತ್ತು.
ಪುತ್ರಿಯನ್ನು ಪತ್ತೆ ಹಚ್ಚಲು ಹೆತ್ತವರು ಭಾರತೀಯ ಅಧಿಕಾರಿಗಳ ನೆರವು ಕೋರಿದ್ದರು. ಮುಗ್ಧಾರ ತಂದೆ ಆಕೆಯ ಬ್ಯಾಂಕ್ ಸ್ಟೇಟ್ ಮೆಂಟ್ ಪರಿಶೀಲಿಸಿದಾಗ, ಅಕ್ಟೋಬರ್ 8ರಿಂದ 25ರ ನಡುವೆ ಛತ್ರಪತಿ ಸಂಭಾಜಿನಗರದ ಉಸ್ಮಾನ್ ಪುರ ಸೇರಿದಂತೆ ಹಲವೆಡೆ ಹಲವಾರು ಫುಡ್ ಡೆಲಿವರಿ ವಹಿವಾಟುಗಳು ನಡೆದಿರುವುದು ಕಂಡುಬಂದಿತ್ತು. ಇದರಿಂದ ಆಕೆ ಭಾರತದಲ್ಲೇ ಇರುವುದು ಖಚಿತವಾಗಿತ್ತು.
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಮುಗ್ಧಾ ಅವರ ಮೊಬೈಲ್ ಲೊಕೇಶನ್ ಪುಣೆಯ ಫ್ಲ್ಯಾಟ್ನಲ್ಲಿರುವುದನ್ನು ಪತ್ತೆ ಹಚ್ಚಿದ್ದರು. ಪೊಲೀಸರು ಕೀಮೇಕರ್ ನೆರವಿನಿಂದ ಬಾಗಿಲು ತೆರೆದು ಪರಿಶೀಲಿಸಿದಾಗ ಮುಗ್ಧಾ ಮೃತಪಟ್ಟಿರುವುದು ಕಂಡುಬಂದಿದೆ. ಆಕೆಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿರಲಿಲ್ಲ. ಮುಗ್ಧಾ ಎಪ್ರಿಲ್ ನಲ್ಲಿ ಈ ಫ್ಲ್ಯಾಟ್ ಅನ್ನು ಬಾಡಿಗೆಗೆ ಪಡೆದುಕೊಂಡಿದ್ದು, ಆಗಸ್ಟ್ ನಿಂದ ಅಲ್ಲಿ ವಾಸವಾಗಿದ್ದರು. ಪ್ರಸ್ತುತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.