ಸಾಂದರ್ಭಿಕ ಚಿತ್ರ

ಲಕ್ನೊ: ಕೇವಲ 2,250 ರೂ. ಹಣಕ್ಕಾಗಿ ಸ್ನೇಹಿತನನ್ನೇ ವಿದ್ಯುದಾಘಾತ ನೀಡಿ ಹತ್ಯೆ ಮಾಡಿ, ಮೃತದೇಹವನ್ನು ಮತ್ತೊಬ್ಬರ ಮನೆಯ ಮುಂದೆ ಎಸೆದು ಪರಾರಿಯಾಗಿದ್ದ ವ್ಯಕ್ತಿಯನ್ನು ಲಕ್ನೊ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಬಿರ್ಜು ಎಂದು ಗುರುತಿಸಲಾಗಿದೆ. ಬಿರ್ಜು ಹಾಗೂ ಸಚಿನ್ ಸ್ನೇಹಿತರಾಗಿದ್ದು, ಇಬ್ಬರೂ ಆಗಾಗ್ಗೆ ಒಟ್ಟಿಗೆ ಮದ್ಯಪಾನ ಮಾಡುತ್ತಿದ್ದರು. ಸೆಪ್ಟೆಂಬರ್ 28ರಂದು ಸಚಿನ್ ಗೆ ಹಣದ ಅಗತ್ಯವಿದ್ದಾಗ ಬಿರ್ಜು ಬಳಿ ಕೇಳಿದ್ದ. ಆದರೆ, ತನ್ನ ಬಳಿ ಹಣವಿಲ್ಲ ಎಂದು ಬಿರ್ಜು ಹೇಳಿದ್ದ. ಬಳಿಕ ಸಚಿನ್ ತನ್ನ ದ್ವಿಚಕ್ರ ವಾಹನವನ್ನು ಗಿರವಿ ಇಟ್ಟು ಹಣ ಪಡೆದಿದ್ದ ಎಂದು ತಿಳಿದು ಬಂದಿದೆ.

ಆ ಹಣದಲ್ಲಿ ಮದ್ಯ ಖರೀದಿಸಿದ ಇಬ್ಬರೂ ಬಿರ್ಜು ಮನೆಯಲ್ಲಿ ಕುಳಿತು ಮದ್ಯಪಾನ ಮಾಡಿದ್ದರು. ಅತಿಯಾದ ಮದ್ಯಪಾನದಿಂದ ಸಚಿನ್ ಪ್ರಜ್ಞಾಹೀನನಾಗಿದ್ದ. ಇದೇ ಅವಕಾಶವನ್ನು ಬಳಸಿಕೊಂಡ ಬಿರ್ಜು, ಸಚಿನ್ ಬಳಿ ಇನ್ನಷ್ಟು ಹಣ ಇರುವುದನ್ನು ಗಮನಿಸಿದ್ದ. ಆ ಹಣವನ್ನು ಪಡೆಯಲು ಸ್ನೇಹಿತನನ್ನೇ ಹತ್ಯೆ ಮಾಡುವ ಯೋಜನೆ ರೂಪಿಸಿದ್ದಾಗಿ ಆತ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾನೆ.

ಯೋಜನೆಯಂತೆ ಸಚಿನ್ ಗೆ ವಿದ್ಯುದಾಘಾತ ನೀಡಲಾಗಿದೆ. ಆತ ಮೃತಪಟ್ಟ ಬಳಿಕ ಆತನ ಜೇಬಿನಿಂದ 2,250 ರೂ. ಹಣವನ್ನು ಬಿರ್ಜು ಕದ್ದಿದ್ದಾನೆ. ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಚಿನ್ ನ ಮೃತದೇಹವನ್ನು ಮತ್ತೊಬ್ಬರ ಮನೆಯ ಮುಂದೆ ಎಸೆದು ಪರಾರಿಯಾಗಿದ್ದಾನೆ.

ಘಟನೆಯು ಅಪಘಾತದಂತೆ ಕಾಣುವಂತೆ ಮಾಡಲು ಬಿರ್ಜು ಪ್ರಯತ್ನಿಸಿದ್ದ. ಆದರೆ, ಪೊಲೀಸರು ಹಲವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪ್ರಕರಣದ ಸುಳಿವು ಸಿಕ್ಕಿದೆ. ತನಿಖೆ ಮುಂದುವರಿಸಿದ ಪೊಲೀಸರು ಅಕ್ಟೋಬರ್ 2ರಂದು ಬಿರ್ಜುವನ್ನು ಬಂಧಿಸಿದ್ದಾರೆ.

ಆತನಿಂದ ಒಂದು ವಿದ್ಯುತ್ ತಂತಿ, ಒಂದು ಕೂಲರ್ ಹಾಗೂ ಕದ್ದಿದ್ದ 2,250 ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor