CJP ಪ್ರತಿಭಟನೆ | ಪ್ರತಿಯೊಂದು ಪ್ರತಿಭಟನೆಯನ್ನೂ ದೇಶವಿರೋಧಿ ಅನ್ನುವುದು ಕೇಳಿ ಸಾಕಾಗಿದೆ: ಕೇಂದ್ರಕ್ಕೆ ಸರಣಿ ಪ್ರಶ್ನೆಗಳನ್ನು ಕೇಳಿದ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ
“ತನ್ನ ಕೈಗಳನ್ನು ಕಟ್ಟಿ ಹಾಕದಿದ್ದರೆ, ಕೇಂದ್ರ ಸರಕಾರದ ವಿರುದ್ಧ ಯುದ್ಧವನ್ನೇ ಮಾಡುತ್ತಿದ್ದೆ” ಎಂಬ ಮೋದಿ ಹೇಳಿಕೆಯನ್ನು ನೆನಪಿಸಿದ ಮಾಜಿ IPS ಅಧಿಕಾರಿ
ಕೆ. ಅಣ್ಣಾಮಲೈ (Photo: PTI)
ಚೆನ್ನೈ: 12 ವರ್ಷಗಳಿಂದ ಅಧಿಕಾರದಲ್ಲಿರುವ ಕೇಂದ್ರ ಸರಕಾರ ತನ್ನ ಪ್ರಸ್ತುತತೆ ಉಳಿಸಿಕೊಳ್ಳಲು ಸದಾ ಒಂದು ಶತ್ರುವನ್ನು ನಿರ್ಮಿಸಿಕೊಳ್ಳುತ್ತಿದೆ ಎಂದು ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ.
ಎಸ್ಐಆರ್ ಹಾಗೂ ಚುನಾವಣಾ ಆಯೋಗದ ಹಗರಣದ ವಿರುದ್ಧದ ಪ್ರತಿಭಟನಾಕಾರರನ್ನು ಅನಿರ್ದಿಷ್ಟ ಅವಧಿಗೆ ಜೈಲಿನಲ್ಲಿಡಲಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರವನ್ನು ಟೀಕಿಸಿರುವ ಮಾಜಿ ಐಪಿಎಸ್ ಅಧಿಕಾರಿ, 2011ರಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ನ ಅಂದಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಸರಣಿ ಪ್ರಶ್ನೆಗಳನ್ನೆತ್ತಿದ್ದಾರೆ.
“2011ರಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು, ತಮ್ಮ ಕೈಗಳನ್ನು ಕಟ್ಟಿಹಾಕಿರದಿದ್ದರೆ ದಿಲ್ಲಿಗೆ ತೆರಳಿ ಕೇಂದ್ರ ಸರಕಾರದ ವಿರುದ್ಧವೇ ಯುದ್ಧ ಸಾರುತ್ತಿದ್ದೆ ಎಂದು ಹೇಳಿದ್ದರು. ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಶಾಂತಿಯುತ ಭ್ರಷ್ಟಾಚಾರ ವಿರೋಧಿ ಆಂದೋಲನದ ಮೇಲೆ ಪೊಲೀಸರು ನಡೆಸಿದ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಮೋದಿ ಈ ಮಾತು ಹೇಳಿದ್ದರು. ನನ್ನ ಅಭಿಪ್ರಾಯದಲ್ಲಿ, ಅಂದು ಮೋದಿ ಹೇಳಿದ್ದು ಸಂಪೂರ್ಣವಾಗಿ ಸರಿಯಾಗಿತ್ತು. ಆದರೆ ಇಂದಿನ ಪರಿಸ್ಥಿತಿ ಏನು? ಒಬ್ಬ ವ್ಯಕ್ತಿಯನ್ನು ಅನಿರ್ದಿಷ್ಟವಾಗಿ ಜೈಲಿಗೆ ಹಾಕಬಹುದು; ಅವರು ನೀಡುವ ಜಾಮೀನು ಶ್ಯೂರಿಟಿಗಳನ್ನೂ ತಿರಸ್ಕರಿಸಬಹುದು. ಅಷ್ಟೇ ಅಲ್ಲ, ಪ್ರಕರಣಗಳನ್ನು ವಿಚಾರಿಸುವ ಅಧಿಕಾರ ಹೊಂದಿರುವ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯೇ ನಿಮ್ಮ ವಿರುದ್ಧ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವ ಪರಿಸ್ಥಿತಿ ಇದೆ” ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಕಾನೂನು ಪ್ರಕ್ರಿಯೆ ಉಲ್ಲಂಘನೆಯಾಗುತ್ತಿದೆ ಎಂದು ಪ್ರಶ್ನಿಸಿದರೆ ಸಾಕು, ನಿಮಗೆ ಒಂದಿಲ್ಲೊಂದು ಹಣೆಪಟ್ಟಿ ಕಟ್ಟಲಾಗುತ್ತದೆ. ‘ವಿದೇಶಿ ಏಜೆಂಟ್’ ಎಂಬ ಆರೋಪವೂ ಕೇಳಿಬರುತ್ತದೆ. ಅದರ ಜತೆಗೆ ನಿರಂತರ ಟೀಕೆ ಮತ್ತು ದಾಳಿಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
“ಬಿಜೆಪಿಯ ಕೆಲವರಿಗೆ ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ನಾನು 2026ರ ಜೂನ್ 5ರಂದು ಬಿಜೆಪಿಯನ್ನು ತೊರೆದಿದ್ದೇನೆ. ಸಿಜೆಪಿ ಅನುಸರಿಸುತ್ತಿರುವ ಕೆಲವು ವಿಧಾನಗಳನ್ನು ನಾನು ಒಪ್ಪುವುದಿಲ್ಲ. ಅವರ ಕೆಲವು ನಿಲುವುಗಳು ತಪ್ಪುದಾರಿಗೆಳೆಯುವಂತಿವೆ ಎಂಬುದು ನನ್ನ ಅಭಿಪ್ರಾಯವೂ ಹೌದು. ಆದರೆ, ತಮಗೆ ಮುಖ್ಯವೆಂದು ಅನಿಸುವ ವಿಷಯವೊಂದರ ಬಗ್ಗೆ ವಿರೋಧ ವ್ಯಕ್ತಪಡಿಸಲು, ತಮ್ಮ ವಾದ ಮಂಡಿಸಲು ಅಥವಾ ಪ್ರತಿಭಟನೆ ನಡೆಸಲು ಅವರಿಗೆ ಖಂಡಿತವಾಗಿಯೂ ಹಕ್ಕಿದೆ” ಎಂದು ಹೇಳಿದ್ದಾರೆ.
ಈ ಪ್ರಶ್ನೆಗಳಿಗೆ ಕೇಂದ್ರ ಸರಕಾರವೇ ಉತ್ತರಿಸಬೇಕು ಎಂದು ಅಣ್ಣಾಮಲೈ ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
► ಅಣ್ಣಾಮಲೈ ಅವರ ಪ್ರಶ್ನೆಗಳು
1. ಪ್ರತಿಭಟನೆಗೆ ಅನುಮತಿ ಕೋರಿ ಸಿಜೆಪಿ ಪತ್ರ ನೀಡಿದ ಬಳಿಕ, ಗೃಹ ಸಚಿವಾಲಯದ ಆದೇಶದಂತೆ ಜಂತರ್ ಮಂತರ್ ಅನ್ನು ಪ್ರತಿಭಟನೆ ನಡೆಸುವ ಸ್ಥಳಗಳ ಪಟ್ಟಿಯಿಂದ ಏಕೆ ತೆಗೆದುಹಾಕಲಾಯಿತು?
2. ಯಾರನ್ನು ತಡೆಗಟ್ಟುವ ಬಂಧನದಲ್ಲಿ ಇರಿಸಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ದಿಲ್ಲಿ ಪೊಲೀಸರ ಎಸಿಪಿಗೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿ ನೀಡಿರುವುದು ಎಷ್ಟು ಸರಿ? ಈ ವ್ಯವಸ್ಥೆ ಇನ್ನೆಷ್ಟು ಕಾಲ ಮುಂದುವರಿಯಬೇಕು?
ಸಿಜೆಪಿ ವಿರುದ್ಧ ಪ್ರಕರಣ ದಾಖಲಿಸಿರುವ ದಿಲ್ಲಿ ಪೊಲೀಸರ ಅಧಿಕಾರಿಯೇ ಈ ಪ್ರಕರಣದ ವಿಚಾರಣೆಯಲ್ಲೂ ಅಧಿಕಾರ ಹೊಂದಿದ್ದಾರೆ. ಹೀಗಿರುವಾಗ ನ್ಯಾಯಯುತ ತೀರ್ಪು ಸಿಗಬಹುದೇ ಎಂಬುದನ್ನು ಊಹಿಸಬಹುದು.
3. ಅಕ್ಟೋಬರ್ 13ರಂದು ಜಂತರ್ ಮಂತರ್ ನಿಂದ ಬಂಧಿತರಾದವರ ಜಾಮೀನು ವಿಚಾರಣೆ ಅಕ್ಟೋಬರ್ 19ರಂದು ನಡೆಯಬೇಕಿತ್ತು. ಆದರೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ, ಅಂದರೆ ದಿಲ್ಲಿ ಪೊಲೀಸರ ಎಸಿಪಿ, ತಡವಾಗಿ ಬಂದು, ಬಳಿಕ ತಮ್ಮ ಜೀವಕ್ಕೆ ಬೆದರಿಕೆ ಇದೆ ಎಂದು ಹೇಳಿ ಪ್ರಕರಣದಿಂದ ಹಿಂದೆ ಸರಿದಿದ್ದೇಕೆ?
4. ಎಂಟು ಮಂದಿ ಶ್ಯೂರಿಟಿದಾರರ ಅರ್ಜಿಯನ್ನು ಏಕೆ ತಿರಸ್ಕರಿಸಲಾಯಿತು? ಶ್ಯೂರಿಟಿ ನೀಡಲು ಬಂದ ವ್ಯಕ್ತಿಯನ್ನೇ ದಂಡಾಧಿಕಾರಿ ವಿಚಾರಣೆಗೊಳಪಡಿಸಿದ್ದೇಕೆ?
5. ನೀಟ್ ಪ್ರತಿಭಟನೆಯ ಸಂದರ್ಭದಲ್ಲಿ ದಿಲ್ಲಿ ಪೊಲೀಸರು ಪೆಲೆಟ್ ಗನ್ ಬಳಸಿದ ಬಗ್ಗೆ ಅಥವಾ ಪ್ರತಿಭಟನಾಕಾರರ ವಿರುದ್ಧ ನಿಯಮ ಉಲ್ಲಂಘಿಸಿದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ?
“ಹಿಂದಿನ ಕಾಂಗ್ರೆಸ್ ಮತ್ತು ಆಪ್ ಸರಕಾರಗಳ ಅವಧಿಯಲ್ಲಿ ಬಿಜೆಪಿ ಕಾರ್ಯಕರ್ತರು ಬಾಂಡ್ ನ ಷರತ್ತುಗಳನ್ನು ಉಲ್ಲಂಘಿಸಿರಲಿಲ್ಲವೇ? ಬ್ಯಾರಿಕೇಡ್ ಗಳನ್ನು ಹಾರಿ ದಾಟುವುದು ಅಥವಾ ಪೊಲೀಸರ ಆದೇಶ ಪಾಲಿಸದಿರುವುದು ಆಗ ನಡೆದಿರಲಿಲ್ಲವೇ? ಹಾಗೆ ಮಾಡಿದವರ ವಿರುದ್ಧ ಆಗ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿತ್ತೇ? ಖಂಡಿತವಾಗಿಯೂ ಇಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
“ಇತ್ತೀಚೆಗೆ ದಸರಾ ಆಚರಣೆಯ ವೇಳೆ ಜಿರಳೆಯ ಪ್ರತಿಕೃತಿ ದಹಿಸಿರುವುದನ್ನು ನೋಡಿದೆ. ಇದಕ್ಕೆ ರಾಷ್ಟ್ರಮಟ್ಟದಲ್ಲಿ ಇಷ್ಟೊಂದು ಪ್ರಚಾರ ಸಿಗುತ್ತಿರುವುದೇಕೆ ಎಂದು ಪರಿಶೀಲಿಸಿದಾಗ, ಇದರ ಹಿಂದೆ ಬಿಜೆಪಿ ಶಾಸಕ ಅಶೋಕ್ ಗೋಯಲ್ ಇದ್ದಾರೆ ಎಂಬುದು ತಿಳಿಯಿತು. ಹಾಗಾದರೆ ನನ್ನ ಪ್ರಶ್ನೆ: ಬಿಜೆಪಿ ಸಿಜೆಪಿಯನ್ನು ವಿರೋಧಿಸುತ್ತಿದೆಯೇ ಅಥವಾ ಅದಕ್ಕೆ ಉಚಿತ ಪ್ರಚಾರ ನೀಡುತ್ತಿದೆಯೇ? ವಿರೋಧ ಪಕ್ಷಗಳ ಮತಗಳನ್ನು ವಿಭಜಿಸಿ, ಸಿಜೆಪಿಯನ್ನು ದೊಡ್ಡ ರಾಜಕೀಯ ಶಕ್ತಿಯನ್ನಾಗಿ ಮಾಡುವ ಉದ್ದೇಶ ಬಿಜೆಪಿಗಿದೆಯೇ? ಸಿಜೆಪಿಗೆ ಹಣ ಕೊಟ್ಟು ಪ್ರಚಾರ ತಂಡವನ್ನು ನೇಮಿಸಿಕೊಂಡಿದ್ದರೂ ಇಷ್ಟೊಂದು ಪ್ರಚಾರ ಸಿಗುತ್ತಿರಲಿಲ್ಲವೇನೋ!” ಎಂದು ಕುಟುಕಿದ್ದಾರೆ.
“ಕೊನೆಯದಾಗಿ, ಎಲ್ಲವನ್ನೂ ‘ದೇಶವಿರೋಧಿ’ ಎಂದು ಕರೆಯುವ ಪ್ರವೃತ್ತಿ ನಿಲ್ಲಬೇಕು. FCRA ಕೇಂದ್ರ ಗೃಹ ಸಚಿವಾಲಯದ ನಿಯಂತ್ರಣದಲ್ಲಿದೆ. ದೇಶದ ತನಿಖಾ ಸಂಸ್ಥೆಗಳು ವಿರೋಧ ಪಕ್ಷಗಳಿಗೆ ವರದಿ ಮಾಡುವುದಿಲ್ಲ. ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿರುವ ಭಾರತೀಯರ ಚಟುವಟಿಕೆಗಳ ಮೇಲೆ ನಿಗಾ ಇಡಲು ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಲ್ಲೂ ಅಗತ್ಯ ವ್ಯವಸ್ಥೆಗಳಿವೆ. ಹೀಗಿರುವಾಗ, ಕೇಂದ್ರ ಸರಕಾರದ ವಿರುದ್ಧ ನಡೆಯುವ ಪ್ರತಿಯೊಂದು ಪ್ರತಿಭಟನೆ ಅಥವಾ ಟೀಕೆಯನ್ನೂ ದೇಶವಿರೋಧಿ ಎಂದು ಕರೆಯುವುದು, ಪ್ರತಿಭಟನೆಯ ಹಿಂದೆ ವಿದೇಶಿ ಶಕ್ತಿಗಳ ಹಣವಿದೆ ಎಂದು ಆರೋಪಿಸುವುದು ಬೇಸರದ ಸಂಗತಿ. ಇಂತಹ ಆರೋಪಗಳನ್ನು ಕೇಳಿ ಕೇಳಿ ಸಾಕಾಗಿದೆ. ದಿಲ್ಲಿಯಲ್ಲಿ ಕೇಂದ್ರ ಸರಕಾರ 12 ವರ್ಷಕ್ಕೂ ಹೆಚ್ಚು ಕಾಲ ಅಧಿಕಾರದಲ್ಲಿದೆ. ಆದರೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸದಾ ಯಾರನ್ನಾದರೂ ಶತ್ರುವೆಂದು ಬಿಂಬಿಸುತ್ತಿದೆ. ಇದು ನಿಜಕ್ಕೂ ವಿಷಾದನೀಯ” ಎಂದು ಅವರು ಹೇಳಿದ್ದಾರೆ.