Photo Credit : ndtv

ಹಾಲಿಯಾಪು: ಯೋಧರೊಬ್ಬರ ಮೃತದೇಹವನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ , ನಿಂತಿದ್ದ ಟ್ರಕ್‌ಗೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅವಘಡದಲ್ಲಿ ಕುಟುಂಬದ ಮೂವರು ಸದಸ್ಯರು ಹಾಗೂ ಓರ್ವ ಚಾಲಕ ದಾರುಣವಾಗಿ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಪೂರ್ವಾಂಚಲ ಎಕ್ಸ್ಪ್ರೆಸ್ವೇನಲ್ಲಿ ರವಿವಾರ ಸಂಭವಿಸಿದೆ.

ಸುಬೇದಾರ್ ಮೇಜರ್ ಸತ್ಯವಾನ್ ಅವರ ಪಾರ್ಥಿವ ಶರೀರವನ್ನು ಚಂಡೀಗಢದಿಂದ ಉತ್ತರಪ್ರದೇಶದ ದಿಯೋರಿಯಾ ಜಿಲ್ಲೆಯಲ್ಲಿರುವ ಅವರ ಹುಟ್ಟೂರಿಗೆ ಆ್ಯಂಬುಲೆನ್ಸ್‌ನಲ್ಲಿ ತರುತ್ತಿದ್ದಾಗ ಬೆಳಗ್ಗೆ 8 ಗಂಟೆ ವೇಳೆಗೆ ಹಲಿಯಾಪುರ ಪ್ರದೇಶದ ಎಕ್ಸ್ಪ್ರೆಸ್ವೇನಲ್ಲಿ ಅವಘಡ ಸಂಭವಿಸಿದೆ.

ಅಪಘಾತದಲ್ಲಿ ಸತ್ಯವಾನ್ ಅವರ ಪುತ್ರ ಗೌರವ್ ಸಿಂಗ್ (28), ಆ್ಯಂಬುಲೆನ್ಸ್ ಚಾಲಕ ಜಸ್ಪಾಲ್ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸೋದರ ರಂಜನ್ ಚೌಧರಿ (35), ಸೋದರಳಿಯ ರಾಮ ಸಮುಜ್ ಸಿಂಗ್ (45) ಜಿಲ್ಲೆಯ ಪಿತ್ಲಾ-ಕುಮಾರಗಂಜ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ನಾಲ್ವರು ಸತ್ಯವಾನ್ರ ಮೃತದೇಹದೊಂದಿಗೆ ದಿಯೋರಿಯಾ ಜಿಲ್ಲೆಯ ರುದ್ರಪುರ ಪ್ರದೇಶದಲ್ಲಿರುವ ಗಲಿಯಾ ದುಧಲಿಯಾ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು.

ವೇಗವಾಗಿ ಧಾವಿಸುತ್ತಿದ್ದ ಆ್ಯಂಬುಲೆನ್ಸ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್‌ನ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಆ್ಯಂಬುಲೆನ್ಸ್ ಸಂಪೂರ್ಣ ನಜ್ಜುಗುಜ್ಜಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor