Photo | PTI

ಹೊಸದಿಲ್ಲಿ: 'ಕಾಕ್ರೋಚ್ ಜನತಾ ಪಾರ್ಟಿ' (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಶನಿವಾರ ದಿಲ್ಲಿಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದರು. ತಮ್ಮ ಸಂಘಟನೆಯ ಯುವಜನ ನೇತೃತ್ವದ ಪ್ರತಿಭಟನೆಗಳಿಗೆ ಬೆಂಬಲ ನೀಡಿದ್ದಕ್ಕಾಗಿ ಮಮತಾ ಅವರಿಗೆ ಕೃತಜ್ಞತೆ ಸಲ್ಲಿಸಿದ ದೀಪ್ಕೆ, ಮತ ಕಳ್ಳತನದ ಆರೋಪದ ವಿರುದ್ಧ 'ಇಂಡಿಯಾ' ಒಕ್ಕೂಟ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಆದರೆ, ರವಿವಾರ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ವಿರೋಧ ಪಕ್ಷಗಳು ನಡೆಸಲಿರುವ ರ್ಯಾ ಲಿಯಲ್ಲಿ ತಮ್ಮ ಸಂಘಟನೆ ಭಾಗವಹಿಸುವುದಿಲ್ಲ. CJPಯ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಿರ್ಧರಿಸಿರುವುದಾಗಿ ಅವರು ಸ್ಪಷ್ಟಪಡಿಸಿದರು.

ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂತರ್ ಮಂತರ್ನಲ್ಲಿ ತಮ್ಮ ಸಂಘಟನೆ ನಡೆಸಿದ್ದ ಮೊದಲ ಪ್ರತಿಭಟನೆಗೆ ಮಮತಾ ಬ್ಯಾನರ್ಜಿ ಬೆಂಬಲ ನೀಡಿದ್ದರು. ಅಲ್ಲದೆ, ಸಂಘಟನೆಯ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ದಿಲ್ಲಿ ಪೊಲೀಸರು ಬಂಧಿಸಿದ ಸಂದರ್ಭದಲ್ಲಿಯೂ ಬೆಂಬಲವಾಗಿ ನಿಂತಿದ್ದರು. ಈ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಲು ಮಮತಾ ಅವರನ್ನು ಭೇಟಿಯಾಗಿದ್ದಾಗಿ ದೀಪ್ಕೆ ತಿಳಿಸಿದರು.

"ದೀದಿ (ಮಮತಾ ಬ್ಯಾನರ್ಜಿ) ಅವರಿಗೆ ಧನ್ಯವಾದ ಹೇಳಲು ಬಂದಿದ್ದೆ. ಜಂತರ್ ಮಂತರ್ನಲ್ಲಿ ನಾವು ನಡೆಸಿದ ಮೊದಲ ಪ್ರತಿಭಟನೆಗೆ ಅವರು ಬೆಂಬಲ ನೀಡಿದ್ದರು. ಯುವಜನರ ಚಳವಳಿಯ ಪರವಾಗಿ ಅವರು ದೃಢವಾಗಿ ನಿಂತ ರೀತಿ ಶ್ಲಾಘನೀಯ. ಸೌರವ್ ಮತ್ತು ಅಶುತೋಷ್ ಅವರನ್ನು ದಿಲ್ಲಿ ಪೊಲೀಸರು ಬಂಧಿಸಿದಾಗಲೂ ದೀದಿ ನಮ್ಮ ಬೆಂಬಲಕ್ಕೆ ನಿಂತಿದ್ದರು" ಎಂದು ಹೇಳಿದರು.

ರವಿವಾರ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ 'ಇಂಡಿಯಾ' ಒಕ್ಕೂಟದ ರ್ಯಾ ಲಿಯಲ್ಲಿ CJP ಭಾಗವಹಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ದೀಪ್ಕೆ, ಪ್ರತಿಭಟನೆಗೆ ಬೆಂಬಲ ನೀಡುವುದಾಗಿ, ಆದರೆ ಸಂಘಟನೆಯು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

"ನಾಳೆಯ ಪ್ರತಿಭಟನೆಗೆ ನಾವು ಬೆಂಬಲ ನೀಡುತ್ತೇವೆ. ನಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ. ಆದರೆ, 'ಕಾಕ್ರೋಚ್ ಜನತಾ ಪಾರ್ಟಿ' ಸ್ವತಂತ್ರ ಸಂಘಟನೆ. ಇದೊಂದು ತಟಸ್ಥ ವೇದಿಕೆ. ಅದರ ಸ್ವತಂತ್ರ ಅಸ್ತಿತ್ವವನ್ನು ಹಾಗೆಯೇ ಉಳಿಸಿಕೊಳ್ಳಲು ನಾವು ಬಯಸುತ್ತೇವೆ" ಎಂದರು.

ಮತ ಕಳ್ಳತನದ ಆರೋಪದ ವಿರುದ್ಧದ ಹೋರಾಟ ಯಾವುದೇ ಒಂದು ಸಂಘಟನೆಗೆ ಸೀಮಿತವಾಗಿಲ್ಲ ಎಂದು ಹೇಳಿದ ಅವರು, ಈ ಆರೋಪದ ವಿರುದ್ಧ ಹೋರಾಡುವ ಎಲ್ಲ ಸಂಘಟನೆಗಳಿಗೂ CJP ಬೆಂಬಲ ನೀಡಲಿದೆ ಎಂದು ತಿಳಿಸಿದರು.

"ಮತ ಕಳ್ಳತನದ ವಿರುದ್ಧ ಹೋರಾಡುವ ಯಾವುದೇ ಸಂಘಟನೆಗೆ ನಾವು ಬೆಂಬಲ ನೀಡುತ್ತೇವೆ" ಎಂದು ಹೇಳಿದರು.

ದಿಲ್ಲಿಯಲ್ಲಿರುವ ಮಮತಾ ಬ್ಯಾನರ್ಜಿ ಅವರು ರವಿವಾರದ ರ್ಯಾ ಲಿಯಲ್ಲಿ ಭಾಗವಹಿಸಲಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಚುನಾವಣಾ ಆಯೋಗದ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ದೀಪ್ಕೆ ಹಾಗೂ ಯುವ ಕಾರ್ಯಕರ್ತರು ವಹಿಸಿದ ಪಾತ್ರವನ್ನು ಅವರು ಶ್ಲಾಘಿಸಿದರು.

"ಅವರು ನಾಳೆಯ ರ್ಯಾ ಲಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ನಾವು ಕೂಡ ಅವರಿಗೆ ಎಲ್ಲ ರೀತಿಯ ಬೆಂಬಲ ನೀಡಿದ್ದೇವೆ. ಈ ಚಳವಳಿಯ ಪ್ರವರ್ತಕರು ಮತ್ತು ಸ್ಥಾಪಕರು ಅವರೇ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು" ಎಂದು ಮಮತಾ ಸುದ್ದಿಗಾರರಿಗೆ ತಿಳಿಸಿದರು.

ಕಾರ್ಯಕರ್ತರನ್ನು ಭೇಟಿಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಮಮತಾ, ಹಲವು ಕಷ್ಟಗಳ ನಡುವೆಯೂ ಪ್ರತಿಭಟನೆಯನ್ನು ಮುಂದುವರಿಸಲು ಅವರು ನಡೆಸಿದ ಪ್ರಯತ್ನಗಳನ್ನು ಶ್ಲಾಘಿಸಿದರು. ಅಲ್ಲದೆ, ದೀಪ್ಕೆ ಮತ್ತು ಇತರ ಕಾರ್ಯಕರ್ತರನ್ನು ಪಶ್ಚಿಮ ಬಂಗಾಳಕ್ಕೆ ಆಹ್ವಾನಿಸಿ, ಅಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮನವಿ ಮಾಡಿದರು.

ಕೋಲ್ಕತ್ತಾದಲ್ಲಿ ಕಾರ್ಯಕ್ರಮ ಆಯೋಜಿಸುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಮತಾ, ಅದರ ನಿರ್ಧಾರವನ್ನು ದೀಪ್ಕೆ ಅವರೇ ತೆಗೆದುಕೊಳ್ಳಬೇಕು ಎಂದರು. "ಅದನ್ನು ಅವರೇ ನಿರ್ಧರಿಸುತ್ತಾರೆ. ಅದು ಅವರ ಆಯ್ಕೆ" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor