Uttar Pradesh Assembly Election 2027 | ಬಿಜೆಪಿ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಕಗ್ಗಂಟು
ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬೇಡಿಕೆ ಇಟ್ಟ ಮಿತ್ರಪಕ್ಷಗಳು
ಉ.ಪ್ರ ಸಿಎಂ ಆದಿತ್ಯನಾಥ್ । ಕೇಂದ್ರ ಗೃಹ ಸಚಿವ ಅಮಿತ್ ಶಾ (ಫೈಲ್ ಚಿತ್ರ: PTI)
ಲಖ್ನೋ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಆದರೆ ಈ ಬಾರಿ ಪಕ್ಷಕ್ಕೆ ಸ್ವಂತ ರಾಜಕೀಯ ಸವಾಲುಗಳ ಜೊತೆಗೆ ಮೈತ್ರಿಕೂಟದ ಪಕ್ಷಗಳ ಬೇಡಿಕೆಗಳನ್ನೂ ನಿಭಾಯಿಸುವ ಅನಿವಾರ್ಯತೆ ಎದುರಾಗಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮಿತ್ರಪಕ್ಷಗಳು ಒತ್ತಡ ಹೇರುತ್ತಿರುವುದು ಬಿಜೆಪಿಗೆ ಸೀಟು ಹಂಚಿಕೆಯಲ್ಲಿ ಹೊಸ ತಲೆನೋವಾಗಿ ಪರಿಣಮಿಸಿದೆ.
ಬಿಜೆಪಿಯ ನಾಲ್ಕು ಪ್ರಮುಖ ಮಿತ್ರಪಕ್ಷಗಳು ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬೇಡಿಕೆ ಮುಂದಿಟ್ಟಿವೆ ಎಂದು India Today ವರದಿ ಮಾಡಿದೆ.
ಅನುಪ್ರಿಯಾ ಪಟೇಲ್ ನೇತೃತ್ವದ ಅಪ್ನಾ ದಳ (ಎಸ್) ಪಕ್ಷ 52 ಕ್ಷೇತ್ರಗಳನ್ನು ಕೇಳುತ್ತಿದೆ. 2022ರಲ್ಲಿ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 12ರಲ್ಲಿ ಗೆದ್ದಿತ್ತು.
ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳ (RLD) ಪಕ್ಷ 25ರಿಂದ 35 ಕ್ಷೇತ್ರಗಳ ನಿರೀಕ್ಷೆಯಲ್ಲಿದೆ. ಓಂ ಪ್ರಕಾಶ್ ರಾಜ್ಭರ್ ನೇತೃತ್ವದ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (SBSP) ಪಕ್ಷ 42 ಕ್ಷೇತ್ರಗಳ ಬೇಡಿಕೆ ಮುಂದಿಟ್ಟಿದೆ. ಸಂಜಯ್ ನಿಷಾದ್ ನೇತೃತ್ವದ ನಿಷಾದ್ ಪಕ್ಷ 15ಕ್ಕೂ ಹೆಚ್ಚು ಕ್ಷೇತ್ರಗಳನ್ನು ಬಯಸುತ್ತಿದೆ.
2022ರ ಚುನಾವಣೆಯಲ್ಲಿ ಬಿಜೆಪಿ 403 ಕ್ಷೇತ್ರಗಳ ಪೈಕಿ 376ರಲ್ಲಿ ಸ್ಪರ್ಧಿಸಿತ್ತು. ಮಿತ್ರಪಕ್ಷಗಳಿಗೆ ಕೇವಲ 27 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿತ್ತು. ಆದರೆ 2027ರಲ್ಲಿ ಮಿತ್ರಪಕ್ಷಗಳಿಗೆ 60ರಿಂದ 80 ಕ್ಷೇತ್ರಗಳನ್ನು ನೀಡುವ ಸಾಧ್ಯತೆಯಿದೆ. ಇದರಿಂದ ಬಿಜೆಪಿಯ ಸ್ವಂತ ಟಿಕೆಟ್ ಆಕಾಂಕ್ಷಿಗಳು ಮತ್ತು ಹಾಲಿ ಶಾಸಕರನ್ನು ಸಮಾಧಾನಪಡಿಸುವುದು ಪಕ್ಷಕ್ಕೆ ಸವಾಲಾಗಲಿದೆ ಎಂದು India Today ವರದಿ ಮಾಡಿದೆ.
ಮತ್ತೊಂದೆಡೆ, 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಸ್ಥಾನಗಳು 62ರಿಂದ 33ಕ್ಕೆ ಇಳಿದಿರುವುದು ಮಿತ್ರಪಕ್ಷಗಳ ಬೇಡಿಕೆ ಹೆಚ್ಚಲು ಪ್ರಮುಖ ಕಾರಣವಾಗಿದೆ.
ನಿಷಾದ್ ಮತ್ತು SBSP ಪಕ್ಷಗಳು ಹಿಂದುಳಿದ ಸಮುದಾಯಗಳ ಮೀಸಲಾತಿ ವಿಚಾರವನ್ನೂ ಬಿಜೆಪಿಯ ಮುಂದೆ ಇಟ್ಟಿವೆ. ತಮ್ಮ ಸಮುದಾಯಗಳ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಎರಡೂ ಪಕ್ಷಗಳು ಆಸಕ್ತಿ ತೋರಿವೆ. ಇದರಿಂದ ಪೂರ್ವ ಉತ್ತರ ಪ್ರದೇಶದ ಕೆಲವು ಕ್ಷೇತ್ರಗಳ ವಿಚಾರದಲ್ಲಿ ಮಿತ್ರಪಕ್ಷಗಳ ನಡುವೆ ಪೈಪೋಟಿ ಉಂಟಾಗಿದೆ.
ನವೆಂಬರ್ 28 ಮತ್ತು 29ರಂದು ದಿಲ್ಲಿಯಲ್ಲಿ ನಡೆಯಲಿರುವ ಬಿಜೆಪಿ ಸಭೆಯಲ್ಲಿ ಸೀಟು ಹಂಚಿಕೆ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.