ಕೇರಳಂ ಮೂಲದ ಇತಿಹಾಸಕಾರ ಮಹಮೂದ್ ಕೂರಿಯಾ ಅವರಿಗೆ 1.26 ಕೋಟಿ ರೂ. ಮೌಲ್ಯದ 'ಫಿಲಿಪ್ ಲೆವರ್ ಹುಮ್ ಪ್ರಶಸ್ತಿ'
ಹಿಂದೂ ಮಹಾಸಾಗರದ ಇತಿಹಾಸ ಕುರಿತ ಸಂಶೋಧನೆಗೆ ಜಾಗತಿಕ ಮನ್ನಣೆ
Photo Credit: timelinedaily
ಹೊಸದಿಲ್ಲಿ: ಎಡಿನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ ಮೂಲದ ಇತಿಹಾಸಕಾರ ಡಾ. ಮಹಮೂದ್ ಕೂರಿಯಾ ಅವರು 2026ನೇ ಸಾಲಿನ ಪ್ರತಿಷ್ಠಿತ ಫಿಲಿಪ್ ಲೆವರ್ ಹುಮ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 1 ಲಕ್ಷ ಪೌಂಡ್ (ಸುಮಾರು 1.26 ಕೋಟಿ ರೂ.) ಮೊತ್ತದ ಅನುದಾನವನ್ನು ಒಳಗೊಂಡಿದೆ ಎಂದು timelinedaily. com ವರದಿ ಮಾಡಿದೆ.
ಲೆವರ್ ಹುಮ್ ಟ್ರಸ್ಟ್ ಪ್ರತಿವರ್ಷ ನೀಡುವ ಈ ಪ್ರಶಸ್ತಿಯು ವೃತ್ತಿಜೀವನದ ಆರಂಭಿಕ ಹಂತದಲ್ಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿರುವ ಹಾಗೂ ಭವಿಷ್ಯದಲ್ಲಿ ಮಹತ್ವದ ಸಂಶೋಧನೆ ನಡೆಸುವ ಸಾಮರ್ಥ್ಯ ಹೊಂದಿರುವ ವಿದ್ವಾಂಸರನ್ನು ಗುರುತಿಸುತ್ತದೆ. ಯುನೈಟೆಡ್ ಕಿಂಗ್ಡಮ್ ನ ಪ್ರತಿಷ್ಠಿತ ಶೈಕ್ಷಣಿಕ ಗೌರವಗಳಲ್ಲಿ ಒಂದಾಗಿರುವ ಈ ಪ್ರಶಸ್ತಿಗೆ ಟ್ರಸ್ಟ್ನ ಸ್ಥಾಪಕ ವಿಲಿಯಂ ಲೆವರ್ ಅವರ ಮೊಮ್ಮಗ ಥರ್ಡ್ ವಿಸ್ಕೌಂಟ್ ಲೆವರ್ಹುಮ್ ಅವರ ಹೆಸರಿಡಲಾಗಿದೆ. ಈ ವರ್ಷ ಪ್ರಶಸ್ತಿಯ 25ನೇ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ.
ಈ ಬಾರಿ 400ಕ್ಕೂ ಹೆಚ್ಚು ನಾಮನಿರ್ದೇಶನಗಳ ಪೈಕಿ ಆರು ವಿಷಯ ಕ್ಷೇತ್ರಗಳಲ್ಲಿ ಒಟ್ಟು 30 ವಿದ್ವಾಂಸರನ್ನು ಆಯ್ಕೆ ಮಾಡಲಾಗಿದೆ. ಜೈವಿಕ ವಿಜ್ಞಾನ, ಇತಿಹಾಸ, ಕಾನೂನು, ಗಣಿತ ಮತ್ತು ಅಂಕಿಅಂಶ, ತತ್ವಶಾಸ್ತ್ರ ಮತ್ತು ದೇವತಾಶಾಸ್ತ್ರ ಹಾಗೂ ಸಮಾಜಶಾಸ್ತ್ರ ಮತ್ತು ಸಾಮಾಜಿಕ ನೀತಿ ಕ್ಷೇತ್ರಗಳು ಇದರಲ್ಲಿ ಸೇರಿವೆ.
ಎಡಿನ್ಬರ್ಗ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಹಿಸ್ಟರಿ, ಕ್ಲಾಸಿಕ್ಸ್ ಅಂಡ್ ಆರ್ಕಿಯಾಲಜಿಯಲ್ಲಿ ಹಿಂದೂ ಮಹಾಸಾಗರ ವಲಯದ ಇತಿಹಾಸದ ಉಪನ್ಯಾಸಕರಾಗಿರುವ ಡಾ. ಕೂರಿಯಾ, ಇತಿಹಾಸ ವಿಭಾಗದಲ್ಲಿ ಪ್ರಶಸ್ತಿ ಪಡೆದ ಐವರು ವಿದ್ವಾಂಸರಲ್ಲಿ ಒಬ್ಬರಾಗಿದ್ದಾರೆ. ಪೂರ್ವ-ಆಧುನಿಕ ಹಿಂದೂ ಮಹಾಸಾಗರದ ಇತಿಹಾಸ, ಕಾನೂನು ವ್ಯವಸ್ಥೆಗಳ ಜಾಗತಿಕ ವಿಕಾಸ, ಇಸ್ಲಾಮಿಕ್ ಬೌದ್ಧಿಕ ಪರಂಪರೆಗಳು, ಮಾತೃವಂಶೀಯ ಸಮುದಾಯಗಳು, ಆಫ್ರೋ-ಏಷ್ಯನ್ ಐತಿಹಾಸಿಕ ಸಂಪರ್ಕಗಳು ಮತ್ತು ಹಸ್ತಪ್ರತಿ ಸಂಸ್ಕೃತಿಗಳ ಕುರಿತ ಅವರ ಸಂಶೋಧನೆಗೆ ಈ ಗೌರವ ಸಂದಿದೆ.
ಕೇರಳಂನ ಮಲಪ್ಪುರಂನಲ್ಲಿ ಜನಿಸಿ ಬೆಳೆದ ಡಾ. ಕೂರಿಯಾ ಅವರು ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾಲಯ ಮತ್ತು ಕಾಲಿಕಟ್ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆದರು. ಬಳಿಕ ಹೊಸದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (JNU) ಪ್ರಾಚೀನ ಭಾರತೀಯ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇತಿಹಾಸ ಮತ್ತು ಭೂದೃಶ್ಯ ಪುರಾತತ್ವಶಾಸ್ತ್ರಕ್ಕೆ ಸಂಬಂಧಿಸಿದ ಎಂ.ಫಿಲ್ ಪದವಿಯನ್ನೂ ಪೂರ್ಣಗೊಳಿಸಿದರು.
ದಿಲ್ಲಿಯಲ್ಲಿ ಅಧ್ಯಯನ ನಡೆಸುತ್ತಿದ್ದಾಗ ಹಿಂದೂ ಮಹಾಸಾಗರದ ಇತಿಹಾಸದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಅವರು, ಬಳಿಕ ನೆದರ್ಲೆಂಡ್ಸ್ ಗೆ ತೆರಳಿದರು. 2016ರಲ್ಲಿ ಲೈಡೆನ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಫಾರ್ ಹಿಸ್ಟರಿಯಲ್ಲಿ ಜಾಗತಿಕ ಇತಿಹಾಸದಲ್ಲಿ ಪಿಎಚ್ಡಿ ಪೂರ್ಣಗೊಳಿಸಿದರು.
2023ರ ಡಿಸೆಂಬರ್ ನಲ್ಲಿ ಎಡಿನ್ಬರ್ಗ್ ವಿಶ್ವವಿದ್ಯಾಲಯದ ಅಧ್ಯಾಪಕ ವೃಂದಕ್ಕೆ ಸೇರುವ ಮೊದಲು ನಾರ್ವೆಯ ಬರ್ಗೆನ್ ವಿಶ್ವವಿದ್ಯಾಲಯ, ಭಾರತದ ಅಶೋಕ ವಿಶ್ವವಿದ್ಯಾಲಯ ಮತ್ತು ಇಂಡೋನೇಷ್ಯಾದ ಜಕಾರ್ತದಲ್ಲಿರುವ ಸ್ಟೇಟ್ ಇಸ್ಲಾಮಿಕ್ ವಿಶ್ವವಿದ್ಯಾಲಯ ಸಯಾರಿಫ್ ಹಿದಾಯತುಲ್ಲಾ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಶೈಕ್ಷಣಿಕ ಹುದ್ದೆಗಳನ್ನು ನಿರ್ವಹಿಸಿದ್ದರು.
ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಏಷ್ಯನ್ ಸ್ಟಡೀಸ್ (IIAS), ಆಫ್ರಿಕನ್ ಸ್ಟಡೀಸ್ ಸೆಂಟರ್ ಲೈಡೆನ್ (ASCL) ಮತ್ತು ಮೊರಾಕೊದಲ್ಲಿರುವ ನೆದರ್ಲ್ಯಾಂಡ್ಸ್ ಇನ್ಸ್ಟಿಟ್ಯೂಟ್ (NIMAR) ಸೇರಿದಂತೆ ವಿವಿಧ ಸಂಸ್ಥೆಗಳೊಂದಿಗೆ ಸಂಶೋಧನೆ ನಡೆಸಿದ್ದರು. ಡಚ್ ರಿಸರ್ಚ್ ಕೌನ್ಸಿಲ್ (NWO) ಮತ್ತು ಸೋಶಿಯಲ್ ಸೈನ್ಸ್ ರಿಸರ್ಚ್ ಕೌನ್ಸಿಲ್ (SSRC) ನೀಡಿದ ಸ್ಪರ್ಧಾತ್ಮಕ ಸಂಶೋಧನಾ ಅನುದಾನಗಳೂ ಅವರ ಅಧ್ಯಯನಕ್ಕೆ ಬೆಂಬಲ ನೀಡಿದ್ದವು.
ಇನ್ಫೋಸಿಸ್ ಪ್ರಶಸ್ತಿಗೂ ಭಾಜನ
2024ರ ನವೆಂಬರ್ನಲ್ಲಿ ಬೆಂಗಳೂರಿನ ಇನ್ಫೋಸಿಸ್ ಸೈನ್ಸ್ ಫೌಂಡೇಶನ್ನಿಂದ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನ ವಿಭಾಗದ ಇನ್ಫೋಸಿಸ್ ಪ್ರಶಸ್ತಿಗೂ ಡಾ. ಕೂರಿಯಾ ಭಾಜನರಾಗಿದ್ದರು. ಹಿಂದೂ ಮಹಾಸಾಗರ ವಲಯದಲ್ಲಿ ಇಸ್ಲಾಂ ಧರ್ಮದ ಐತಿಹಾಸಿಕ ಬೆಳವಣಿಗೆ ಕುರಿತ ಅವರ ಸಂಶೋಧನೆಗೆ ಈ ಪ್ರಶಸ್ತಿ ಸಂದಿತ್ತು. ಹಿಂದೂ ಮಹಾಸಾಗರದ ಕರಾವಳಿ ಪ್ರದೇಶಗಳ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಇಸ್ಲಾಮಿಕ್ ಕಾನೂನು ವಹಿಸಿದ ಪಾತ್ರದ ಅಧ್ಯಯನವನ್ನು ಈ ಪ್ರಶಸ್ತಿ ಗುರುತಿಸಿತ್ತು. ಐತಿಹಾಸಿಕ ಕೇರಳಂನ ಮೇಲೆಯೂ ಅವರು ವಿಶೇಷ ಗಮನ ಹರಿಸಿದ್ದರು.
ಹೊಸ ಸಂಶೋಧನೆಗೆ ಅನುದಾನ
ಲೆವರ್ಹುಮ್ ಟ್ರಸ್ಟ್ ನೀಡುವ 1 ಲಕ್ಷ ಪೌಂಡ್ ಅನುದಾನವನ್ನು ಸಂಶೋಧನಾ ಕಾರ್ಯಗಳಿಗೆ ಬಳಸಿಕೊಳ್ಳಲು ಡಾ. ಕೂರಿಯಾ ಉದ್ದೇಶಿಸಿದ್ದಾರೆ. ಹಿಂದೂ ಮಹಾಸಾಗರದಾದ್ಯಂತ ಇರುವ ಮಾತೃವಂಶೀಯ ಮುಸ್ಲಿಂ ಸಮುದಾಯಗಳ ಕುರಿತ ಪುಸ್ತಕವನ್ನು ಪೂರ್ಣಗೊಳಿಸುವುದು ಹಾಗೂ ಮಧ್ಯಕಾಲೀನ ಏಷ್ಯಾದಲ್ಲಿ ಆಫ್ರಿಕನ್ ನ್ಯಾಯಶಾಸ್ತ್ರಜ್ಞರು ಮತ್ತು ಬುದ್ಧಿಜೀವಿಗಳ ಕುರಿತ ಸಂಶೋಧನೆಯನ್ನು ಮುಂದುವರಿಸುವುದು ಅವರ ಪ್ರಮುಖ ಯೋಜನೆಗಳಾಗಿವೆ.
ಈ ಅನುದಾನವು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಪ್ರಮುಖ ದಾಖಲೆ ಸಂಗ್ರಹಾಗಾರಗಳಿಗೆ ಭೇಟಿ ನೀಡಿ ಸಂಶೋಧನೆ ನಡೆಸಲು ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.
“ಏಷ್ಯಾದಲ್ಲಿ ಆಫ್ರಿಕನ್ ಬುದ್ಧಿಜೀವಿಗಳ ಕುರಿತ ಯೋಜನೆಗಾಗಿ ಭಾರತ, ಮಾಲ್ಡೀವ್ಸ್, ಶ್ರೀಲಂಕಾ ಮತ್ತು ಇಂಡೋನೇಷ್ಯಾದಲ್ಲಿರುವ ಸಂಬಂಧಿತ ಸ್ಥಳಗಳಿಗೆ ಭೇಟಿ ನೀಡಲು ಯೋಜಿಸಿದ್ದೇನೆ. ಈ ಪ್ರದೇಶಗಳಲ್ಲಿರುವ ಆಫ್ರಿಕನ್ ಮೂಲದ ಸಮುದಾಯಗಳು ತಮ್ಮ ಐತಿಹಾಸಿಕ ಪರಂಪರೆಯೊಂದಿಗೆ ಹೇಗೆ ತೊಡಗಿಸಿಕೊಂಡಿವೆ ಎಂಬುದನ್ನು ಅಧ್ಯಯನ ಮಾಡಲಿದ್ದೇನೆ” ಎಂದು ಅವರು ಹೇಳಿದ್ದಾರೆ.
ಹಿಂದೂ ಮಹಾಸಾಗರ ವಲಯದ ಡಿಜಿಟಲೀಕರಿಸಿದ ಹಸ್ತಪ್ರತಿ ಸಂಗ್ರಹಗಳ ಕುರಿತ ದೀರ್ಘಕಾಲೀನ ಯೋಜನೆಗೂ ಈ ಪ್ರವಾಸಗಳು ನೆರವಾಗಲಿವೆ ಎಂದು ಅವರು ತಿಳಿಸಿದ್ದಾರೆ. ಆಯಾ ಪ್ರದೇಶಗಳ ಸಂಸ್ಥೆಗಳು ಮತ್ತು ವಿದ್ವಾಂಸರೊಂದಿಗೆ ನೇರ ಸಂಪರ್ಕ ಬೆಳೆಸುವುದರಿಂದ ಸಂಶೋಧನಾ ಸಹಯೋಗದ ಜಾಲವನ್ನು ವಿಸ್ತರಿಸಬಹುದು. ಕೀನ್ಯಾ ಮತ್ತು ತಂಝಾನಿಯಾಗಳಿಗೂ ಹೆಚ್ಚುವರಿ ಪ್ರವಾಸ ಕೈಗೊಂಡು ಸಹಯೋಗವನ್ನು ಬಲಪಡಿಸುವುದರ ಜತೆಗೆ ಬ್ರಿಟನ್ ಮತ್ತು ಯುರೋಪ್ ಹೊರತಾದ ಪ್ರದೇಶಗಳಲ್ಲಿ ಸಂಶೋಧನಾ ಅನುದಾನ ಪಡೆಯುವ ಅವಕಾಶಗಳನ್ನು ಅನ್ವೇಷಿಸಲು ಸಾಧ್ಯವಾಗಲಿದೆ ಎಂದು ಅವರು ವಿವರಿಸಿದ್ದಾರೆ.
ಲೆವರ್ಹುಮ್ ಟ್ರಸ್ಟ್ ನ ನಿರ್ದೇಶಕಿ ಪ್ರೊಫೆಸರ್ ಅನ್ನಾ ವಿಗ್ನೋಲ್ಸ್ ಅವರು ಈ ವರ್ಷದ ಪ್ರಶಸ್ತಿ ವಿಜೇತರ ಗುಣಮಟ್ಟವನ್ನು ಶ್ಲಾಘಿಸಿದ್ದಾರೆ. 400ಕ್ಕೂ ಹೆಚ್ಚು ಉನ್ನತ ಮಟ್ಟದ ನಾಮನಿರ್ದೇಶನಗಳ ಪೈಕಿ 30 ವಿದ್ವಾಂಸರನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸ ಎಂದು ಅವರು ಹೇಳಿದ್ದಾರೆ.
ಎಡಿನ್ಬರ್ಗ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಹಿಸ್ಟರಿ, ಕ್ಲಾಸಿಕ್ಸ್ ಅಂಡ್ ಆರ್ಕಿಯಾಲಜಿ ಕೂಡ ಡಾ. ಕೂರಿಯಾ ಅವರಿಗೆ ಅಭಿನಂದನೆ ಸಲ್ಲಿಸಿದೆ. ಜಾಗತಿಕ, ಕಾನೂನು ಮತ್ತು ಕಡಲ ಇತಿಹಾಸದ ಕುರಿತ ತಿಳಿವಳಿಕೆಯನ್ನು ವಿಸ್ತರಿಸುವ ಅವರ ಸಂಶೋಧನಾ ಕಾರ್ಯಗಳು ಮತ್ತಷ್ಟು ಯಶಸ್ಸು ಕಾಣಲಿ ಎಂದು ಹಾರೈಸಿದೆ.
ಸೌಜನ್ಯ: timelinedaily.com