Manipur | ಮೂವರು ಮೈತೈಗಳ ಹತ್ಯೆ ಪ್ರಕರಣ; ಪ್ರತಿಭಟನೆಯಿಂದ ಜನಜೀವನ ಅಸ್ತವ್ಯಸ್ತ
ಸಾಂದರ್ಭಿಕ ಚಿತ್ರ| Photo Credit: PTI
ಇಂಫಾಲ, ಅ. 21: ಮಣಿಪುರದಲ್ಲಿ ಇತ್ತೀಚೆಗೆ ಮೂವರು ಮೈತೈ ವ್ಯಕ್ತಿಗಳ ಹತ್ಯೆಯನ್ನು ಖಂಡಿಸಿ ಬುಧವಾರ ಪ್ರತಿಭಟನೆ ನಡೆಸುತ್ತಿದ್ದ ಬೃಹತ್ ಸಂಖ್ಯೆಯ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ.
ಇಲ್ಲಿನ ಕ್ರೀಡಾ ಸಂಕೀರ್ಣದಲ್ಲಿ ಮುಖ್ಯಮಂತ್ರಿ ವೈ. ಖೇಮ್ಚಂದ್ ಸಿಂಗ್ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಈ ಘರ್ಷಣೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಮತ್ತು ರಾಜ್ಯ ಗೃಹ ಸಚಿವ ಗೋವಿಂದಾಸ್ ಕೊಂಥೌಜಾಮ್ ಅವರು ಖುಮಾನ್ ಲಂಪಾಕ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ಮೊದಲ ಮಣಿಪುರ ಪೂಮ್ಸೆ ಟೇಕ್ವಾಂಡೊ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಮಹಿಳಾ ಪ್ರತಿಭಟನಕಾರರು ಕ್ರೀಡಾ ಸಂಕೀರ್ಣಕ್ಕೆ ನುಗ್ಗಲು ಪ್ರಯತ್ನಿಸಿದರು.
ನಿರಪರಾಧಿಗಳ ಹತ್ಯೆ ನಡೆಯುತ್ತಿರುವಾಗ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ನಿರ್ಲಕ್ಷಿಸಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಕ್ರೀಡಾಕೂಟದಲ್ಲಿ ಭಾಗವಹಿಸಬಾರದಿತ್ತು ಎಂದು ಪ್ರತಿಭಟನಕಾರರು ಪ್ರತಿಪಾದಿಸಿದರು.
ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಹಲವು ಸುತ್ತು ಅಶ್ರುವಾಯು ಸೆಲ್ಗಳನ್ನು ಸಿಡಿಸಿದರು. ಇದರಿಂದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇಂಫಾಲ ಪೂರ್ವ ಜಿಲ್ಲೆಯ ಖಬೀಸೋಯ್ ನಲ್ಲಿ ಹತ್ಯೆಗಳನ್ನು ಖಂಡಿಸಿ ನಡೆದ ಮತ್ತೊಂದು ಪ್ರತಿಭಟನೆಯಲ್ಲಿ ಪ್ರತಿಭಟನಕಾರರು ರಾಜ್ಯಸಭಾ ಸಂಸದೆ ಎ. ಶಾರದಾ ದೇವಿ ಮತ್ತು ಕೊಂಥೌಜಾಮ್ ಅವರ ಪ್ರತಿಕೃತಿಗಳನ್ನು ದಹಿಸಿದರು.
ಹತ್ಯೆಗಳ ವಿರುದ್ಧ ‘ನೇಟಿವ್ ಪೀಪಲ್ ಕಮಿಟಿ ಮಣಿಪುರ’ ಮಂಗಳವಾರ ಮಧ್ಯರಾತ್ರಿಯಿಂದ ಕರೆ ನೀಡಿರುವ 48 ಗಂಟೆಗಳ ಬಂದ್ನಿಂದಾಗಿ ಮಾರುಕಟ್ಟೆಗಳು ಮುಚ್ಚಿದ್ದವು. ವಾಹನಗಳು ರಸ್ತೆಗೆ ಇಳಿಯದ ಕಾರಣ ಇಂಫಾಲ ಕಣಿವೆಯ ಎಲ್ಲ ಐದು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಯಿತು.