ಇಮಾಮ್, ಪುರೋಹಿತರಿಗೆ ನೀಡುತ್ತಿದ್ದ ನೆರವಿಗೆ ಬಂಗಾಳ ಸರ್ಕಾರ ಕತ್ತರಿ
ಸುವೇಂದು ಅಧಿಕಾರಿ Photo: x.com/ttindia
ಕೊಲ್ಕತ್ತಾ: ಮಸೀದಿಗಳ ಧಾರ್ಮಿಕ ಮುಖಂಡರು ಹಾಗೂ ಪುರೋಹಿತರಿಗೆ ನೀಡುತ್ತಿದ್ದ ಗೌರವ ಸಂಭಾವನೆ ಸೇರಿದಂತೆ ಧರ್ಮ ಆಧರಿತ ನೆರವನ್ನು ಬಂಗಾಳದ ಬಿಜೆಪಿ ಸರ್ಕಾರ ತಕ್ಷಣದಿಂದ ರದ್ದುಗೊಳಿಸಿದೆ. ಇಂಥ ಧಾರ್ಮಿಕ ಮುಖಂಡರಿಗೆ ನೆರವು ಒದಗಿಸುವುದು ಸರ್ಕಾರದ ಕೆಲಸವಲ್ಲ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದಾರೆ.
"ಇಮಾಮ್ ಗಳು ಮತ್ತು ಪುರೋಹಿತರಿಗೆ ನೀಡುತ್ತಿದ್ದ ನೆರವನ್ನು ಸ್ಥಗಿತಗೊಳಿಸಲಾಗುತ್ತಿದೆ. ಸ್ಥಗಿತಗೊಳಿಸಲಾಗುವ ಯೋಜನೆಗಳ ಪಟ್ಟಿಯನ್ನು ಒಳಗೊಂಡ ಹೊಸ ಅಧಿಸೂಚನೆಯನ್ನು ಶೀಘ್ರವೇ ಪ್ರಕಟಿಸಲಾಗುವುದು" ಎಂದು ನಗರಾಭಿವೃದ್ಧಿ ಮತ್ತು ಮಹಿಳಾ ಹಾಗೂ ಮಕ್ಕಳ ವ್ಯವಹಾರಗಳ ಖಾತೆ ಸಚಿವರಾದ ಅಗ್ನಿಮಿತ್ರ ಪಾಲ್ ಸಂಪುಟ ಸಭೆಯ ಬಳಿಕ ಪ್ರಕಟಿಸಿದರು. ಮುಂದಿನ ತಿಂಗಳಿನಿಂದಲೇ ವೇತನ ಸ್ಥಗಿತಗೊಳಿಸಲಾಗುತ್ತಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಈ ನೆರವನ್ನು ಆರಂಭಿಸಿತ್ತು ಹಾಗೂ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆ, ಅಲ್ಪಸಂಖ್ಯಾತರ ವ್ಯವಹಾರ ಹಾಗೂ ಮದರಸಾ ಶಿಕ್ಷಣ ಇಲಾಖೆ ಮೂಲಕ ನೀಡಲಾಗುತ್ತಿತ್ತು. "ಶಿಕ್ಷಣ ಮತ್ತು ಯುವಕರಿಗೆ ಉದ್ಯೋಗ ನೀಡುವುದು ನಮ್ಮ ಕರ್ತವ್ಯ. ಧರ್ಮ ಆಧರಿತ ಎಲ್ಲ ನೆರವನ್ನು ಸ್ಥಗಿತಗೊಳಿಸುತ್ತಿದ್ದೇವೆ. ಎಲ್ಲ ಸಮುದಾಯಗಳ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ ವಿವೇಕಾನಂದ ವಿದ್ಯಾರ್ಥಿ ವೇತನ ಆರಂಭಿಸಲಿದ್ದೇವೆ. ಬಂಗಾಳದಲ್ಲಿ ಇನ್ನು ಓಲೈಕೆ ರಾಜಕಾರಣ ಇರುವುದಿಲ್ಲ" ಎಂದು ಸುವೇಂದು ಹೇಳಿದರು.
ಈ ನಡೆಯನ್ನು ಬಿಜೆಪಿ ಸ್ವಾಗತಿಸಿದೆ. ಧರ್ಮ ಅಥವಾ ಸಮುದಾಯ ಆಧರಿತ ತಾರತಮ್ಯಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಸರ್ಕಾರ ಹಿಂದೂಗಳ ಪರವೂ ಅಲ್ಲ ಅಥವಾ ಮುಸ್ಲಿಮರ ಪರವೂ ಅಲ್ಲ. ಬಂಗಾಳದ ಜನರಿಗಾಗಿ ಕೆಲಸ ಮಾಡಲಿದೆ" ಎಂದು ಬಿಜೆಪಿ ಅಧ್ಯಕ್ಷ ಸಮೀಕ್ ಭಟ್ಟಾಚಾರ್ಯ ಹೇಳಿದ್ದಾರೆ.