×
Ad

Kerala | ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಂದೇಮಾತರಂ ಗೀತೆಯ ಪೂರ್ಣ ಆವೃತ್ತಿಯ ವಾಚನ: ಸಿಪಿಎಂ ಟೀಕೆ

Update: 2026-05-20 12:03 IST

 ವಿ ಡಿ ಸತೀಶನ್ (Photo credit: PTI)

ತಿರುವನಂತಪುರಂ: ಸೋಮವಾರ ನಡೆದ ಕೇರಳದ ನೂತನ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಂದೇಮಾತರಂನ ಪೂರ್ಣ ಆವೃತ್ತಿಯನ್ನು ವಾಚಿಸಿರುವುದನ್ನು ಮಂಗಳವಾರ ಸಿಪಿಎಂ ರಾಜ್ಯ ಕಾರ್ಯಕಾರಿಣಿ ಮಂಡಳಿ ಟೀಕಿಸಿದೆ.

ಮಂಗಳವಾರ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಎಂ,  ಪ್ರಮಾಣ ವಚನ ಸಮಾರಂಭದಲ್ಲಿ ವಂದೇಮಾತರಂ ಗೀತೆಯ ಪೂರ್ಣ ಆವೃತ್ತಿಯನ್ನು ವಾಚಿಸಲು ಕೈಗೊಂಡಿರುವ ನಿರ್ಧಾರ ಇದಕ್ಕೂ ಮುನ್ನ ಕಾಂಗ್ರೆಸ್ ಕಾರ್ಯಕಾರಿಣಿ ಮಂಡಳಿ ಅಳವಡಿಸಿಕೊಂಡಿದ್ದ ನಿಲುವಿಗೆ ವ್ಯತಿರಿಕ್ತವಾಗಿದೆ ಎಂದು ಆರೋಪಿಸಿದೆ. ಅಕ್ಟೋಬರ್ 30, 1937ರಂದು ನಡೆದಿದ್ದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ವಂದೇಮಾತರಂ ಗೀತೆಯ ಕೆಲವು ಭಾಗಗಳನ್ನು ಕೈಬಿಡುವ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಆದರೆ, ಕೇರಳ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಈ ಹಿಂದೆ ಕೈಬಿಡಲಾಗಿದ್ದ ಭಾಗಗಳನ್ನೂ ವಾಚಿಸಲಾಗಿದೆ ಎಂದೂ ಅದು ದೂರಿದೆ.

ವಂದೇಮಾತರಂ ಗೀತೆಯ ಕೆಲವು ಭಾಗಗಳು ಕೇವಲ ಒಂದು ನಿರ್ದಿಷ್ಟ ಧರ್ಮದ ನಂಬಿಕೆಯನ್ನು ಮಾತ್ರ ಪ್ರತಿಫಲಿಸುತ್ತವೆ. ಬಹುತ್ವ ಸಮಾಜದಲ್ಲಿ ಎಲ್ಲರ ಒಳಗೊಳ್ಳುವಿಕೆಯನ್ನು ಸಂರಕ್ಷಿಸುವ ಆಧಾರದಲ್ಲಿ ಆ ಭಾಗಗಳನ್ನು ಈ ಮುನ್ನ ಕೈಬಿಡಲಾಗಿತ್ತು. ಆದರೆ, ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೈಬಿಡಲಾಗಿದ್ದ ಭಾಗಗಳನ್ನೂ ವಾಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಆರೋಪಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹೀಗಿದ್ದೂ, ಅಲ್ಲಿನ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಂದೇಮಾತರಂ ಗೀತೆಯ ಪೂರ್ಣ ಆವೃತ್ತಿಯನ್ನು ವಾಚಿಸಿರಲಿಲ್ಲ ಎಂಬುದರತ್ತಲೂ ಪ್ರಕಟಣೆಯಲ್ಲಿ ಬೊಟ್ಟು ಮಾಡಲಾಗಿದೆ.

“ಅಲ್ಲಿ ವಾಚಿಸಿರದಿದ್ದ ಗೀತೆಯ ಭಾಗಗಳನ್ನೇ ಕೇರಳದಲ್ಲಿ ಪ್ರಸ್ತುತ ಪಡಿಸಲಾಗಿದೆ” ಎಂದು ಪ್ರಕಟಣೆಯಲ್ಲಿ ದೂರಲಾಗಿದೆ.

ಸಮಾಜದ ಬಹುತ್ವವನ್ನು ದುರ್ಬಲಗೊಳಿಸುವ ಯಾವುದೇ ಕ್ರಮ ಸರಕಾರದಿಂದ ಆಗಕೂಡದು. ಅದರಲ್ಲೂ ಜನರನ್ನು ಧರ್ಮಾಧಾರಿತವಾಗಿ ವಿಭಜಿಸುವ ಪ್ರಯತ್ನಗಳು ಹೆಚ್ಚು ಸಕ್ರಿಯವಾಗಿರುವಾಗ, ಜಾತ್ಯತೀತತೆಗೆ ಧಕ್ಕೆ ತರುವ ಕ್ರಮಗಳನ್ನು ಯಾರೊಬ್ಬರೂ ಕೈಗೊಳ್ಳಬಾರದು ಎಂದೂ ಸಿಪಿಎಂ ಕಿವಿಮಾತು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News