Photo Credit : livelaw

ಹೈದರಾಬಾದ್, ಅ.4: ‘NALSAR ವಿದ್ಯಾರ್ಥಿಗಳು ಪ್ರತಿಭಾವಂತರು, ಧೈರ್ಯಶಾಲಿಗಳು ಮತ್ತು ಸಾಹಸಿಗಳು. ಕಾನೂನು ವಿದ್ಯಾರ್ಥಿ ಹೇಗಿರಬೇಕು ಎಂಬುದನ್ನು ನೀವು ದೇಶಕ್ಕೆ ಮತ್ತು ಜಗತ್ತಿಗೆ ತೋರಿಸಿಕೊಟ್ಟಿದ್ದೀರಿ’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮೆಚ್ಚುಗೆ ಸೂಚಿಸಿದರು.

ಹೈದರಾಬಾದ್ ನ NALSAR ಕಾನೂನು ವಿಶ್ವವಿದ್ಯಾಲಯದಲ್ಲಿ ರವಿವಾರ ನಡೆದ 19ನೇ NALSAR ನ್ಯಾಯಮೂರ್ತಿ ಬಿ.ಆರ್. ಸಾಹ್ನಿ ಸ್ಮಾರಕ ಅಣಕ ನ್ಯಾಯಾಲಯ ಸ್ಪರ್ಧೆ–2026ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನನ್ನ ಮಾತುಗಳನ್ನು ಮುಕ್ತಾಯಗೊಳಿಸುವ ಮೊದಲು NALSARನ ಪ್ರತಿಭಾವಂತ ವಿದ್ಯಾರ್ಥಿಗಳ ಬಗ್ಗೆ ಒಂದು ಕೊನೆಯ ಮಾತು. ವಿಶ್ವವಿದ್ಯಾಲಯದ ವಿದ್ಯಾರ್ಥಿ, ಅದರಲ್ಲೂ ಕಾನೂನು ವಿದ್ಯಾರ್ಥಿ ಹೇಗಿರಬೇಕು ಎಂಬುದನ್ನು ನೀವು ದೇಶಕ್ಕೆ ಮತ್ತು ಜಗತ್ತಿಗೆ ತೋರಿಸಿಕೊಟ್ಟಿದ್ದೀರಿ. ನೀವು ಪ್ರತಿಭಾವಂತರು; ನೀವು ಧೈರ್ಯಶಾಲಿಗಳು; ನೀವು ಸಾಹಸಿಗಳು’ ಎಂದು ಭುಯಾನ್ ಮೆಚ್ಚುಗೆ ಸೂಚಿಸಿದರು.

ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸುವುದನ್ನು ವಿರೋಧಿಸಿ NALSAR ವಿದ್ಯಾರ್ಥಿಗಳು ನಡೆಸಿದ್ದ ಅಭಿಯಾನದ ಹಿನ್ನೆಲೆಯಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಆ ಬ್ಯಾಚ್ ನ ವಿದ್ಯಾರ್ಥಿಗಳ ನೋಂದಣಿಗೆ ಸಂಪೂರ್ಣ ನಿರ್ಬಂಧ ವಿಧಿಸಿ, ಬಳಿಕ ಅದನ್ನು ಹಿಂಪಡೆದ ಕೆಲವೇ ವಾರಗಳ ನಂತರ ಭುಯಾನ್ ಅವರು ಈ ಹೇಳಿಕೆ ನೀಡಿದ್ದಾರೆ.

ಆಗಸ್ಟ್ ನಲ್ಲಿ NALSARನ ಪದವಿ ಪಡೆಯುತ್ತಿದ್ದ ವಿದ್ಯಾರ್ಥಿಗಳ ಒಂದು ಗುಂಪು, ಘಟಿಕೋತ್ಸವಕ್ಕೆ CJI ಸೂರ್ಯಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಪ್ರಸ್ತಾವನೆಯನ್ನು ವಿರೋಧಿಸಿತ್ತು. ದಿಲ್ಲಿಯಲ್ಲಿ ಪ್ರತಿಭಟನಾಕಾರರ ವಿರುದ್ಧ ನಡೆದ ಪೊಲೀಸ್ ದೌರ್ಜನ್ಯದ ಆರೋಪಗಳಿಗೆ ಸಂಬಂಧಿಸಿದ ನ್ಯಾಯಾಲಯದ ವಿಚಾರಣೆ ವೇಳೆ CJI ನೀಡಿದ್ದ ಹೇಳಿಕೆಗಳೇ ಈ ವಿರೋಧಕ್ಕೆ ಕಾರಣವೆಂದು ವರದಿಯಾಗಿತ್ತು.

ವಿದ್ಯಾರ್ಥಿಗಳ ಅಭಿಯಾನದ ಹಿನ್ನೆಲೆಯಲ್ಲಿ, NALSARನ 2026ರ ಬ್ಯಾಚ್ ನ ಯಾವುದೇ ಪದವೀಧರರನ್ನು ಮುಂದಿನ ಆದೇಶದವರೆಗೆ ನೋಂದಾಯಿಸದಂತೆ ರಾಜ್ಯ ಬಾರ್ ಕೌನ್ಸಿಲ್ಗಳಿಗೆ ಸೂಚಿಸುವಂತೆ BCI ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ಆಗಸ್ಟ್ 13ರಂದು ನಿರ್ದೇಶನ ನೀಡಿದ್ದರು.

ಅಲ್ಲದೆ, CJI ಅವರ ಭಾಗವಹಿಸುವಿಕೆಯನ್ನು ವಿರೋಧಿಸಿ ಅಭಿಯಾನ ಸಂಘಟಿಸುವಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ, ಸಂಶೋಧನಾ ವಿದ್ವಾಂಸರು, ಹಳೆಯ ವಿದ್ಯಾರ್ಥಿಗಳು ಮತ್ತು ಇತರರನ್ನು ಗುರುತಿಸಿ ವರದಿ ಸಲ್ಲಿಸುವಂತೆ NALSAR ಉಪಕುಲಪತಿ ಪ್ರೊಫೆಸರ್ ಶ್ರೀಕೃಷ್ಣ ದೇವ್ ರಾವ್ ಅವರಿಗೆ ಸೂಚಿಸಿದ್ದರು.

BCI ಅಧ್ಯಕ್ಷರು ವಿದ್ಯಾರ್ಥಿಗಳ ನಡವಳಿಕೆಯನ್ನು ಪ್ರಶ್ನಿಸಿದ್ದರು. ಬೋಧಕ ಸಿಬ್ಬಂದಿ ವಿದ್ಯಾರ್ಥಿಗಳನ್ನು ದಾರಿತಪ್ಪಿಸುತ್ತಿದ್ದಾರೆ ಎಂದೂ ಆರೋಪಿಸಿದ್ದರು.

ಆದರೆ BCI ಸೂಚಿಸಿದಂತೆ ವಿಶ್ವವಿದ್ಯಾಲಯವು ತಕ್ಷಣವೇ ವಿಚಾರಣೆ ಆರಂಭಿಸಿರಲಿಲ್ಲ. BCI ನಿರ್ದೇಶನಗಳ ಕಾನೂನುಬದ್ಧತೆಯನ್ನು ಪರಿಶೀಲಿಸುವುದಾಗಿ ಹಾಗೂ ಪ್ರಸ್ತಾವಿತ ವಿಚಾರಣೆಯು ವಿಶ್ವವಿದ್ಯಾಲಯದ ಆಡಳಿತಾತ್ಮಕ ಚೌಕಟ್ಟಿನ ಅಡಿಯಲ್ಲಿ ಅನುಮತಿಸಬಹುದೇ ಎಂಬುದನ್ನು ನಿರ್ಧರಿಸಲು ವಿಷಯವನ್ನು ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಂಸ್ಥೆಯಾದ ಕಾರ್ಯಕಾರಿ ಮಂಡಳಿ (Executive Council) ಮುಂದೆ ಇಡುವುದಾಗಿ ಪ್ರೊಫೆಸರ್ ದೇವ್ ರಾವ್ ಹೇಳಿದ್ದರು.

BCI ಅಧ್ಯಕ್ಷರು ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ NALSAR ಪದವೀಧರ ವಿದ್ಯಾರ್ಥಿಗಳ ನೋಂದಣಿಯ ಮೇಲಿನ ನಿರ್ಬಂಧವನ್ನು ಕೌನ್ಸಿಲ್ ಹಿಂಪಡೆಯಿತು. ಬಳಿಕ ತಡರಾತ್ರಿ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ BCI ಅಧ್ಯಕ್ಷರು, ಆ ಬ್ಯಾಚ್ ವಿರುದ್ಧದ ಸಂಪೂರ್ಣ ಪ್ರಕ್ರಿಯೆಯನ್ನು ಕೈಬಿಡಲಾಗಿದೆ ಎಂದು ಘೋಷಿಸಿದರು.

ಈ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. BCI ಅಧ್ಯಕ್ಷರ ನಿರ್ದೇಶನಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಯಿತು. ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ, ಅಭಿಯಾನಕ್ಕೆ ಸಂಬಂಧಿಸಿದಂತೆ NALSAR ವಿದ್ಯಾರ್ಥಿಗಳು ಅಥವಾ ಬೋಧಕ ಸಿಬ್ಬಂದಿಯ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಬಾರದು ಎಂದು ನಿರ್ದೇಶಿಸಿತು.

ಸೆಪ್ಟೆಂಬರ್ 3ರಂದು ಕಾನೂನು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು BCIಗೆ ಯಾವುದೇ ಶಾಸನಬದ್ಧ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು. NALSAR ಪದವೀಧರರಿಗೆ ಸಂಬಂಧಿಸಿದಂತೆ BCI ಮಾಡಿದ್ದ ಸಂವಹನಗಳಿಗೆ ಕಾನೂನುಬದ್ಧ ಅಧಿಕಾರವಿಲ್ಲ ಎಂದೂ ನ್ಯಾಯಾಲಯ ಘೋಷಿಸಿತ್ತು.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಭುಯಾನ್ ಅವರು ತಮ್ಮ ಭಾಷಣದಲ್ಲಿ ವಿವಾದ ಅಥವಾ BCI ಕೈಗೊಂಡ ಕ್ರಮಗಳನ್ನು ನೇರವಾಗಿ ಉಲ್ಲೇಖಿಸದಿದ್ದರೂ NALSAR ವಿದ್ಯಾರ್ಥಿಗಳನ್ನು ಸಾರ್ವಜನಿಕವಾಗಿ ಶ್ಲಾಘಿಸಿದ್ದಾರೆ.

‘ಬೋಧಕ ಸಿಬ್ಬಂದಿಯೇ, ನೀವು ನಿಮ್ಮ ಕರ್ತವ್ಯಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದೀರಿ. ವಿಶ್ವವಿದ್ಯಾಲಯದ ಶಿಕ್ಷಕರಿಂದ ಏನನ್ನು ನಿರೀಕ್ಷಿಸಲಾಗುತ್ತದೆಯೋ ಅದನ್ನು ನೀವು ಮಾಡಿದ್ದೀರಿ. ಕುಲಪತಿಗಳನ್ನೂ ಇಲ್ಲಿ ಮರೆಯುವಂತಿಲ್ಲ. ನಾನು ಕುಲಾಧಿಪತಿಯಾಗಿದ್ದ ಅವಧಿಯಲ್ಲೇ ಪ್ರೊಫೆಸರ್ ರಾವ್ ಅವರು ಕುಲಪತಿಯಾಗಿ ನೇಮಕಗೊಂಡಿದ್ದರು. ಅವರು ವಿಶ್ವವಿದ್ಯಾಲಯವನ್ನು ಅತ್ಯುತ್ತಮವಾಗಿ ಮುನ್ನಡೆಸಿದ್ದಾರೆ. ಅವರು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ’ ಎಂದು ಭುಯಾನ್ ಹೇಳಿದರು.

ಜೂನ್ 2022ರಿಂದ ಜುಲೈ 2023ರವರೆಗೆ ತೆಲಂಗಾಣ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ಉಜ್ಜಲ್ ಭುಯಾನ್ ಅವರು NALSARನ ಪದನಿಮಿತ್ತ ಕುಲಾಧಿಪತಿಯಾಗಿ ಸೇವೆ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor